More

    ಕೃಷಿ ಚಟುವಟಿಕೆಗಳು ಚುರುಕು

    ಕಾರವಾರ: ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆಯಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ.

    ಜಿಲ್ಲೆಯಲ್ಲಿ ಜನವರಿಯಿಂದ ಮೇ ವರೆಗೆ 104 ಮಿಲಿ ಮೀಟರ್ ವಾಡಿಕೆ ಮಳೆ ಇದೆ. ಇದುವರೆಗೆ 97 ಮಿಲಿ ಮೀಟರ್ ಮಳೆಯಾಗಿದೆ.

    ಇದರಿಂದ ಮುಂಡಗೋಡ ಹಾಗೂ ಹಳಿಯಾಳದಲ್ಲಿ ಕೂರಿಗೆ ಬಿತ್ತನೆ ನಡೆದಿದೆ. ಉಳಿದ ಕಡೆಗೆ ಇನ್ನೂ ಗೊಬ್ಬರ ದಾಸ್ತಾನು ಮುಂತಾದ ತಯಾರಿಯಷ್ಟೇ ನಡೆದಿದೆ.

    71 ಸಾವಿರ ಹೆಕ್ಟೇರ್ ಗುರಿ: ಮುಂಡಗೋಡ ಹಾಗೂ ಹಳಿಯಾಳ ಸೇರಿ ಇದುವರೆಗೆ 3768 ಹೆಕ್ಟೇರ್ ಭತ್ತ ಹಾಗೂ 3568 ಹೆಕ್ಟೇರ್ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗಿದೆ. ಇದುವರೆಗೂ 7330 ಹೆಕ್ಟೇರ್ ಮಾತ್ರ ಬಿತ್ತನೆ ನಡೆದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 71 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಸದ್ಯ ಜಿಲ್ಲೆಯಲ್ಲಿ ಒಟ್ಟಾರೆ 7800 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇಡಲಾಗಿದ್ದು, ಇದುವರೆಗ 500 ಕ್ವಿಂಟಾಲ್​ಗಳಷ್ಟು ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. 59,000 ಮೆಟ್ರಿಕ್ ಟನ್​ಗಳಷ್ಟು ರಾಸಾಯನಿಕ ಗೊಬ್ಬರ ದಾಸ್ತಾನಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೆಳೆ ವಿಮೆಗೆ ನೋಂದಣಿ: 2020-21ನೇ ಸಾಲಿಗೆ ಇದುವರೆಗೆ 61 ಸಾವಿರ ರೈತರು ನೋಂದಣಿ ಮಾಡಿದ್ದಾರೆ. ಕಳೆದ ಬಾರಿ ಅಂದರೆ 2018-19ರಲ್ಲಿ ಒಟ್ಟಾರೆ 26,776 ರೈತರಿಗೆ ಬೆಳೆ ವಿಮೆಯ ಪರಿಹಾರ ದೊರೆಯಲಿದೆ ಎಂದು ನಿಗದಿ ಮಾಡಲಾಗಿದ್ದು, ಅವರೆಲ್ಲರಿಗೂ ಪರಿಹಾರ ತಲುಪಿದೆ. ಒಟ್ಟಾರೆ 19.85 ಕೋಟಿ ರೂ.ಪರಿಹಾರ ಬಂದಿದೆ. ಆದರೆ, 2019-20 ನೇ ಸಾಲಿಗೆ ಬೆಳೆ ವಿಮೆ ಪರಿಹಾರ ಬಂದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಉತ್ತಮ ಮಳೆಯ ನಿರೀಕ್ಷೆ: ಕಳೆದ ಬಾರಿ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತ ಜಾಸ್ತಿ ಮಳೆಯಾಗಿತ್ತು. ಬೇಸಿಗೆಯಲ್ಲೂ ಅಂದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಗೊಮ್ಮೆ ಈಗೊಮ್ಮೆ ಮಳೆಯಾಗುತ್ತಲೇ ಇದೆ. ಇದರಿಂದ ಎಲ್ಲೂ ನೀರಿನ ಕೊರತೆ ಹೆಚ್ಚಾಗಿ ಕಂಡುಬಂದಿಲ್ಲ. ಈ ಮುಂಗಾರಿನಲ್ಲೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರೈತರು ಉತ್ತಮ ಮಳೆ, ಅದರಿಂದ ಸಮೃದ್ಧ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.

    ಜಿಲ್ಲೆಯ ಮುಂಡಗೋಡ, ಹಳಿಯಾಳದಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಉಳಿದೆಡೆ ಇನ್ನಷ್ಟೇ ರೈತರು ಹೊಲ, ಗದ್ದೆಗಳಿಗೆ ಇಳಿಯಬೇಕಿದೆ. ಕರೊನಾ ಪರಿಣಾಮ ಕೃಷಿ ಕ್ಷೇತ್ರದ ಮೇಲೆ ಅಷ್ಟೊಂದು ಬೀಳುತ್ತದೆ ಎಂದುಕೊಂಡಿಲ್ಲ.
    ಹೊನ್ನಪ್ಪ ಗೋವಿಂದ ಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts