More

    ಕೃಷಿ ಕ್ಷೇತ್ರ ಸುಧಾರಣೆಗೆ ಹೊಸ ತಂತ್ರಜ್ಞಾನ ಅವಶ್ಯ

    ಮಾಲೂರು : ರೈತ-ಕಾರ್ಮಿಕ ನಮ್ಮ ಆರ್ಥಿಕತೆಯ ಮೂಲಾಧಾರ. ರೈತ ಸಾಕಷ್ಟು ಬವಣೆಗಳ ಬದುಕು ಅನುಭವಿಸುತ್ತಿದ್ದಾನೆ. ವರ್ಷದಲ್ಲಿ ಬೆಳೆಯುವ ಎರಡ್ಮೂರು ಬೆಳೆಗಳಲ್ಲಿ ಒಂದಾದರೂ ಒಳ್ಳೆಯ ಬೆಳೆಯಾಗಿ ಅದಕ್ಕೆ ಸೂಕ್ತ ಮಾರುಕಟ್ಟೆ ಸಿಕ್ಕರೆ ಸಣ್ಣ ಆದಾಯ ಸಿಗುತ್ತದೆ. ಇಲ್ಲವಾದಲ್ಲಿ ಆಕಾಶಕ್ಕೆ ಮುಖ ಮಾಡುವ ಪರಿಸ್ಥಿತಿ ಇದ್ದು, ಸರ್ಕಾರಗಳು ರೈತರ ಪರ ನಿಲ್ಲಬೇಕು ಎಂದು ಸಾಹಿತಿ ಸಿ.ಲಕ್ಷ್ಮೀನಾರಾಯಣ್ ಒತ್ತಾಯಿಸಿದರು.
    ಪಟ್ಟಣದ ಮಹಾರಾಜ ವೃತ್ತದಲ್ಲಿನ ಕುಂತೂರು ಚಂದ್ರಪ್ಪ ಮತ್ತು ಜಾನ್ ಅಲ್ಮೇಡ ವೇದಿಕೆಯಲ್ಲಿ ಕಸಾಪ ಬುಧವಾರ ಆಯೋಜಿಸಿದ್ದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ವಿದೇಶಗಳಲ್ಲಿನ ರೈತರು ಭಾರತಕ್ಕಿಂತ ನೆಮ್ಮದಿಯಾಗಿದ್ದಾರೆ. ಅಲ್ಲಿಯ ರೈತರು ವೈಜ್ಞಾನಿಕವಾಗಿ ಕೃಷಿ ಮಾಡುತ್ತಿದ್ದು, ಲಾಭದೊಂದಿಗೆ ವಿಶ್ವಕ್ಕೆ ಬೇಕಾದ ಆಹಾರ ಉತ್ಪಾದಿಸಿಕೊಡುವ ಸಾಮರ್ಥ್ಯ ಹೊಂದಿರುವಂತೆ ನಮ್ಮ ರೈತರು ವೈಜ್ಞಾನಿಕ ಪದ್ಧತಿ ಅನುಸರಿಸಬೇಕು ಎಂದು ಸಲಹೆ ನೀಡಿದರು.
    ಇಸ್ರೇಲ್, ಥೈಲ್ಯಾಂಡ್, ಆಸ್ಟ್ರೇಲಿಯಾ, ಚೀನಾ ಮಾದರಿಯಲ್ಲಿ ಕೃಷಿ ನೀತಿ ಅನುಸರಿಸಲು ಭಾರತ ಸರ್ಕಾರ ರೈತರಲ್ಲಿ ಅರಿವು ಮೂಡಿಸಬೇಕು, ತಜ್ಞರ ತಂಡ ರಚಿಸಿ ಹೊಸ ತಂತ್ರಜ್ಞಾನಗಳ ಮೂಲಕ ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು ಎಂದರು.
    ಕೋಲಾರ ಜಿಲ್ಲೆಗೆ ಕೆಸಿ ವ್ಯಾಲಿ ನೀರು ಹರಿಯುತ್ತಿರುವುದರಿಂದ ತಕ್ಕ ಮಟ್ಟಿಗೆ ಅಂತರ್ಜಲಮಟ್ಟ ಸುಧಾರಿಸಿ ತೋಟಗಾರಿಕೆ ಬೆಳೆಗಳು ಕೈಗೆ ದಕ್ಕುವಂತಾಗಿದೆ. ಆದರೆ ಮಾರುಕಟ್ಟೆ ವ್ಯವಸ್ಥೆ ಅವೈಜ್ಞಾನಿಕವಾಗಿರುವುದರಿಂದ ಸರ್ಕಾರ ಬೆಳೆಗಳಿಗೆ ನ್ಯಾಯಸಮ್ಮತ ದರ ಸಿಗುವಂತಾಗಲು ಕ್ರಮ ಕೈಗೊಳ್ಳಬೇಕು ಎಂದರು.
    ಜಿಲ್ಲೆಯಲ್ಲಿ ಅಂತರ್ಜಲ ಕುಸಿತಕ್ಕೆ ನೀಲಗಿರಿ, ಅಕೇಶಿಯಾ ಕಾರಣವಾಗಿದ್ದು, ಬೇರುಸಹಿತ ಕಿತ್ತೊಗೆಯಲು ತಾಲೂಕು ಆಡಳಿತ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಜತೆಗೆ ಕಾಲುವೆ ಒತ್ತುವರಿ ತೆರವುಗೊಳಿಸಿ ಕೆರೆ-ಕುಂಟೆ ಸಮೃದ್ಧಿಗೊಳಿಸಬೇಕು ಎಂದರು.
    ಸಾಹಿತ್ಯ ಸಮ್ಮೇಳನಗಳು ಬರೀ ಅಕಾಡೆಮಿಕ್ ವಲಯದ ಪ್ರೊಫೆಸರ್‌ಗಳು, ಐಚ್ಛಿಕ ಕನ್ನಡ ವಿದ್ಯಾರ್ಥಿಗಳು, ವಿವಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಸಾಹಿತ್ಯ, ಸಂಸ್ಕೃತಿ ಚಿಂತನೆಗಳು ಸಮಾಜದ ವಿವಿಧ ಸ್ತರಗಳಲ್ಲಿರುವ ಜನರ ಬದುಕನ್ನು ಆನಂದಮಯವಾಗಿಸುವ ಸೂತ್ರಗಳಾಗಬೇಕು. ಒಂದಿಷ್ಟು ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಮನರಂಜನೆಗಳನ್ನು ಇಟ್ಟುಕೊಳ್ಳದಿದ್ದರೆ ಬದುಕು ಯಾಂತ್ರಿಕವಾಗಿ ಬರಡಾಗುತ್ತದೆ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತದೆ. ಸಾಹಿತ್ಯ, ಸಂಸ್ಕೃತಿ ಬದುಕಿನ ಗಾಡಿಯ ಕೀಲುಗಟ್ಟುವ ಚಕ್ರಗಳಿಗೆ ಕೀಲೆಣ್ಣೆಯಿದ್ದಂತೆ ಎಂದು ಸಿ.ಲಕ್ಷ್ಮೀನಾರಾಯಣ್ ಅಭಿಪ್ರಾಯಿಸಿದರು.

    ರೈತಪರ ನಿರ್ಣಯಗಳಾಗಲಿ
    ಕನ್ನಡ ಸಾಹಿತ್ಯ ಸಮ್ಮೇಳನಗಳು ರೈತರ ಪರವಾಗಿ ನಿರ್ಣಯಗಳನ್ನು ಪಾಸು ಮಾಡಿ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವಾಗಬೇಕು. ಸಮ್ಮೇಳನದಲ್ಲಿ ಬರೀ ಕನ್ನಡ ನಾಡು-ನುಡಿ, ಸಾಹಿತ್ಯ, ಕಲೆ ಸಂಸ್ಕೃತಿಯ ಸುತ್ತ ಗಿರಕಿ ಹೊಡೆಯದೆ ಜನಜೀವನ, ಬದುಕಿನ ಅನ್ನದ ಪ್ರಶ್ನೆಯಾಗಿ ರೈತಪರವಾದ ಕಾಳಜಿಯನ್ನು ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿ ಕಸಾಪ ತಾಳುವುದು ತುರ್ತು ಅಗತ್ಯ. ಕನ್ನಡವನ್ನು ಇನ್ನಷ್ಟು ಗಟ್ಟಿಗೊಳಿಸಲು ಕನ್ನಡ ಸಾಹಿತ್ಯದ ಬಗ್ಗೆ ಪರ್ಯಾಯವಾದ ಚಿಂತನೆ ಸಭೆಗಳು ಪ್ರತಿ ಗ್ರಾಮದಲ್ಲಿ ನಡೆಯಬೇಕು ಎಂದು ಕವಿ ಹಾಗೂ ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಿಸಿದರು.

    ಕಾರ್ಯಕ್ರಮಗಳಿಗೆ ಸಹಕಾರ ನೀಡಿ
    ಕನ್ನಡ ಸಾಹಿತ್ಯ ಪರಿಷತ್‌ನ ಸಮಗ್ರ ಮಾಹಿತಿಯ 50ಕ್ಕೂ ಹೆಚ್ಚು ಲೇಖನಗಳನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ್ ಕೆಂಪರಾಜ್, ನನ್ನ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಲ್ಲರ ಮನಮುಟ್ಟುವಂತಹ ಕೆಲಸ ಮಾಡಿದೆ. ಜಿಲ್ಲೆಯಲ್ಲಿ ಜಿಲ್ಲಾ, ತಾಲೂಕು, ಹೋಬಳಿ, ಪಂಚಾಯಿತಿ ಮತ್ತು ನಗರಗಳಲ್ಲಿಯೂ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ ಮಾಡುವ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಸಾರ್ವಜನಿಕರು, ಜನಪ್ರತಿನಿಧಿಗಳು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

    ಪ್ರಮುಖರ ಉಪಸ್ಥಿತಿ
    ಪುರಸಭೆ ಅಧ್ಯಕ್ಷ ಎನ್.ವಿ.ಮುರಳೀಧರ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ನಾಗವೇಣಿಚಂದ್ರು, ಇಒಕೃಷ್ಣಪ್ಪ, ಸದಸ್ಯ ಮುನಿರಾಜು, ಪುರಸಭೆ ಉಪಾಧ್ಯಕ್ಷೆ ಭಾರತಮ್ಮ ಶಂಕರಪ್ಪ, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಎಂ.ವಿ.ತಮ್ಮಯ್ಯ, ಪುರಸಭಾ ಮುಖ್ಯಾಧಿಕಾರಿ ನಜೀರ್ ಅಹಮದ್, ಕವಿಗಳಾದ ಗೋವಿಂದರೆಡ್ಡಿ, ಜಮ್ಮುಚಂದ್ರಣ್ಣ, ಕನ್ನಡ ಹೋರಾಟಗಾರ ಅಶ್ವತ್ಥರೆಡ್ಡಿ, ದ್ಯಾಪಸಂದ್ರ ಬ್ಯಾಂಕ್ ಸಹಕಾರ ಸಂಘದ ಅಧ್ಯಕ್ಷ ಆರ್.ಪ್ರಭಾಕರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ನಾ.ಗುರುಮೂರ್ತಿ, ಎಸ್.ನಾರಾಯಣಸ್ವಾಮಿ, ನಾ.ಮುನಿರಾಜು, ಪ್ರಶಾಂತ್, ಡಿ.ಎಂ.ವಿಜಿಕುಮಾರ್, ಮಧುಸೂದನ್ ಹಾಜರಿದ್ದರು.

    ವಿದ್ಯಾರ್ಥಿಗಳಿಗೆ ಪುರಸ್ಕಾರ
    2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಾ. ಎ.ಜಯಲಕ್ಷ್ಮೀ ವಿರಚಿತ ‘ಶಿಲೆಯಾದ ಅವಳು’ ಹಾಗೂ ಡಾ.ನಾ.ಮುನಿರಾಜು ವಿರಚಿತ ‘ನಿನ್ನ ನಕಲು ಸಿಗಲೇ ಇಲ್ಲ’ ಕೃತಿಗಳು ಲೋಕಾರ್ಪಣೆ ಕಂಡವು.

    ಧ್ವಜಾರೋಹಣ-ಸಮ್ಮೇಳನ
    ಮಹಾರಾಜ ವೃತ್ತದಲ್ಲಿ ಬೆಳಗ್ಗೆ ತಹಸೀಲ್ದಾರ್ ಎಂ.ಮಂಜುನಾಥ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ್ ಕೆಂಪರಾಜ್ ನಾಡಧ್ವಜ ಹಾಗೂ ತಾಲೂಕು ಅಧ್ಯಕ್ಷ ದಾ. ಮು.ವೆಂಕಟೇಶ್ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಪಟ್ಟಣದ ಅರಳೇರಿ ರಸ್ತೆಯಲ್ಲಿರುವ ಕುವೆಂಪು ಪುತ್ಥಳಿಗೆ ಜಿಪಂ ಉಪಾಧ್ಯಕ್ಷೆ ಯಶೋದಮ್ಮ ಕೃಷ್ಣಮೂರ್ತಿ ಮಾಲಾರ್ಪಣೆ ಮಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಸಿ.ಲಕ್ಷ್ಮೀನಾರಾಯಣ್ ಅವರನ್ನೊಳಗೊಂಡ ಸಾಂಸ್ಕೃತಿಕ ಮತ್ತು ಗಣ್ಯರ ಮೆರವಣಿಗೆಗೆ ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು. ಅಕ್ಷರ ಜಾತ್ರೆಯಲ್ಲಿ ಪುಸ್ತಕ ಪ್ರೇಮಿಗಳು ತಮಗಿಷ್ಟವಾದ ಪುಸ್ತಕ ಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

    ಊಟದ ಮೆನು
    ಅಕ್ಷರಜಾತ್ರೆಗೆ ಬಂದಿದ್ದ ಸಾಹಿತ್ಯಾಸಕ್ತರಿಗೆ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಹಸಿವು ನೀಗಿಸುವ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಪೊಂಗಲ್, ವಡೆ, ಮಧ್ಯಾಹ್ನ ಟೊಮ್ಯಾಟೊ ಬಾತ್, ಮೊಸರನ್ನ, ಅನ್ನ ರಸಂ, ಬಾದುಶಾ ಉಣಬಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts