More

    ಕೃಷಿ, ಕೈಗಾರಿಕೆ ಅಭಿವೃದ್ಧಿಗೆ ಒತ್ತು

    ಶಿವಮೊಗ್ಗ: ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳು ಸರಿ ಸಮಾನವಾಗಿ ಬೆಳೆದರೆ ಮಾತ್ರ ರಾಜ್ಯ ಹಾಗೂ ದೇಶದ ಅಭಿವೃದ್ಧಿ ಸಾಧ್ಯ. ಇಲ್ಲವಾದರೆ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಅಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎರಡೂ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ನಗರದ ಎನ್​ಇಎಸ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಶ್ರಯದಲ್ಲಿ ಸೋಮವಾರ ಎರಡು ದಿನಗಳ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಉತ್ತೇಜನ ನೀಡಲಾಗುತ್ತಿದೆ. ಬೇರೆ ಕೇಂದ್ರಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಜಮೀನು, ಹಣಕಾಸಿನ ನೆರವು ಸೇರಿ ಎಲ್ಲ ನೆರವು ನೀಡಲಾಗುತ್ತಿದೆ. ಆ ಸಂಬಂಧ ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸುವ ಕುರಿತು ಈಗಾಗಲೇ 42 ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದೇನೆ ಎಂದರು.

    ಸ್ವಯಂ ಉದ್ಯೋಗಕ್ಕೆ ಉತ್ತೇಜನ: ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸರ್ಕಾರ ಬ್ಯಾಂಕ್​ಗಳಿಂದ ಹಣಕಾಸು ನೆರವು, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಸರಳೀಕೃತ ಪರವಾನಗಿ ಸೇರಿ ಹಲವು ಸೌಲಭ್ಯ ಕಲ್ಪಿಸಲಿದೆ. ಇತರರಿಗೂ ಉದ್ಯೋಗ ಕಲ್ಪಿಸಲು ಸಾಧ್ಯವಾಗುವಂತೆ ಯುವಜನತೆ ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕು. ಸಣ್ಣ ಕೈಗಾರಿಕೆಗಳನ್ನು ಆರಂಭಿಸುವ ಕುರಿತು ಬಜೆಟ್ ಅಧಿವೇಶನದಲ್ಲೂ ರ್ಚಚಿಸಲಿದ್ದ್ದೇವೆ ಎಂದು ಹೇಳಿದರು.

    11,500 ಮಂದಿಗೆ ಉದ್ಯೋಗ: ಶಿವಮೊಗ್ಗದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ 150ಕ್ಕೂ ಅಧಿಕ ಕಂಪನಿಗಳು ಭಾಗವಹಿಸುತ್ತಿದ್ದು ಸ್ಥಳದಲ್ಲಿಯೇ ಉದ್ಯೋಗ ಆದೇಶ ಪತ್ರ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 45 ಪರೀಕ್ಷಾ ಪೂರ್ವ ತರಬೇತಿ ಆಯೋಜಿಸಿದ್ದು 2,651 ಮಂದಿ ಪ್ರಯೋಜನ ಪಡೆದಿದ್ದಾರೆ. 11,500 ಮಂದಿಗೆ ಉದ್ಯೋಗ ಕಲ್ಪಿಸಲು ಸಾಧ್ಯ. ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯಡಿ 3,609 ಮಂದಿಗೆ ಪೂರ್ಣ ತರಬೇತಿ ನೀಡಿದ್ದು 2,600 ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

    8-10 ತಿಂಗಳಲ್ಲಿ ವಿಮಾನ ನಿಲ್ದಾಣ: ಕೈಗಾರಿಕೆಗಳನ್ನು ಆರಂಭಿಸಲು ಪೂರಕ ವಾತಾವರಣ ನಿರ್ವಿುಸುವ ಮೂಲಕ ಶಿವಮೊಗ್ಗವನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು. ಅದಕ್ಕಾಗಿ ಈಗಾಗಲೇ ಕೈಗೆತ್ತಿಕೊಂಡಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಮೂರೂವರೆ ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

    ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ 220 ಕೋಟಿ ರೂ. ಮಂಜೂರು ಮಾಡಿದ್ದು ಮುಂದಿನ 15 ದಿನದೊಳಗೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. 8ರಿಂದ 10 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ವಿಮಾನ ನಿಲ್ದಾಣದಿಂದ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಆರಂಭವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.

    ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಉದ್ಯಮಗಳನ್ನು ಆರಂಭಿಸುವ ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ಶೇ.4ರ ಬಡ್ಡಿದರದಲ್ಲಿ 10 ಕೋಟಿ ರೂ. ವರೆಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸುವುದಷ್ಟೇ ಸರ್ಕಾರದ ಉದ್ದೇಶವಲ್ಲ. ಕಂಪನಿಗಳಿಗೂ ಅರ್ಹರನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡುವುದಾಗಿದೆ ಎಂದರು.

    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಉದ್ಯೋಗ ಮೇಳದ ಮೂಲಕ ಮಲೆನಾಡಿನಲ್ಲಿ ಯುವಜನತೆಯ ಕೌಶಲವನ್ನು ಓರೆಗೆ ಹೆಚ್ಚುವ ಕೆಲಸ ಆಗುತ್ತಿದೆ. ಉದ್ಯೋಗ ಗಿಟ್ಟಿಸಲು ನುರಿತ ಕೌಶಲ್ಯ ಮತ್ತು ಸಂವಹನ ಅಗತ್ಯವಾಗುತ್ತದೆ. ಅದನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು ಎಂದರು.

    ಶಾಸಕ ಆರಗ ಜ್ಞಾನೇಂದ್ರ, ಎಂಎಲ್​ಸಿಗಳಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಆರ್.ಪ್ರಸನ್ನಕುಮಾರ್, ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ನಗರ ಪಾಲಿಕೆ ಆಡಳಿತ ಪಕ್ಷ ನಾಯಕ ಎಸ್.ಎನ್.ಚನ್ನಬಸಪ್ಪ ಇತರರಿದ್ದರು.

    4 ಸಾವಿರ ಉದ್ಯೋಗ ಸೃಷ್ಟಿ ಗುರಿ: ಎರಡು ದಿನಗಳ ಉದ್ಯೋಗ ಮೇಳಕ್ಕೆ 11,184 ಉದ್ಯೋಗಾಕಾಂಕ್ಷಿಗಳು ಹಾಗೂ 151 ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು ಕನಿಷ್ಠ 4 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಡಿಸಿ ಕೆ.ಬಿ.ಶಿವಕುಮಾರ್ ಹೇಳಿದರು. ಉದ್ಯೋಗ ಮೇಳದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ನೇರ ನೋಂದಣಿಗೂ ಅವಕಾಶ ಮಾಡಿಕೊಟ್ಟಿದ್ದು 151 ಮಳಿಗೆಗಳಲ್ಲಿ ಕಂಪನಿಗಳ ಮುಖ್ಯಸ್ಥರು, ಅಧಿಕಾರಿಗಳಿಂದ ಸಂದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ.25ರ ಕೊನೆ ಹಂತದವರೆಗೂ ಆನ್​ಲೈನ್(ಡಿಡಿಡಿ.ಠಜಜಿಞಟಜಚ್ಠಛಢಟಜಚಞಛ್ಝಿಚ.ಜ್ಞಿ) ಅಥವಾ ನೇರವಾಗಿ ನೋಂದಣಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

    ಶಿವಮೊಗ್ಗ ನೋಡಿದರೆ ಹೊಟ್ಟೆ ಕಿಚ್ಚು: ಶಿವಮೊಗ್ಗ ನೋಡುತ್ತಿದ್ದರೆ ಪ್ರಸ್ತುತ ಹೊಟ್ಟೆ ಕಿಚ್ಚು ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಇಲ್ಲಿನ ಅಭಿವೃದ್ಧಿ ಕೆಲಸಗಳು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. 2005ರಲ್ಲಿ ಶಿವಮೊಗ್ಗಕ್ಕೆ ಬಂದಿದ್ದೆ. ಆದಾದ ಬಳಿಕ ಯಡಿಯೂರಪ್ಪ ಡಿಸಿಎಂ, ಸಿಎಂ ಆದ ಬಳಿಕ ಶಿವಮೊಗ್ಗದ ವರ್ಚಸ್ಸೇ ಬದಲಾಗಿದೆ. 14 ವರ್ಷದಲ್ಲಿ ಯಡಿಯೂರಪ್ಪ ಅವರಿಂದ ಶಿವಮೊಗ್ಗದಲ್ಲಿ ಸುವರ್ಣಯುಗ ಆರಂಭಗೊಂಡಿದೆ ಎಂದ ಅವರು, ವಿಜಯಪುರ ಇಷ್ಟೊಂದು ಅಭಿವೃದ್ಧಿ ಕಂಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸಿಎಂ ತವರು ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ನೀರಾವರಿ ಯೋಜನೆ ಸೇರಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

    ಸಚಿವ ಕೆ.ಎಸ್.ಈಶ್ವರಪ್ಪ ಗೈರು: ಸಿಎಂ ಯಡಿಯೂರಪ್ಪ ಮತ್ತು ಡಿಸಿಎಂ ಗೋವಿಂದ ಕಾರಜೋಳ ಅವರು ಭಾಗವಹಿಸಿದ್ದ ಉದ್ಯೋಗ ಮೇಳದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಗೈರು ಎದ್ದುಕಾಣುತ್ತಿತ್ತು. ಕಣ್ಣಿನ ತೊಂದರೆ ಸೇರಿ ಅನಾರೋಗ್ಯದ ಕಾರಣ ಸಚಿವರು ಗೈರಾಗಿದ್ದರೆಂದು ಹೇಳಲಾಗುತ್ತಿದೆ. ವೈದ್ಯರ ಸೂಚನೆಯಂತೆ ಮಲ್ಲೇಶ್ವರನಗರದ ನಿವಾಸದಲ್ಲೇ ವಿಶ್ರಾಂತಿ ಪಡೆದರು ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts