More

    ಕೃಷಿ, ಕಟ್ಟಡ ಸಾಮಗ್ರಿ ಮನೆಗೆ ತಲುಪಿಸಿ

    ಶಿರಸಿ: ಕೃಷಿ ಹಾಗೂ ಕಟ್ಟಡ ಸಾಮಗ್ರಿಯನ್ನು ನೇರವಾಗಿ ಮಳಿಗೆಗಳಲ್ಲಿ ಮಾರದೆ ಗ್ರಾಹಕರ ಮನೆಗೆ ತಲುಪಿಸುವಂತೆ ಅಧಿಕಾರಿಗಳು ಸಂಬಂಧಪಟ್ಟ ಅಂಗಡಿ ಮಾಲೀಕರಿಗೆ ಸೂಚಿಸಿದ್ದಾರೆ.

    ನಗರದ ಮಿನಿ ವಿಧಾನಸೌಧದಲ್ಲಿ ಬುಧವಾರ ವಿಧಾನಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಿದ ಕಟ್ಟಡ ಸಾಮಗ್ರಿ ಮಳಿಗೆ ಮಾಲೀಕರು, ಸಹಕಾರಿ ಸಂಘಗಳ ಪ್ರಮುಖರು, ವಿವಿಧ ಸಂಘ- ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

    ಸಾಮಾಜಿಕ ಕಾರ್ಯಕರ್ತ ದೀಪಕ ದೊಡ್ಡೂರು ಮಾತನಾಡಿ, ಕೃಷಿ ಕಾರ್ಯಕ್ಕೆ ಸರಳೀಕರಣ ಅವಕಾಶ ನೀಡಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಸರ್ಕಾರದ ಜತೆ ಸಹಕಾರಿ ಸಂಸ್ಥೆಗಳಿಗೂ ಧಕ್ಕೆಯಾಗುತ್ತದೆ ಎಂದರು.

    ಟಿಎಸ್​ಎಸ್ ಪ್ರತಿನಿಧಿ ಸತೀಶ ಮುಷ್ಟಗಿ ಮಾತನಾಡಿ, ಕಾನೂನು ಎಲ್ಲರಿಗೂ ಒಂದೇ ರೀತಿಯಾಗಿರಬೇಕು. ನಗರದ ಇತರ ಕೃಷಿ, ಕಟ್ಟಡ ಸಾಮಗ್ರಿ ಮಳಿಗೆಗಳಿಗೆ ಬಾಗಿಲು ತೆರೆಯಲು ಅವಕಾಶ ನೀಡಿದರೆ ಟಿಎಸ್​ಎಸ್​ಗೂ ಅವಕಾಶ ನೀಡಬೇಕು. ಕಟ್ಟಡ ಸಾಮಗ್ರಿಗೆ ಸಂಬಂಧಿಸಿ ನಗರದಲ್ಲಿ ಸುಮಾರು 32ಕ್ಕೂ ಹೆಚ್ಚು ಮಳಿಗೆಗಳಿಗೂ ಇದು ಅನ್ವಯ ಎಂದು ಹೇಳಿದರು.

    ಡಿವೈಎಸ್ಪಿ ಜಿ.ಟಿ. ನಾಯಕ ಮಾತನಾಡಿ, ಅಂಗಡಿಗಳೆದುರು ಜನಜಂಗುಳಿ ಆಗದಂತೆ ಕ್ರಮವಹಿಸಬೇಕು. ಸೆಕ್ಷನ್ 144 ಜಾರಿಯಲ್ಲಿರುವಾಗ ಎಲ್ಲವೂ ನಾವೆಂದುಕೊಂಡಂತೆ ಆಗಲು ಸಾಧ್ಯವಿಲ್ಲ. ಹಾಗಾಗಿ ಜನರೂ ಸಹಕಾರ ನೀಡಬೇಕು. ಕೃಷಿ ಹಾಗೂ ಕಟ್ಟಡ ಸಾಮಗ್ರಿ ಸಾಗಿಸುವ ವಾಹನಗಳಿಗೆ ಅವಕಾಶ ನೀಡಲಾಗುವುದು ಎಂದರು.

    ಯಾವುದೇ ಕಾಮಗಾರಿಗಳಿಗಾದರೂ ಸ್ಥಳೀಯ ಕಾರ್ವಿುಕರನ್ನೇ ಬಳಸಬೇಕು ವಿನಾ ಹೊರ ಊರಿನ ಕಾರ್ವಿುಕರಿಗೆ ಅವಕಾಶವಿಲ್ಲ ಎಂದರು.

    ತಹಸೀಲ್ದಾರ ಎಂ.ಆರ್.ಕುಲಕರ್ಣಿ ಮಾತನಾಡಿ, ಕೃಷಿ ಹಾಗೂ ಕಟ್ಟಡ ಸಾಮಗ್ರಿಗಳನ್ನು ನೇರವಾಗಿ ಗ್ರಾಹಕರ ಮನೆಗೆ ಮುಟ್ಟಿಸಬೇಕು. ಅದಕ್ಕೆ ಸಂಬಂಧಿಸಿದಂತೆ ಅಂಗಡಿಕಾರರು ಕ್ರಮವಹಿಸಬೇಕು. ಪ್ರತ್ಯೇಕ ವಾಹನಗಳನ್ನು ಬಳಸಿ ತಲುಪಿಸುವ ಕಾರ್ಯ ಆಗಬೇಕು. ಅಧಿಕೃತವಾಗಿ ದಾಖಲಾತಿ ನೀಡುವ ಎಲ್ಲ ಮಳಿಗೆಕಾರರಿಗೂ ಕೃಷಿ ಹಾಗೂ ಕಟ್ಟಡ ಸಂಬಂಧಿತ ವಸ್ತುಗಳನ್ನು ಮಾರಲು ಅವಕಾಶ ನೀಡಲಾಗುವುದು. ಈ ಕುರಿತು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.

    ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎನ್. ಹೆಗಡೆ ಮುರೇಗಾರ, ಸಿಪಿಐ ಪ್ರದೀಪ ಬಿ., ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಎಫ್.ಜಿ . ಚಿನ್ನಣ್ಣನವರ್ ಹಾಗೂ ಇತರರಿದ್ದರು.

    ಮುಗಿದ ಮುಸುಕಿನ ಗುದ್ದಾಟ, ಡೋರ್ ಡಿಲೆವರಿ ಆರಂಭ: ಅಧಿಕಾರಿಗಳು ಹಾಗೂ ಟಿಎಸ್​ಎಸ್ ಸಂಸ್ಥೆಯ ನಡುವೆ ನಡೆದಿದ್ದ ಮುಸುಕಿನ ಗುದ್ದಾಟಕ್ಕೆ ಬುಧವಾರ ತೆರೆ ಬಿದ್ದಿದೆ.

    ಗ್ರಾಹಕರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸುವಂತೆ ತಾಲೂಕು ಆಡಳಿತ ಸೂಚಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯು ವ್ಯಾಪಾರ ಪುನಃ ಆರಂಭಿಸಿದೆ. ಔಷಧ ವಿಭಾಗವು ಪುನಃ ಕಾರ್ಯನಿರ್ವಹಿಸುತ್ತಿದ್ದು, ವಾಟ್ಸ್ ಆಪ್ ಆರ್ಡರ್ (86604 04056) ಮಾಡಿದಲ್ಲಿ ಹಳ್ಳಿ ಮತ್ತು ನಗರ ಪ್ರದೇಶಗಳ ಮನೆಯ ಬಾಗಿಲಿಗೆ ಔಷಧಗಳನ್ನು ಪೂರೈಕೆ ಮಾಡುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ.

    ಅಕ್ಕಿ ಗಿರಣಿ ವಿಭಾಗ, ಆನ್​ಲೈನ್ ಪೋರ್ಟಲ್ ಸೇವೆ ಎಂದಿನಂತೆ ನಡೆಯುತ್ತದೆ. ವಾಟ್ಸ್ ಆಪ್ ಮೂಲಕ ಸಹ ನಗರ ಪ್ರದೇಶದವರು ಆರ್ಡರ್ ಮಾಡಿ (8088312312) ಮನೆಯ ಬಾಗಿಲಿಗೆ ಅವಶ್ಯಕ ವಸ್ತುಗಳನ್ನು ಪಡೆದುಕೊಳ್ಳಬಹುದು.

    ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಮಗ್ರಿಗಳು ಮತ್ತು ಗೊಬ್ಬರ ಹಿಂಡಿಗಳು ಬೇಕಾದಲ್ಲಿ ಸಹ ಸದಸ್ಯರಿಗೆ ಪೂರೈಕೆ ಮಾಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪ್ರಾಥಮಿಕ ಸಹಕಾರಿ ಸಂಘಗಳಿಗೆ ಅವಶ್ಯಕ ವಸ್ತುಗಳು ಪೂರೈಕೆಯಾಗಲಿದೆ.

    ಅಡಕೆಯ ನೇರ ಖರೀದಿ ವ್ಯವಸ್ಥೆಯನ್ನು ಮೇ 3ರ ರವರೆಗೂ ಮುಂದುವರಿಸಲಾಗಿದೆ. ನಂತರದ ಪರಿಸ್ಥಿತಿಯನ್ನು ಅವಲೋಕಿಸಿ ಟೆಂಡರ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು. ಕೆಲ ದಿನಗಳಿಂದ ಸಡಿಲಿಕೆಯಾಗಿದ್ದ ನೇರ ಖರೀದಿಯ ಮಿತಿಯನ್ನು, ವಾಹನಗಳ ದಟ್ಟಣೆಯ ಕಾರಣ ಮತ್ತು ಅಧಿಕಾರಿಗಳ ಸೂಚನೆಯಂತೆ ಅನಿವಾರ್ಯವಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಮಾಡಲಾಗುತ್ತದೆ. ಅತ್ಯಂತ ಅವಶ್ಯಕತೆಯುಳ್ಳ ಸದಸ್ಯರು ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts