More

    ಕೃಷಿ ಇಲಾಖೆ ಎಡವಟ್ಟಿಗೆ ರೈತರು ಹೈರಾಣ

    ಬಸವರಾಜ ಇದ್ಲಿ ಹುಬ್ಬಳ್ಳಿ

    ರಾಜ್ಯದಲ್ಲಿ ಕೃಷಿ ಇಲಾಖೆ ಮಾಡಿದ ಎಡವಟ್ಟಿನಿಂದ ಇದೀಗ ಕಡಲೆ ಬೆಳೆಗಾರರು ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಮಾರಾಟ ಮಾಡಲು ನೂರೆಂಟು ತಾಪತ್ರಯ ಅನುಭವಿಸುವಂತಾಗಿದೆ.

    ಹಿಂಗಾರು ಹಂಗಾಮಿನ ಕಡಲೆ, ಜೋಳ, ಗೋಧಿ, ಕುಸುಬೆ ಮುಂತಾದ ಬೆಳೆಗಳು ಸಾಮಾನ್ಯವಾಗಿ ಜನವರಿ ಕೊನೇ ವಾರದಲ್ಲಿ ಕಟಾವಿಗೆ ಬರಲು ಆರಂಭಿಸುತ್ತವೆ. ಕಡಲೆ ಕಟಾವು ಫೆಬ್ರವರಿ ಮೊದಲ ವಾರ ಮುಗಿದು ಹೋಗಿರುತ್ತದೆ. ವಿಪರ್ಯಾಸವೆಂದರೆ ಕೃಷಿ ಇಲಾಖೆಯವರು ಫೆಬ್ರವರಿ ಮುಗಿಯುತ್ತಿದ್ದರೂ ಇನ್ನೂ ಸಮೀಕ್ಷೆ ಮುಗಿಸಿಲ್ಲ!

    ಬೆಳೆ ಸಮೀಕ್ಷೆ ಮಾಡಿ ರೈತರ ಉತಾರದಲ್ಲಿ ಇಂಥದ್ದೇ ಬೆಳೆ ಇದೆ ಎಂದು ನಮೂದಿಸಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ಜನವರಿ ಮಧ್ಯಭಾಗದಿಂದ ಸಮೀಕ್ಷೆ ಆರಂಭಿಸಿದ್ದಾರೆ. ಅದು ಇನ್ನೂ ನಡೆದೇ ಇದೆ. ಇದರ ಪರಿಣಾಮವಾಗಿ ಬಹಳಷ್ಟು ರೈತರು ಬೆಳೆ ಕಟಾವು ಮಾಡಿಕೊಂಡು ಹೋದ ನಂತರ ಸಮೀಕ್ಷೆ ಕಾರ್ಯ ನಡೆದಿದೆ.

    ಇದೀಗ ರೈತರ ಹೊಲಗಳಿಗೆ ಹೋದವರು ಸದ್ಯದ ಸ್ಥಿತಿ ನೋಡಿ ಅದನ್ನೇ ಬೆಳೆದರ್ಶಕ ಆಪ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಬೆಳೆ ಇಲ್ಲದ ಹೊಲಗಳಿಗೆ ಕಟಾವ್ ಎಂದು ನಮೂದಿಸಿದ್ದಾರೆ. ಹಿಂಗಾರು ಬೆಳೆ ಬೆಳೆದಿದ್ದರೂ ಆ ರೈತನ ಉತಾರದಲ್ಲಿ ಈಗ ಯಾವುದೇ ಬೆಳೆ ಇಲ್ಲ ಎಂಬಂತೆ ನಮೂದಾಗಿದೆ.

    ಇದೇ ಉತಾರವನ್ನು ಕಡಲೆ ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಹೋದರೆ ಅಲ್ಲಿ ತಂತ್ರಾಂಶ ಅದನ್ನು ಸ್ವೀಕರಿಸುತ್ತಿಲ್ಲ. ಹಾಗಾಗಿ ಅಂತಹ ರೈತರ ಹೆಸರು ಅಲ್ಲಿ ನೋಂದಣಿಯಾಗುತ್ತಿಲ್ಲ. ಆ ರೈತರು ಮತ್ತೆ ಕಂದಾಯ ಇಲಾಖೆ ಸಂರ್ಪಸಿ ಅದನ್ನು ಸರಿಪಡಿಸಿಕೊಳ್ಳಬೇಕು. ಹಾಗಾಗಿ ರೈತರಿಗೆ ಈಗ ಅನಗತ್ಯ ತಾಪತ್ರಯ ಶುರುವಾಗಿದೆ.

    ಇಷ್ಟು ಮಾತ್ರವಲ್ಲ, ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆ ಒಂದಾದರೆ ಬೆಳೆ ದರ್ಶಕ ಆಪ್​ನಲ್ಲಿ ಮತ್ತೊಂದು ಬೆಳೆ ನಮೂದಿಸಲಾಗಿದೆ. ಸಮೀಕ್ಷಕರು ಹೊಲದ ಒಂದು ಮೂಲೆಯಲ್ಲಿ ನಿಂತು ಫೋಟೊ ತೆಗೆದು ಅಕ್ಕಪಕ್ಕದ ಸರ್ವೆ ನಂಬರ್​ಗಳಿಗೂ ಅದೇ ಫೋಟೋ ಅಪ್​ಲೋಡ್ ಮಾಡಿರುವ ಬಗ್ಗೆ ರೈತರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಮಾಡಿದ್ದರಿಂದಲೂ ಕಡಲೆ ಬೆಳೆದ ಎಷ್ಟೋ ರೈತರ ಉತಾರದಲ್ಲಿ ಜೋಳ, ಗೋದಿ ಇತ್ಯಾದಿ ನಮೂದಾಗಿದೆ. ಇದನ್ನು ಸರಿಪಡಿಸಲು ರೈತರು ಮತ್ತೆ ಕಚೇರಿಯಿಂದ ಕಚೇರಿ ಅಲೆದಾಡಬೇಕಾಗಿದೆ. ಈ ಎಲ್ಲ ಕಾರಣಗಳಿಗೆ ಕಡಲೆ ಬೆಂಬಲ ಬೆಲೆ ಪಡೆಯಲು ನೋಂದಣಿ ಮಾಡಿಕೊಳ್ಳುವುದೇ ಬಹಳಷ್ಟು ರೈತರಿಗೆ ಸಾಧ್ಯವಾಗಲ್ಲ. ಹಾಗಾಗಿ ಖರೀದಿ ಕೇಂದ್ರಗಳು ಖಾಲಿ ಹೊಡೆಯುತ್ತಿವೆ. ಫೆ. 11ಕ್ಕೆ ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಕಡಲೆ ಖರೀದಿಗೆ ಆದೇಶ ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ ಈವರೆಗೆ 1150 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ.

    ಲಾಭ ಸಿಗುವ ಭರವಸೆಯಿಲ್ಲ
    3 ಎಕರೆಯಲ್ಲಿ ಕಡಲೆ ಬೆಳೆದಿದ್ದೇನೆ. ಈಗ ಉತಾರ ತೆಗೆದುಕೊಂಡು ನೋಂದಣಿಗೆ ಬಂದರೆ ಅದರಲ್ಲಿ ಕಟಾವ್ ಎಂದು ನಮೂದಾಗಿದ್ದರಿಂದ ಖರೀದಿ ಕೇಂದ್ರದಲ್ಲಿ ಸ್ವೀಕರಿಸುತ್ತಿಲ್ಲ. ಇದರಿಂದ ಬೆಂಬಲ ಬೆಲೆ ಯೋಜನೆ ಲಾಭ ಸಿಗುವ ಭರವಸೆಯೇ ಇಲ್ಲದಂತಾಗಿದೆ. ಎಂದು ಹುಬ್ಬಳ್ಳಿ ಅಮರಗೋಳದ ರೈತ ಸಂತೋಷ ಮನಗುಂಡಿ ಹೇಳುತ್ತಾರೆ.

    ಧಾರವಾಡ ಜಿಲ್ಲೆಯಲ್ಲಿ ಆಪ್ ಬಂದ ಕೂಡಲೇ ಜನವರಿಯಲ್ಲಿ ಬೆಳೆ ಸಮೀಕ್ಷೆ ಆರಂಭವಾಗಿದ್ದು, ಫೆ. 28ರವರೆಗೆ ಶೇ. 96ರಷ್ಟು ಮುಗಿದಿದೆ. ಈಗಾಗಲೇ ಕಟಾವ್ ಎಂದು ನಮೂದಾಗಿರುವ ಹೊಲಗಳ ರೈತರ ಸಮಸ್ಯೆ ಬಗ್ಗೆ ಅಂಕಿಸಂಖ್ಯೆ ವಿಭಾಗ ಸೇರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಿ ಶೀಘ್ರ ಪರಿಹಾರ ನೀಡಲಾಗುವುದು.
    | ರಾಜಶೇಖರ ಬಿಜಾಪುರ
    ಜಂಟಿ ನಿರ್ದೇಶಕ, ಕೃಷಿ ಇಲಾಖೆ ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts