More

    ಕೃಷಿಕರಿಗೆ ಕಹಿಯಾದ ಜೇನು; ಸಾವಿರಾರು ಕೆಜಿ ಸಂಗ್ರಹವಾದ ಮಧು

    ರಾಜೇಂದ್ರ ಶಿಂಗನಮನೆ ಶಿರಸಿ: ಕರೊನಾ ಭೀತಿಯಿಂದ ಮಾರುಕಟ್ಟೆ ವಹಿವಾಟು ಸ್ಥಗಿತಗೊಂಡ ಪರಿಣಾಮ ಸಿಹಿಯಾದ ಜೇನು ಕೂಡ ಕೃಷಿಕರ ಪಾಲಿಗೆ ಕಹಿಯಾಗಿ ಮಾರ್ಪಟ್ಟಿದೆ.

    ರಾಜ್ಯದಲ್ಲೇ ಅತ್ಯುತ್ತಮ ಗುಣಮಟ್ಟದ ಜೇನಿಗೆ ಹೆಸರಾದ ಮಲೆನಾಡ ಜೇನು ತುಪ್ಪಕ್ಕೆ ಇದೀಗ ಮಾರುಕಟ್ಟೆಯಿಲ್ಲ ದಂತಾಗಿದೆ. ಲಾಕ್​ಡೌನ್ ಪರಿಣಾಮ ಎಲ್ಲ ಉತ್ಪನ್ನಗಳ ಸಾಗಾಟ, ಮಾರಾಟಕ್ಕೆ ಕಡಿವಾಣ ಹಾಕಿರುವ ಕಾರಣ ಜೇನು ತುಪ್ಪ ಕೂಡ ಕೃಷಿಕರಲ್ಲಿಯೇ ಉಳಿಯುವಂತಾಗಿದೆ. ಜೇನು ಉತ್ಪಾದನೆಯ ಜತೆಗೆ ಬೇಡಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

    ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೇನು ಕೃಷಿಕರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಜನವರಿ ತಿಂಗಳಿನಿಂದ ಮೇ ಅಂತ್ಯದವರೆಗೆ ಪರಿಸರದಲ್ಲಿ ಸಾಕಷ್ಟು ಹೂವುಗಳು ಅರಳುತ್ತವೆ. ಅದರಲ್ಲೂ ಪಶ್ಚಿಮಘಟ್ಟದ ಕಾಡಿನಲ್ಲಿ ಸಂಪೂರ್ಣ ಹೂವುಗಳು ಅರಳುವುದರಿಂದ ಈ ಸಮಯದಲ್ಲಿ ಹೆಚ್ಚು ಜೇನು ಉತ್ಪಾದನೆ ಆಗುತ್ತದೆ. ಆದರೆ, ಲಾಕ್​ಡೌನ್ ಆಗಿರುವುದರಿಂದ ತೋಟಗಳಿಂದ ಜೇನುಪೆಟ್ಟಿಗಳನ್ನು ತಂದು ಜೇನು ತೆಗೆಯುವುದಕ್ಕೂ ಸಾಧ್ಯವಾಗುತ್ತಿಲ್ಲ. ಜತೆಗೆ ಕಾರ್ವಿುಕರ ಸಮಸ್ಯೆಯೂ ತೀವ್ರವಾಗಿದೆ. ವಾರದಲ್ಲಿ ಒಮ್ಮೆ ತೆಗೆಯುತ್ತಿದ್ದ ಜೇನನ್ನು ಹದಿನೈದು ದಿನಗಳಿಗೆ ಒಮ್ಮೆ ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ತೆಗೆಯಲಾಗುತ್ತಿದೆ. ಹೆಚ್ಚಿನ ಗೂಡನ್ನು ಬಿಚ್ಚಿ ಜೇನು ತೆಗೆಯಲು ಸಾಧ್ಯವಾಗುತ್ತಿಲ್ಲ.

    ರಾಜ್ಯದಲ್ಲಿ ವಿಶೇಷವಾಗಿ ಶಿರಸಿಯಲ್ಲಿ ಜೇನು ಕೃಷಿಕರ ಸಂಘ ಚಾಲ್ತಿಯಲ್ಲಿದೆ. ಇಲ್ಲಿನ ನೂರಕ್ಕೂ ಹೆಚ್ಚು ಜೇನು ಕೃಷಿಕರು ಸಾವಿರಾರು ಕೆ.ಜಿ. ಜೇನು ತುಪ್ಪವನ್ನು ಕಳೆದ 10-12 ವರ್ಷಗಳಿಂದ ಉತ್ಪಾದನೆ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಕನಿಷ್ಠ ಒಂದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದರು. ಆದರೆ, ಲಾಕ್​ಡೌನ್ ಆಗಿರುವುದರಿಂದ ಜೇನು ತೆಗೆಯುವುದಕ್ಕೂ ಸಾಧ್ಯವಾಗಿಲ್ಲ. ಇನ್ನು ಬೇಡಿಕೆ ಇಲ್ಲದೆ ಒಂದು ತಿಂಗಳಿಂದ ಸಾವಿರಾರು ಕೆ.ಜಿ. ಜೇನು ತುಪ್ಪ ಹಾಗೆಯೇ ಉಳಿದಿದೆ. ಹೀಗಾಗಿ ಕೃಷಿಕರಿಗೆ ಜೇನು ಕಹಿಯಾಗಿ ಪರಿಣಮಿಸಿದೆ.

    ಪ್ರಸಕ್ತ ವರ್ಷ ಜೇನು ತುಪ್ಪಕ್ಕೆ ಹಂಗಾಮಿನ ಆರಂಭದಿಂದಲೂ ಉತ್ತಮ ಬೇಡಿಕೆಯಿತ್ತು. ಆದರೆ, ಲಾಕ್​ಡೌನ್ ಆದಾಗಿನಿಂದ ಜೇನು ತುಪ್ಪಕ್ಕೆ ಕನಿಷ್ಠ ಬೇಡಿಕೆಯೂ ಇಲ್ಲ. ಮಾರಾಟವೂ ಸಾಧ್ಯವಾಗುತ್ತಿಲ್ಲ. ಹಲವರು ಪ್ರಮುಖ ಕೃಷಿಯಾಗಿ ಇದನ್ನೇ ಮಾಡುತ್ತಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಜೇನು ಕೊಯ್ಯಲು ಕೆಲಸಗಾರರ ಕೊರತೆಯೂ ಸಾಕಷ್ಟು ಕಾಡುತ್ತಿದೆ. | ರವೀಂದ್ರ ಹೆಗಡೆ ಶಿರಸಿ ಜೇನು ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts