More

    ಕೂಲಿ ಕುಟುಂಬದ ಕುವರಿ ಮುಂಡರಗಿ ತಾಲೂಕಿಗೆ ಫಸ್ಟ್

    ಮುಂಡರಗಿ: ಈ ಬಾಲಕಿಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹುಮ್ಮಸ್ಸು, ಛಲ. ತಂದೆ-ತಾಯಿ ನೆರವಿನೊಂದಿಗೆ ತಾನೂ ಕೂಲಿ ಕೆಲಸ ಮಾಡುತ್ತ ವಿದ್ಯಾರ್ಜನೆಗೈದು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 95.33 ಅಂಕ ಗಳಿಸಿ ಕಾಲೇಜ್ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

    ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜ್​ನ ಕಲಾ ವಿಭಾಗದ ವಿದ್ಯಾರ್ಥಿನಿ ರೇಣುಕಾ ಲಮಾಣಿ ಈ ಸಾಧನೆ ಮಾಡಿದ್ದಾರೆ. ಶಿರಹಟ್ಟಿ ತಾಲೂಕಿನ ಕೆರಳ್ಳಿತಾಂಡಾ ಗ್ರಾಮದವರಾದ ರೇಣುಕಾ ಲಮಾಣಿ ಅವರು ಹನುಮಂತಪ್ಪ-ಚನ್ನವ್ವ ದಂಪತಿಯ ಮೂವರು ಮಕ್ಕಳಲ್ಲಿ ಮೊದಲನೆಯವರು.

    ಕೂಲಿ ಕೆಲಸವೇ ಜೀವನಾಧಾರ:

    ಹನುಮಂತಪ್ಪ ಅವರಿಗೆ ಕೆರಳ್ಳಿತಾಂಡಾದಲ್ಲಿ 2 ಎಕರೆ ಮಳೆಯಾಶ್ರಿತ ಜಮೀನಿದೆ. ಉತ್ತಮ ಮಳೆಯಾದರೆ ಮಾತ್ರ ಬೆಳೆ ಕೈಸೇರುತ್ತದೆ. ಇಲ್ಲವಾದರೆ ಕಷ್ಟದಲ್ಲೇ ದಿನದೂಡಬೇಕು. ಇದನ್ನರಿತ ರೇಣುಕಾ ಅವರ ತಂದೆ-ತಾಯಿ ಮಡಿಕೇರಿ, ಚಿಕ್ಕಮಗಳೂರಿನ ಕಾಫಿ ಬೆಳೆ ಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ಸೇರಿದ್ದರು. ಈಗ ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ತಮ್ಮೂರಿಗೆ ಆಗಮಿಸಿದ್ದಾರೆ. ಬೇರೆಡೆ ಕೂಲಿ ಕೆಲಸ ಮಾಡಿ ಮಕ್ಕಳ ಶಿಕ್ಷಣಕ್ಕೆ ಹಣ ನೀಡುವ ಜೊತೆಗೆ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಹೆತ್ತವರೊಂದಿಗೆ ತಂಗಿ ಸುನೀತಾ ಒಂಬತ್ತನೇ ತರಗತಿಯಲ್ಲಿ ಓದುವಾಗಲೇ ಶಾಲೆ ಬಿಟ್ಟು ಕೂಲಿ ಕೆಲಸ ಮಾಡುತ್ತಿದ್ದಾಳೆ. ತಮ್ಮ ಕಿರಣ ರಜೆ ದಿನಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ವಡವಿ-ಹೊಸೂರ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ.

    ಹಾಸ್ಟೆಲ್​ನಲ್ಲಿ ವಾಸ:

    ರೇಣುಕಾ ಕೆರಳ್ಳಿತಾಂಡಾದಲ್ಲಿ 1ರಿಂದ 5ನೇ ತರಗತಿವರೆಗೆ, ಲಕ್ಷ್ಮೇಶ್ವರ ತಾಲೂಕಿನ ಗೊಜನೂರನ ಸರ್ಕಾರಿ ವಸತಿ ನಿಲಯದಲ್ಲಿ 6ರಿಂದ 10ನೇ ತರಗತಿವರೆಗೆ ಶಿಕ್ಷಣ ಪಡೆದರು. ನಂತರ ಮುಂಡರಗಿ ಸರ್ಕಾರಿ ಎಸ್ಸಿ-ಎಸ್ಟಿ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿದ್ದು ಜಗದ್ಗುರು ಅನ್ನದಾನೀಶ್ವರ ಕಾಲೇಜ್​ನಲ್ಲಿ ಪಿಯುಸಿ ಅಭ್ಯಾಸಗೈದು ಅಧಿಕ ಅಂಕಗಳನ್ನು ಗಳಿಸಿದ್ದಾರೆ.

    ಶಾಲಾ ದಿನಗಳಿಂದಲೂ ಕೂಲಿ ಕೆಲಸ ಮಾಡುತ್ತಿದ್ದ ರೇಣುಕಾ ಅವರು ಕಾಲೇಜ್​ನ ರಜೆ ದಿನಗಳಲ್ಲಿ ಸಹ ತಮ್ಮೂರಿಗೆ ಬಂದು ಬೇರೆಯವರ ಜಮೀನುಗಳಲ್ಲಿ ದಿನಕ್ಕೆ 150 ರೂ. ರಂತೆ ಕೃಷಿ ಕೂಲಿ ಕೆಲಸ ಮಾಡಿದ್ದಾರೆ. ಶಿಕ್ಷಣಕ್ಕೆ ಹಣ ಬೇಕಾದಾಗಲೂ ಕಾಲೇಜ್​ಗೆ ರಜೆ ಹಾಕಿ ಬೇರೆಯವರ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿ ಆ ಹಣದಲ್ಲಿ ವಿದ್ಯಾಭ್ಯಾಸದ ಸಾಮಗ್ರಿ ಖರೀದಿಸುತ್ತಿದ್ದರು.

    ನಮ್ಮದು ಕೂಲಿ ಕೆಲಸ ಮಾಡಿ ಬದುಕು ನಡೆಸುವ ಕುಟುಂಬ. ನನ್ನ ವಿದ್ಯಾಭ್ಯಾಸಕ್ಕೆ ಕುಟುಂಬದವರು ನೆರವಾಗಿದ್ದಾರೆ. ರಜೆ ದಿನಗಳಲ್ಲಿ ಮತ್ತು ಅಭ್ಯಾಸಕ್ಕೆ ಹಣದ ಅಗತ್ಯ ಬಂದಾಗ ಕಾಲೇಜ್​ಗೆ ರಜೆ ಹಾಕಿ ಕೆರಳ್ಳಿತಾಂಡಾದ ಬೇರೆಯವರ ಜಮೀನುಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ. ಮುಂದೆಯೂ ಜೀವನದಲ್ಲಿ ಕಷ್ಟವಾದರೂ ಕೂಲಿ ಕೆಲಸ ಮಾಡಿಕೊಂಡು ಪದವಿ ಶಿಕ್ಷಣವನ್ನು ಪೂರ್ಣಗೊಳಿಸುತ್ತೇನೆ. ಪ್ರಾಚಾರ್ಯರು, ಉಪನ್ಯಾಸಕರ ಪ್ರೋತ್ಸಾಹದಿಂದ ಉತ್ತಮ ಅಂಕ ಪಡೆದಿದ್ದೇನೆ.

    | ರೇಣುಕಾ ಲಮಾಣಿ, ವಿದ್ಯಾರ್ಥಿನಿ

    ಕಾಲೇಜ್​ನಲ್ಲಿ ಒಂದೊಂದು ವಿಷಯಕ್ಕೆ ಪ್ರತಿನಿತ್ಯ ಪರೀಕ್ಷೆ ನಡೆಸುತ್ತಿದ್ದೆವು. ಅದರೊಂದಿಗೆ ವಿದ್ಯಾರ್ಥಿನಿ ರೇಣುಕಾ ಪರಿಶ್ರಮದಿಂದ ಉತ್ತಮ ಅಂಕ ಗಳಿಸಿದ್ದಾಳೆ. ಬಡತನದಲ್ಲೂ ಕಷ್ಟಪಟ್ಟು ಅಭ್ಯಾಸ ಮಾಡಿ, ಏನಾದರೂ ಸಾಧಿಸಬೇಕು ಎನ್ನುವ ಗುರಿ ಹೊಂದಿರುವ ರೇಣುಕಾ ಪ್ರಯತ್ನ ಶ್ಲಾಘನೀಯ.

    | ಸಿ.ಎಸ್. ಅರಸನಾಳ, ಪ್ರಾಚಾರ್ಯ

    ಜಿಲ್ಲೆಗೆ ಲಿಂಬಣ್ಣ, ಪ್ರಶಾಂತ, ಅಂಕಿತಾ ಫಸ್ಟ್

    ಗದಗ: ಜಿಲ್ಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 9532 ವಿದ್ಯಾರ್ಥಿಗಳಲ್ಲಿ 6005 ಮಕ್ಕಳು ಉತ್ತೀರ್ಣರಾಗಿದ್ದಾರೆ.

    ಕಲಾ ವಿಭಾಗ: ಗದಗ ನಗರದ ಎಚ್.ಸಿ.ಇ.ಎಸ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಲಿಂಬಣ್ಣ ಬಡಿಗೇರ (ಶೇ. 97) ಪ್ರಥಮ, ಎಸ್.ಜೆ.ಜೆ.ಎಂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಂಗಮ್ಮ ಮಂಜುನಾಥ ಕುರ್ತಕೋಟಿ (ಶೇ. 96) ದ್ವಿತೀಯ, ಗಜೇಂದ್ರಗಡದ ಎಸ್.ವಿ.ವಿ.ಎಸ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶೇಫಾ ಬೋದ್ಲೆಖಾನ್ (ಶೇ. 95.5) ತೃತೀಯ ಸ್ಥಾನ ಪಡೆದಿದ್ದಾರೆ.

    ವಾಣಿಜ್ಯ ವಿಭಾಗ: ಬೆಟಗೇರಿಯ ಎ.ಎಸ್.ಎಸ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಶಾಂತ ನಾಕೋಡ (ಶೇ. 98.67) ಪ್ರಥಮ, ಶ್ರೇಯಾ ಕುಷ್ಟಗಿ (ಶೇ. 97.5), ಪ್ರತೀಕ್ಷಾ ಬನ್ಸಾಲಿ (ಶೇ. 97.5) ದ್ವಿತೀಯ, ನರಗುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರುಣಕುಮಾರ ಗದಗಿನ (ಶೇ. 96.67) ತೃತೀಯ ಸ್ಥಾನ ಪಡೆದಿದ್ದಾರೆ.

    ವಿಜ್ಞಾನ ವಿಭಾಗ: ಗದಗ ನಗರದ ಸನ್ಮಾರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಂಕಿತಾ ಸಂಶಿ (ಶೇ. 96.67) ಪ್ರಥಮ, ಗದಗ ನಗರದ ಬಿಪಿನ್ ಚಿಕ್ಕಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸೌರವ್ ಮೆಣಸಗಿ (ಶೇ. 96.67) ಪ್ರಥಮ, ನರೇಗಲ್ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮನೋಜಗೌಡ ರಬ್ಬನಗೌಡರ (ಶೇ. 96.63) ದ್ವಿತೀಯ, ಗದಗ ನಗರದ ವಿನಯ ಚಿಕ್ಕಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಯೋಗೇಶ ದೇಸಾಯಿ (ಶೇ. 96.17) ತೃತೀಯ ಸ್ಥಾನ ಪಡೆದಿದ್ದಾರೆ.

    ಅನುತ್ತೀರ್ಣ ವಿಷಯಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ಜು. 31 ಕೊನೇ ದಿನ. ಕಾಲೇಜಿನವರು ಪರೀಕ್ಷಾ ಶುಲ್ಕ ಸಂದಾಯ ಮಾಡಲು ಆಗಸ್ಟ್ 3, ಪರೀಕ್ಷಾ ಅರ್ಜಿಗಳನ್ನು ಉಪನಿರ್ದೇಶಕರ ಕಚೇರಿಗೆ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನವಾಗಿದೆ. ಒಂದು ವಿಷಯಕ್ಕೆ 140 ರೂ., ಎರಡು ವಿಷಯಗಳಿಗೆ 270 ರೂ., ಮೂರು ಅಥವಾ ಹೆಚ್ಚು ವಿಷಯಗಳಿಗೆ 400 ರೂ. ಶುಲ್ಕ ಪಾವತಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಎಸ್. ರಾಜೂರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts