More

    ಕೂಲಿಕಾರರ ಬದುಕಿಗೆ ಆಶಾಕಿರಣ ನರೇಗಾ

    ಲಕ್ಷ್ಮೇಶ್ವರ: ಕರೊನಾದಿಂದ ಸಂಕಷ್ಟದಲ್ಲಿರುವ ಕೂಲಿಕಾರರು, ಕೃಷಿ ಕಾರ್ವಿುಕರು, ವಲಸಿಗರಿಗೆ ನರೇಗಾ ಯೋಜನೆಯಡಿ ಉದ್ಯೋಗ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ರಾಮಣ್ಣ ಲಮಾಣಿ ಹೇಳಿದರು.

    ತಾಲೂಕಿನ ರಾಮಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೃಷಿ ಇಲಾಖೆಯಿಂದ ಕೈಗೊಂಡ ಇಳಿಜಾರು ಬದು ನಿರ್ಮಾಣ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿ ಅವರು ಮಾತನಾಡಿದರು.

    ಸ್ವಂತ ಊರಿನಲ್ಲಿಯೇ ಕೆಲಸ ಒದಗಿಸುವ ನರೇಗಾ ಯೋಜನೆ ಹಳ್ಳಿಗರ ಪಾಲಿಗೆ ಆಶಾಕಿರಣವಾಗಿದೆ. ಸಾರ್ವಜನಿಕರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಮಳೆಗಾಲ ಪ್ರಾರಂಭವಾಗುವವರೆಗೆ ತಾಲೂಕಿನೆಲ್ಲೆಡೆ ನರೇಗಾದಡಿ ಉದ್ಯೋಗ ಕಲ್ಪಿಸಿ ಸಕಾಲಕ್ಕೆ ಕೂಲಿ ಹಣ ಪಾವತಿಸಲು ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.

    ಜಿಪಂ ಸಿಇಒ ಡಾ. ಆನಂದ ಕೆ. ಮಾತನಾಡಿ, ನರೇಗಾದಡಿ ಹಳ್ಳಿಗಳಲ್ಲಿ ವೈಯಕ್ತಿಕ, ಸಾರ್ವಜನಿಕ ಕೆಲಸಗಳನ್ನು ಮಾಡಬಹುದು. ಕೃಷಿ ಇಲಾಖೆಯ ಜಲಾಮೃತ ಯೋಜನೆಯಡಿ ಉದ್ಯೋಗ ಕಲ್ಪಿಸುವ ಜತೆಗೆ ಅಂತರ್ಜಲ ವೃದ್ಧಿ, ಭೂ ಸವಕಳಿ ತಪ್ಪಿಸುವುದು, ಫಲವತ್ತತೆ ಕಾಪಾಡಲು ಕೈಗೊಂಡಿರುವ ಇಳಿಜಾರು ಬದು ನಿರ್ಮಾಣ (ದಿಬ್ಬದಿಂದ ಕಣಿವೆವರೆಗೆ) ಕಾರ್ಯ ರೈತರಿಗೆ ಉಪಯುಕ್ತವಾಗಿದೆ. ವಲಸೆ ಕಾರ್ವಿುಕರು ಸೇರಿ ಗ್ರಾಮೀಣ ಪ್ರದೇಶಗಳ ಕೂಲಿಕಾರರಿಗೆ ಉದ್ಯೋಗ ನೀಡಲು ಜಿಲ್ಲೆಯ 122 ತಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಕಾರ್ಯ ನಡೆಯುತ್ತಿವೆ. 100 ದಿನಗಳ ಬದಲಾಗಿ 150 ದಿನಗಳು ಕೆಲಸ ನೀಡಲಾಗುವುದು. ಸರ್ಕಾರದಿಂದ ಕೂಲಿ ಕಾರ್ವಿುಕರಿಗೆ 275 ಕೂಲಿ ಮತ್ತು ಸಾಮಗ್ರಿ ವೆಚ್ಚ 10 ರೂ. ಸೇರಿ 285 ರೂ. ನೀಡಲಾಗುತ್ತದೆ. ಕೆಲಸದ ಸಮಯದಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.

    ತಾಪಂ ಇಒ ಡಾ. ಎನ್.ಎಚ್. ಓಲೇಕಾರ ಮಾತನಾಡಿ, ಕರೊನಾ ಅವಧಿಯಲ್ಲಿ 37 ಸಾವಿರ ಮಾನವ ದಿನಗಳನ್ನು ಸೃಜಿಸಿ ಉದ್ಯೋಗ ಕಲ್ಪಿಸಿ 10 ಕೋಟಿ ರೂ. ಕೂಲಿ ಹಣ ಪಾವತಿಸಲಾಗಿದೆ ಎಂದು ತಿಳಿಸಿದರು.

    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ ನರಸಮ್ಮನವರ, ತಾಪಂ ಎಂಎನ್​ಆರ್​ಇಜಿ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ, ಪಿ.ಕೆ. ಹೊನ್ನಪ್ಪನವರ, ಎ.ಸಿ. ಭಗವತಿ, ಇತರರಿದ್ದರು.

    ಕಾರ್ವಿುಕರಿಗೆ ನರೇಗಾ ಕಾಮಗಾರಿ ಆಸರೆ

    ನರೇಗಲ್ಲ: ಗ್ರಾಮದ ಕೂಲಿ ಕಾರ್ವಿುಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ ಎಂದು ಜಕ್ಕಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್. ರಿತ್ತಿ ಹೇಳಿದರು.

    ಜಕ್ಕಲಿ ಗ್ರಾಮದ ಹೊಸಳ್ಳಿ ರಸ್ತೆಯಲ್ಲಿ ಗ್ರಾ.ಪಂ. ಹಾಗೂ ಕೃಷಿ ಇಲಾಖೆ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ‘ಉದ್ಯೋಗ ಖಾತ್ರಿ ಯೋಜನೆಯ ಬದು ನಿರ್ಮಾಣ ಕಾಮಗಾರಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕಾರ್ವಿುಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕೂಲಿಕಾರ್ವಿುಕರು ತಮ್ಮ ಚಿಕ್ಕಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಬರಬಾರದು. ಕೆಲಸಕ್ಕೆ ಬರುವ ಕಾರ್ವಿುಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯದಲ್ಲಿ ಸಮಸ್ಯೆ ಇದ್ದವರು ಕೆಲಸಕ್ಕೆ ಹೋಗಬಾರದು’ ಎಂದರು.

    ನರೇಗಲ್ಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಗದೀಶ ಹಾದಿಮನಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಹೋಬಳಿಯಾದ್ಯಂತ ರೈತರ ಜಮೀನುಗಳಲ್ಲಿ ಬದು ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಬದು ನಿರ್ವಣದಿಂದಾಗಿ ನೀರು ಮತ್ತು ಮಣ್ಣಿನ ಸಂರಕ್ಷಣೆಯಾಗುತ್ತದೆ. ಭೂಮಿ ಫಲವತ್ತತೆ ಹೆಚ್ಚಾಗುವ ಮೂಲಕ ಉತ್ತಮ ಫಸಲು ಬರುತ್ತದೆ. ರೈತರು ಬದು ನಿರ್ಮಾಣ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಗ್ರಾ.ಪಂ. ಅಧ್ಯಕ್ಷೆ ಯಲ್ಲವ್ವ ಜಾಲಣ್ಣವರ, ತಾ.ಪಂ. ಸದಸ್ಯ ಅಂದಾನಪ್ಪ ದೊಡ್ಡಮೇಟಿ, ಗ್ರಾ.ಪಂ. ಸದಸ್ಯ ಪ್ರಕಾಶ ವಾಲಿ, ಹರ್ಷವರ್ಧನ ದೊಡ್ಡಮೇಟಿ, ಶಿವನಗೌಡ ಪಾಟೀಲ, ತಾ.ಪಂ. ಇಒ ಸಂತೋಷಕುಮಾರ ಪಾಟೀಲ, ಶೋಭಾ ಪಲ್ಲೇದ, ರತ್ನಾ ಶ್ಯಾಶಟ್ಟಿ, ಶ್ರೀದೇವಿ ಆದಿ, ನಿರ್ಮಲಾ ಕೊಪ್ಪದ, ರೇಣುಕಾ ತಿಲಗಾರ, ಖುತ್ತುಜಾ ಮುಲ್ಲಾ, ಗ್ರಾ.ಪಂ. ಸಿಬ್ಬಂದಿ ಸೋಮಶೇಖರಯ್ಯ ಓದಿಸೋಮಠ, ಈರಣ್ಣ ಪತ್ತಾರ, ರೇಷ್ಮಾ ಕಲ್ಲೂರ, ಸಂಗಮೇಶ ಮೆಣಸಗಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts