More

    ಕುಸ್ತಿ ನೋಡಲು ಮುಗಿಬಿದ್ದ ಅಭಿಮಾನಿಗಳು

    ದಾವಣಗೆರೆ: ಅತ್ತ ಚೆನ್ನೈನಲ್ಲಿ ಶುಕ್ರವಾರ ಐಪಿಎಲ್ ಹಬ್ಬಕ್ಕೆ ಚಾಲನೆ ದೊರೆತರೆ, ಬೆಣ್ಣೆನಗರಿ ದಾವಣಗೆರೆಯಲ್ಲಿ ಕುಸ್ತಿ ಕ್ರೀಡೆಯ ಸಂಭ್ರಮ. ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆಯ ಅಂಗವಾಗಿ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಆರಂಭವಾದ ಬಯಲು ಜಂಗಿ ಕುಸ್ತಿ ಸ್ಪರ್ಧೆಗಳನ್ನು ಸಹಸ್ರಾರು ಜನರು ವೀಕ್ಷಿಸಿದರು.
     ಮೂರು ದಿನ ನಡೆಯಲಿರುವ ಈ ಸ್ಪರ್ಧೆಗಳನ್ನು ನೋಡಲು ಬರುವ ಪ್ರೇಕ್ಷಕರಿಗಾಗಿ ಸುತ್ತಲೂ ಗ್ಯಾಲರಿ ನಿರ್ಮಿಸಲಾಗಿದೆ. ಮೊದಲ ದಿನವೇ 10 ಸಾವಿರಕ್ಕೂ ಹೆಚ್ಚು ಮಂದಿ ಕ್ರೀಡೆಯನ್ನು ವೀಕ್ಷಿಸಿದರು. ಉರಿ ಬಿಸಿಲನ್ನೂ ಲೆಕ್ಕಿಸದೆ ಕುಸ್ತಿಯ ಪಟ್ಟುಗಳನ್ನು ನೋಡಿ ಆನಂದಿಸಿದರು. ನಗರ ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಿಂದಲೂ ಆಸಕ್ತರು ಬಂದಿದ್ದರು. ಅವರಲ್ಲಿ ಯುವಕರು, ವೃದ್ಧರೂ ಇದ್ದರು. ಗ್ಯಾಲರಿ ತುಂಬಿ ನೆಲದ ಮೇಲೂ ಕುಳಿತಿದ್ದರು.
     ಅಖಾಡದಲ್ಲಿ ಕುಸ್ತಿ ಪಟುಗಳು ಹಾಕುತ್ತಿದ್ದ ಪಟ್ಟುಗಳನ್ನು ಕೆಳಗೆ ನಿಂತು ನೋಡುತ್ತಿದ್ದ ಕ್ರೀಡಾಭಿಮಾನಿಗಳು ವಿಶ್ಲೇಷಣೆ ಮಾಡುವುದು ಕಂಡುಬಂದಿತು. ಆಯೋಜಕರು ಆಗಾಗ ಧ್ವನಿವರ್ಧಕದ ಮೂಲಕ ಸೂಚನೆಗಳನ್ನು ನೀಡುತ್ತಿದ್ದರು. ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಮಧ್ಯಾಹ್ನದ ವರೆಗೆ, ನಂತರ ಸಂಜೆಯಿಂದ ರಾತ್ರಿಯ ವರೆಗೂ ಸ್ಪರ್ಧೆಗಳು ಮುಂದುವರಿದವು.
     ಹರಿಯಾಣ, ಮುಂಬೈ, ಪೂನಾ, ಕೊಲ್ಲಾಪುರ, ಸೊಲ್ಲಾಪುರ, ಈಚಲಕರಂಜಿ, ಬೆಳಗಾವಿ ಅಲ್ಲದೇ ದಾವಣಗೆರೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಪೈಲ್ವಾನರು ಭಾಗಿಯಾಗಿದ್ದರು. ರಾಜ್ಯ, ರಾಷ್ಟ್ರಮಟ್ಟದಲ್ಲೂ ಆಡಿದವರಿದ್ದಾರೆ. 80ಕ್ಕೂ ಹೆಚ್ಚು ಜೋಡಿಗಳನ್ನು ಶುಕ್ರವಾರ ಆಡಿಸಲಾಯಿತು. ಐದಾರು ಮಂದಿ ರೆಫರಿಗಳು ಕಾರ್ಯ ನಿರ್ವಹಿಸಿದರು.
     ಕುಸ್ತಿ ಅಖಾಡವನ್ನು ಹೊಸ ಮಣ್ಣಿನಿಂದ ತುಂಬಿಸಲಾಗಿದ್ದು ಸುತ್ತಲೂ ಫ್ಲಡ್‌ಲೈಟ್‌ಗಳನ್ನು ಅಳವಡಿಸಿ ಹೊನಲು-ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಜನಜಂಗುಳಿಯನ್ನು ನಿಯಂತ್ರಿಸಲು ಅಖಾಡದ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಪರ ಸ್ಥಳಗಳಿಂದ ಬಂದವರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
     ಕುಸ್ತಿ ಪಟುಗಳ ಸಂಘದ ಅಧ್ಯಕ್ಷ ಬಿ. ವೀರಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ದುರ್ಗಾಂಬಿಕಾ ದೇವಿ ಜಾತ್ರೆ ನಿಮಿತ್ತ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಮೂರು ದಿನಗಳ ಕಾಲ ಬಯಲು ಜಂಗಿ ಕುಸ್ತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
     ಹೆಸರಾಂತ ವಿಕ್ಕಿ ಪೈಲ್ವಾನ್, ಸುಮಿತ್ ಪೈಲ್ವಾನ್ ಸೇರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕುಸ್ತಿ ಪೈಲ್ವಾನರು ಈಗಾಗಲೇ ದಾವಣಗೆರೆಗೆ ಬಂದಿದ್ದು, ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
     ಮೇಯರ್ ವಿನಾಯಕ ಪೈಲ್ವಾನ್, ಮಾಜಿ ಮೇಯರ್ ಎಚ್.ಬಿ. ಗೋಣೆಪ್ಪ,  ಬಿ. ವೀರಣ್ಣ, ಉಮೇಶ್ ಸಾಳಂಕಿ, ಕೆ.ಎಂ. ವೀರೇಶ್, ನೀಲಗಿರಿಯಪ್ಪ, ಪಿ.ಜೆ. ನಾಗರಾಜ, ಜಯಣ್ಣ, ರುದ್ರೇಶ್ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts