More

    ಕುಮಟಾ ಬೈಪಾಸ್​ಗೆ ಬೇಕಾಗಿದೆ ಜಾಗ

    ಸುಭಾಸ ಧೂಪದಹೊಂಡ ಕಾರವಾರ

    ಕುಮಟಾ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ಈಗಿರುವಲ್ಲಿಯೇ ಕೊಂಚ ವಿಸ್ತರಿಸಿ ಅಭಿವೃದ್ಧಿ ಮಾಡುವ ಕಾರ್ಯವನ್ನು ಚತುಷ್ಪಥ ಗುತ್ತಿಗೆ ಪಡೆದ ಐಆರ್​ಬಿ ಪ್ರಾರಂಭಿಸಿದೆ. ಈ ನಡುವೆ ಬೈಪಾಸ್ ನಿರ್ವಣಕ್ಕೆ ಅರಣ್ಯ ಭೂಮಿ ವರ್ಗಾವಣೆ ಮಾಡುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್​ಎಚ್​ಎಐ) ಅರಣ್ಯ ಮಂತ್ರಾಲಯಕ್ಕೆ ಅರ್ಜಿ ಸಲ್ಲಿರುವುದು ಬೆಳಕಿಗೆ ಬಂದಿದೆ.

    ಎನ್​ಎಚ್​ಎಐ ಮಾರ್ಚ್ 19ರಂದು ಅರಣ್ಯ ಮಂತ್ರಾಲಯಕ್ಕೆ ಅರ್ಜಿ ಸಲ್ಲಿಸಿದ್ದು, 100 ವರ್ಷಗಳ ಅವಧಿಗೆ ಒಟ್ಟು 6.15 ಹೆಕ್ಟೇರ್ ಅರಣ್ಯ ಭೂಮಿಯನ್ನು ತನಗೆ ಹಸ್ತಾಂತರಿಸುವಂತೆ ಮನವಿ ಮಾಡಿದೆ. ಅಂದಾಜು 224.75 ಕೋಟಿ ರೂ.ಗಳ ಬೈಪಾಸ್ ಕಾಮಗಾರಿಗಳ ಯೋಜನಾ ವಿವರವನ್ನು ಎನ್​ಎಚ್​ಎಐ ನೀಡಿದೆ. ಇದರಲ್ಲಿ 2 ದೊಡ್ಡ ಸೇತುವೆ, 2 ಫ್ಲೈ ಓವರ್, 1 ಅಂಡರ್ ಪಾಸ್, 3 ವೆಹಿಕಲ್ ಓವರ್ ಪಾಸ್, 2 ಲೈಟ್ ವೆಹಿಕಲ್ ಅಂಡರ್ ಪಾಸ್, 8 ಬಾಕ್ಸ್ ಕಲ್ವರ್ಟ್ ನಿರ್ಮಾಣ ಮಾಡುವ ಬಗ್ಗೆ ಎನ್​ಎಚ್​ಎಐ ಪ್ರಾಥಮಿಕ ಅಂದಾಜು ರೂಪಿಸಿದೆ.

    ಮಣಕಿ ಗ್ರಾಮದಲ್ಲಿ 1.86, ಕಲಕೇರಿ ಗ್ರಾಮದಲ್ಲಿ 2.54, ಹೊಸಹೆರವಟ್ಟಾದಲ್ಲಿ 0.78, ಬಗ್ಗೋಣ ಗ್ರಾಮದಲ್ಲಿ 0.81, ಕಲಭಾಗ ಗ್ರಾಮದಲ್ಲಿ 0.16 ಹೆಕ್ಟೇರ್ ಅರಣ್ಯ ಭೂಮಿಯ ಹಸ್ತಾಂತರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಬೈಪಾಸ್ ನಿರ್ವಣಕ್ಕೆ ಎಷ್ಟು ಖಾಸಗಿ ಭೂಮಿ ಬೇಕು ಎಂಬ ಬಗ್ಗೆ ಎನ್​ಎಚ್​ಎಐ ಇನ್ನೂ ಸರ್ವೆ ನಡೆಸಿಲ್ಲ.

    ಹಾಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 178.80 ಕಿಮೀ.ನಿಂದ 180.5 ಕಿಮೀ.ವರೆಗೆ ಬೈಪಾಸ್ ಆಗಲಿದೆ. ಅಂದರೆ, ಕುಮಟಾ ಪಟ್ಟಣ ಪ್ರವೇಶಕ್ಕೂ ಮುಂಚೆ ಹೆದ್ದಾರಿ ತಿರುವು ಪಡೆದುಕೊಳ್ಳಲಿದ್ದು, ಮರಳಿ ಹಂದಿಗೋಣದಲ್ಲಿ ಹಾಲಿ ಚತುಷ್ಪಥವನ್ನು ಸೇರಿಕೊಳ್ಳಲಿದೆ. ಒಟ್ಟು 7.790 ಕಿಮೀ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕಿದೆ. ಇದರಲ್ಲಿ 4.968 ಕಿಮೀ ಎರಡೂ ಕಡೆ ಸರ್ವೀಸ್ ರಸ್ತೆ ಇರಲಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.

    ಭೂಸ್ವಾಧೀನ ವೆಚ್ಚ ಹೆಚ್ಚು: ಹಾಲಿ ರಸ್ತೆಯಲ್ಲಿ ವಸತಿ ಸಮುಚ್ಚಯಗಳು, ವಾಣಿಜ್ಯ ಕಟ್ಟಡಗಳು, ಆಸ್ಪತ್ರೆ, ಶಾಲೆ, ಪೆಟ್ರೋಲ್ ಬಂಕ್, 100 ಮೀ ವ್ಯಾಪ್ತಿಯಲ್ಲಿ ಪುರಾತತ್ವ ಇಲಾಖೆಗೆ ಸೇರಿದ ಸಂರಕ್ಷಿತ ತಾಣಗಳು ಇವೆ. ಇವುಗಳ ಭೂ ಸ್ವಾಧೀನ ಹಾಗೂ ಪುನರ್​ವಸತಿ ವೆಚ್ಚ ತೀರ ಹೆಚ್ಚಲಿದೆ. ಬೈಪಾಸ್ ನಿರ್ಮಾಣ ಮಾಡಿದಲ್ಲಿ ಶೇ. 18ರಷ್ಟು ಮಾತ್ರ ಕೃಷಿ ಹಾಗೂ ಇತರ ವಸತಿ ಪ್ರದೇಶದಲ್ಲಿ ರಸ್ತೆ ಹೋಗಲಿದೆ ಎಂದು ಮಂಗಳೂರಿನ ಎನ್​ಎಚ್​ಎಐ ಡಿಜಿಎಂ ಹಾಗೂ ಯೋಜನಾ ನಿರ್ದೇಶಕ ಶಿಶು ಮೋಹನ್ ಅವರು ಬೈಪಾಸ್ ನಿರ್ಮಾಣ ಪ್ರಸ್ತಾಪಕ್ಕೆ ಕಾರಣ ನೀಡಿದ್ದಾರೆ.
    ವಿಳಂಬ ಏಕೆ?: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪ್ರಾರಂಭವಾಗಿ 6 ವರ್ಷ ಕಳೆದಿದೆ. ಶೇ. 75 ರಷ್ಟು ಕಾಮಗಾರಿ ಮುಕ್ತಾಯವಾಗಿದೆ ಎಂದು ಗುತ್ತಿಗೆ ಕಂಪನಿ ಐಆರ್​ಬಿ ತಿಳಿಸಿದೆ. ಈಗಾಗಲೇ ಟೋಲ್ ಗೇಟ್ ಸಹ ಪ್ರಾರಂಭವಾಗಿದೆ. ಆದರೆ, ಕುಮಟಾದಲ್ಲಿ ಬೈಪಾಸ್ ನಿರ್ಮಾಣ ಮಾಡುವ ಸಂಬಂಧ ಪರ-ವಿರೋಧ ಚರ್ಚೆಯ ಕಾರಣಕ್ಕೆ ಇನ್ನೂ ಚತುಷ್ಪಥವಾಗಿಲ್ಲ. ಹಾಗಾಗಿ ಸದ್ಯ ಹಾಲಿ ಹೆದ್ದಾರಿಯನ್ನೇ ಅಭಿವೃದ್ಧಿ ಮಾಡಿ, ನಂತರ ಎಲ್ಲ ಅನುಮತಿ ಪಡೆದು ಕೆಲ ವರ್ಷಗಳಲ್ಲಿ ಬೈಪಾಸ್ ನಿರ್ವಿುಸಲು ಎನ್​ಎಚ್​ಎಐ ಯೋಜಿಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

    ಕುಮಟಾದಲ್ಲಿ ಸದ್ಯಕ್ಕಂತೂ ಬೈಪಾಸ್ ನಿರ್ಮಾಣ ಮಾಡುವುದಿಲ್ಲ. ಹಾಲಿ ಹೆದ್ದಾರಿಯನ್ನೇ ಅಭಿವೃದ್ಧಿಪಡಿಸುವ ಕಾರ್ಯ ಪ್ರಾರಂಭವಾಗಿದೆ ಎಂಬ ಮಾಹಿತಿ ಇದೆ.
    ದಿನಕರ ಶೆಟ್ಟಿ ಕುಮಟಾ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts