More

    ಕುಡುಮಲಕುಂಟೆಯಲ್ಲಿ 3ನೇ ಹಂತದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ರೈತರ ವಿರೋಧ

    ಗೌರಿಬಿದನೂರು: ತಾಲೂಕಿನ ಕುಡುಮಲಕುಂಟೆಯ 834 ಎಕರೆ ಪ್ರದೇಶದಲ್ಲಿ ಮೂರನೇ ಹಂತದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ನೇತೃತ್ವದಲ್ಲಿ ಶುಕ್ರವಾರ ರೈತ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯಿತು.

    ಮೊದಲು ಹಾಗೂ ಎರಡನೇ ಹಂತದ ಕೈಗಾರಿಕಾ ಅಭಿವೃದ್ಧಿಯೇ ಪೂರ್ಣಗೊಂಡ್ಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡರು, ಮೊದಲು ಈ ಎರಡನ್ನೂ ಪೂರ್ಣಗೊಳಿಸಿ 3ನೇ ಹಂತ ಕೈಗೆತ್ತಿಕೊಳ್ಳಿ ಎಂಬ ಸಲಹೆ ನೀಡಿದರು.

    ಈಗಾಗಲೆ ದೊಡ್ಡಕುರುಗೋಡು ಕೆರೆಗೆ ಎಚ್.ಎನ್.ವ್ಯಾಲಿ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಭಾಗದಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ಜಮೀನುಗಳನ್ನು ಭೂಸ್ವಾಧೀನ ವ್ಯಾಪ್ತಿಗೆ ಒಳಪಡಿಸಲಾಗಿದೆ. ಕೂಡಲೇ ಕೃಷಿ ಜಮೀನನ್ನು ಪಟ್ಟಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

    ಅಭಿಪ್ರಾಯ ಕೇಳಿದ ಶಾಸಕ ಶಿವಶಂಕರರೆಡ್ಡಿ, ಜಮೀನು ಕಳೆದುಕೊಳ್ಳುವ ರೈತರಿಗೆ ಮಾರುಕಟ್ಟೆ ದರದಲ್ಲಿ ಸೂಕ್ತ ಬೆಲೆ ದೊರಕಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವ ಜತೆಗೆ ಭೂಮಿ ನೀಡಿದ ಕುಟುಂಬದ ಸದಸ್ಯರಿಗೆ ಉದ್ಯೋಗಳಲ್ಲಿ ಆದ್ಯತೆ ನೀಡುವ ಭರವಸೆಯಿತ್ತರು.
    ಸರ್ಕಾರ ಸರ್ವೇ ನಡೆಸಿ, ಉತ್ತಮ ಬೆಲೆ ನಿಗದಿಪಡಿಸಲಿದೆ. ರೈತರು ಅಗತ್ಯ ದಾಖಲೆಗಳನ್ನು ಇಲಾಖೆಗೆ ಒದಗಿಸಬೇಕು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಬಿ.ವೆಂಕಟೇಶ್ ತಿಳಿಸಿದರು.

    ತಾಲೂಕು ಪಂಚಾತಿ ಮಾಜಿ ಉಪಾಧ್ಯಕ್ಷ ಎಚ್.ಎನ್.ಪ್ರಕಾಶ್‌ರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಾರೆಡ್ಡಿ, ಎಪಿಎಂಸಿ ನಿರ್ದೇಶಕ ಜಿ. ಬೊಮ್ಮಣ್ಣ, ರೈತರಾದ ಡಿ.ಡಿ.ಸತ್ಯನಾರಾಯಣ್, ನಾಗರಾಜ್, ಪ್ರಭಾಕರ್, ಚಿಕ್ಕನಾರಾಯಣಪ್ಪ ಇತರರಿದ್ದರು.

    ಊರು ಬಿಡಬೇಕಾಗುತ್ತೆ…!: ಕೈಗಾರಿಕೆಗಳ ಸ್ಥಾಪನೆಂದ ಈ ಭಾಗದ ಪರಿಸರ ಹಾಳಾಗುತ್ತಿದೆ. ಎರಡು ಹಂತದ ಕೈಗಾರಿಕೆಗಳ ಅಭಿವೃದ್ಧಿಯ ಸಂದರ್ಭದಲ್ಲಿ ಪರಿಸರ ಬೆಳೆಸುವ ಕೆಲಸವಾಗಿಲ್ಲ, ಮುಂದೊಂದು ದಿನ ಸಮೀಪದ ಗ್ರಾಮಗಳ ಜನರು ಊರು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ವಕೀಲ ಜಿ. ರಂಗರಾಜು, ಕೈಗಾರಿಕೆಗಳನ್ನು ಬೇರೆ ಕಡೆ ಅಭಿವೃದ್ಧಿಪಡಿಸುವುದು ಸೂಕ್ತ ಎಂಬ ಸಲಹೆ ನೀಡಿದರು.

    ಸಾಗುವಳಿ ಚೀಟಿ ಅರ್ಜಿ ಸಲ್ಲಿಸಿರುವ ರೈತರಿಗೆ ವಿಶೇಷ ಪ್ರಕರಣದಡಿ ಭೂಮಿ ಮಂಜೂರು ಮಾಡಿಸಿ, ಅವರಿಗೂ ಪರಿಹಾರ ದೊರಕಿಸಿಕೊಡಲಾಗುವುದು. ಯಾವುದೇ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ.
    ಎನ್.ಎಚ್.ಶಿವಶಂಕರರೆಡ್ಡಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts