More

    ಕುಡುಕರ ತಾಣವಾದ ಶಿಗ್ಗಾಂವಿ ಹಳೇ ಬಸ್ ನಿಲ್ದಾಣ

    ಸುರೇಶ ಯಲಿಗಾರ ಶಿಗ್ಗಾಂವಿ

    ಪಟ್ಟಣದ ವಾಕರಸಾ ಸಂಸ್ಥೆಯ ಹಳೇ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರ್ ಒಂದೆಡೆಯಾದರೆ, ಇನ್ನೊಂದೆಡೆ ಬೆಳಗಾದರೆ ಸಾಕು ಕುಡುಕರು ಬಸ್ ನಿಲ್ದಾಣವನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿರುವುದು ಗೋಚರಿಸುತ್ತದೆ. ಇದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

    ಕಾಲ ಕ್ರಮೇಣ ಪಟ್ಟಣ ಅಭಿವೃದ್ಧಿ ಹೊಂದಿದ ನಂತರ ಹೊಸ ಬಸ್ ನಿಲ್ದಾಣ ನಿರ್ವಿುಸಲಾಯಿತು. ನಂತರ ಹಳೇ ಬಸ್ ನಿಲ್ದಾಣಕ್ಕೆ ಬಹುತೇಕ ಬಸ್​ಗಳು ಬರುತ್ತಿಲ್ಲ. ಕೆಲವೊಂದು ಬಸ್​ಗಳು ಬಂದರೂ ಖಾಸಗಿ ವಾಹನಗಳ ಬೇಕಾಬಿಟ್ಟಿ ನಿಲುಗಡೆಯಿಂದ ಅದಕ್ಕೆ ಜಾಗ ಇಲ್ಲದಂತಾಗಿದೆ.

    ಹಳೇ ಬಸ್ ನಿಲ್ದಾಣ ಬೆಳ್ಳಂಬೆಳಗ್ಗೆಯೇ ಕುಡುಕರ ತಾಣವಾಗಿ ಮಾರ್ಪಡುತ್ತದೆ. ನಿಲ್ದಾಣದಲ್ಲಿ ಕುಳಿತು ರಾಜಾರೋಷವಾಗಿ ಮದ್ಯ ಸೇವಿಸುತ್ತಾರೆ. ಇಲ್ಲಿ ಇಡೀ ದಿನ ಕುಳಿತು ಹರಟೆ ಹೊಡೆದರೂ ಕೇಳುವವರಿಲ್ಲ. ನಿಲ್ದಾಣದ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಕಸ ಕಡ್ಡಿ, ತ್ಯಾಜ್ಯವನ್ನು ಇಲ್ಲಿ ಸುರಿಯಲಾಗುತ್ತಿದೆ. ಇದರಿಂದ ನಿಲ್ದಾಣದ ಸುತ್ತಲಿನ ವಾತಾವರಣ ಹದಗೆಟ್ಟಿದೆ. ಇಷ್ಟೊಂದು ಅವಾಂತರ ನಡೆಯುತ್ತಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಮೊದಲಿನಂತೆ ಹಳ್ಳಿಗಳ ಬಸ್​ಗಳನ್ನು ಪಟ್ಟಣದ ಹಳೇ ಬಸ್ ನಿಲ್ದಾಣದಿಂದ ಓಡಿಸಲು ವಾಕರಸಾ ಸಂಸ್ಥೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬುದು ಜನರ ಒತ್ತಾಯ.

    ನಾನು ಸವಣೂರ ಘಟಕಕ್ಕೆ ಹೊಸದಾಗಿ ಬಂದಿದ್ದೇನೆ. ಹಳೇ ಬಸ್ ನಿಲ್ದಾಣದ ಅವಸ್ಥೆ ಬಗ್ಗೆ ಮಾಹಿತಿ ಇಲ್ಲ. ಎರಡು ದಿನದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಜರುಗಿಸುತ್ತೇನೆ.

    | ಶೇಖರ ನಾಯ್ಕ, ಸವಣೂರ ಡಿಪೋ ಮ್ಯಾನೇಜರ್

    ಬಸ್ ನಿಲ್ದಾಣ ಅಕ್ಕಪಕ್ಕ ಕಸ ಹಾಕುವವರು, ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

    | ಮಲ್ಲಯ್ಯ ಹಿರೇಮಠ, ಶಿಗ್ಗಾಂವಿ ಪುರಸಭೆ ಮುಖ್ಯಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts