More

    ಕುಡಿಯುವ ನೀರಿನ ಸಮಸ್ಯೆ ಆಗದಿರಲಿ

    ರಬಕವಿ/ಬನಹಟ್ಟಿ: ನಗರಸಭೆಯಾದ್ಯಂತ ಇದೀಗ ದಿನ ಬಿಟ್ಟು ದಿನ ನೀರು ಒದಗಿಸಬೇಕು. ಸರ್ಕಾರಿ ಬಾವಿಯೊಳಗಿನ ಮೋಟರ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗದ ರೀತಿಯಲ್ಲಿ ಸಕಲ ಸಿದ್ಧತೆಗಳನ್ನು ನಡೆಸಿಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಶುಕ್ರವಾರ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು. ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬೇಸಿಗೆಯ ಬಿಸಿ ತೀವ್ರವಾಗಿದ್ದು, ಏಪ್ರಿಲ್ ತಿಂಗಳಲ್ಲಿಯೇ ಕೃಷ್ಣೆ ಹಾಗೂ ಘಟಪ್ರಭಾ ನದಿಗಳು ಸಂಪೂರ್ಣ ಬತ್ತುವ ಸಾಧ್ಯತೆ ಇದೆ. ಕುಡಿಯುವ ನೀರಿಗಾಗಿ ಎಲ್ಲ 31 ವಾರ್ಡ್‌ಗಳ ಸದಸ್ಯರ ಸಹಮತದೊಂದಿಗೆ ಸಮಾನ ಮನಸ್ಸಿನಿಂದ ಅಲ್ಲಲ್ಲಿ ನೀರು ಸದ್ಬಳಕೆ ಮಾಡಿಕೊಳ್ಳಬೇಕು. ಶುದ್ಧ ನೀರಿನ ಘಟಕಗಳ ಮೇಲೆ ನಿಗಾವಹಿಸಿ ಈಗಾಗಲೇ ನಿರ್ವಹಣೆಯಾಗದಿರುವ ಘಟಕಗಳು ಶೀಘ್ರ ದುರಸ್ತಿಯಾಗಬೇಕು ಎಂದು ಹೇಳಿದರು.

    ಸಭೆಯಲ್ಲಿಯೇ ಜಿಲ್ಲಾಧಿಕಾರಿ ಜತೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಅಲ್ಪಾವಧಿ ಟೆಂಡರ್‌ನೊಂದಿಗೆ ಕನಿಷ್ಠ 50 ಲಕ್ಷ ರೂ. ಗಳಷ್ಟಾದರೂ ನೀರಿನ ಸಮಸ್ಯೆಗೆ ಶೀಘ್ರ ಹಣ ಬಿಡುಗಡೆಗೊಳಿಸಬೇಕು. ಸರ್ಕಾರಿ ಹಾಗೂ ಖಾಸಗಿ ಬಾವಿ, ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು. ವಿಕೋಪ ಸ್ಥಿತಿಯಲ್ಲಿರುವ ಪ್ರದೇಶದಲ್ಲಿ ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ನೀರಿನ ಅಭಾವ ತಪ್ಪಿಸಲು ನಗರಸಭೆ ಸಕಲ ರೀತಿಯಲ್ಲಿ ಸನ್ನದ್ಧಗೊಂಡಿದೆ ಎಂದರು.

    ಸದಸ್ಯರು ಗೈರು- ಶಾಸಕರು ಗರಂ: ಅತ್ಯಂತ ಮಹತ್ವದ ತುರ್ತು ಸಭೆಯಾಗಿದ್ದ ನೀರಿನ ಸಮಸ್ಯೆ ಕುರಿತಾದ ಸಭೆಗೆ ಕೇವಲ 10-12 ಸದಸ್ಯರು ಮಾತ್ರ ಹಾಜರಿದ್ದರು. 31 ಸದಸ್ಯರನ್ನೊಳಗೊಂಡ ನಗರಸಭೆಯಲ್ಲಿ ಅರ್ಧದಷ್ಟೂ ಸದಸ್ಯರು ಹಾಜರಾಗದಿರುವುದು ತೀವ್ರ ಮುಜುಗರಕ್ಕೆ ಕಾರಣವಾಗಿ ಶಾಸಕ ಸಿದ್ದು ಸವದಿ ಗರಂ ಆದ ಪ್ರಸಂಗ ನಡೆಯಿತು.

    ಪೌರಾಯುಕ್ತ ಜಗದೀಶ ಈಟಿ, ರಾಘವೇಂದ್ರ ಕುಲಕರ್ಣಿ, ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ಅರುಣ ಬುದ್ನಿ, ಗೌರಿ ಮಿಳ್ಳಿ, ಜಯಶ್ರೀ ಬಾಗೇವಾಡಿ, ದೀಪಾ ಕೊಣ್ಣೂರ, ಬಸು ಗುಡ್ಡೋಡಗಿ, ಅಶೋಕ ಹಳ್ಳೂರ ಇತರರಿದ್ದರು.

    ತೇರದಾಳ ಕ್ಷೇತ್ರದಲ್ಲಿನ ಕೃಷ್ಣೆ ಹಾಗೂ ಘಟಪ್ರಭಾ ನದಿ ನೀರು ಕಡಿಮೆಯಾಗುತ್ತಿದೆ. ಗ್ರಾಪಂ ವ್ಯಾಪ್ತಿ ಸೇರಿ ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಕಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
    ಸಿದ್ದು ಸವದಿ, ಶಾಸಕ, ತೇರದಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts