More

    ಕುಡಿಯಲು ನಮಗೂ ಶುದ್ಧ ನೀರು ಕೊಡಿ

    ಹುಬ್ಬಳ್ಳಿ: ಕಲಘಟಗಿ ತಾಲೂಕಿನ ನೀರಸಾಗರ ಹಾಗೂ ಸುತ್ತಮುತ್ತಲಿನ 12 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ನ್ಯಾಯಾಲಯ ನೀಡಿರುವ ಆದೇಶವನ್ನು ಅನುಷ್ಠಾನ ಮಾಡಬೇಕೆಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    ಸೋಮವಾರ ನೀರಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ ಗ್ರಾಮಸ್ಥರು, 2016ರಲ್ಲೇ ಉಚ್ಚ ನ್ಯಾಯಾಲಯ ಜಲಾಶಯದ ಸುತ್ತಲಿನ ಶೀಗಿಗಟ್ಟಿ, ಮುತ್ತಗಿ, ಎಮ್ಮೆಟ್ಟಿ, ಗಂಭ್ಯಾಪುರ, ಲಿಂಗನಕೊಪ್ಪ, ಜಮ್ಮಿಹಾಳ, ಧುಮ್ಮವಾಡ, ಜೋಡಳ್ಳಿ, ಜಿ. ಬಸವನಕೊಪ್ಪ, ನೀರಸಾಗರ, ಕನ್ನೆನಾಯಕನಕೊಪ್ಪ, ಕಳಸನಕೊಪ್ಪ, ಡೊಂಬ್ರಿಕೊಪ್ಪ ಗ್ರಾಮಗಳಿಗೆ ಶುದ್ಧ ನೀರು ಸರಬರಾಜು ಮಾಡಲು ಆದೇಶ ಮಾಡಿದೆ ಎಂದು ಗಮನಕ್ಕೆ ತಂದರು.

    ನಾಲ್ಕು ವರ್ಷ ಕಳೆದರೂ ಆದೇಶ ಪಾಲನೆಯಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಳಂಬ ಮಾಡಿದರೆ ಸಾರ್ವಜನಿಕರೊಂದಿಗೆ ಸೇರಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ನೀರಸಾಗರ ಜಲಾಶಯದ ಹೋರಾಟ ಸಮಿತಿ ಪದಾಧಿಕಾರಿಗಳು ಎಚ್ಚರಿಸಿದರು. ಕಲಘಟಗಿ ತಾಲೂಕಿನ 12 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜಿಗೆ ಆದಷ್ಟು ಶೀಘ್ರ ವ್ಯವಸ್ಥೆ ಮಾಡಬೇಕೆಂದು ಹೋರಾಟ ಸಮಿತಿ ಅಧ್ಯಕ್ಷ ಗುರು ಬೆಂಗೇರಿ, ಗೌರವಾಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಸದಸ್ಯರಾದ ಲಕ್ಷ್ಮಣ ಲಮಾಣಿ, ಸಂತೋಷ ಲಮಾಣಿ, ಸೋಮಶೇಖರ ಬೆನ್ನೂರ, ಎಸ್.ಎನ್. ರಾಯನಾಳ, ಬಸಪ್ಪ ಮಾಳಗಿ, ಮಂಜುನಾಥ ಚಂದುನವರ, ಈರಪ್ಪ ಹುಬ್ಬಳ್ಳಿ, ರಮೇಶ ಲಮಾಣಿ, ಲಿಂಗರಡ್ಡಿ ಎನ್. ಹಾಗೂ ವಿವಿಧ ಗ್ರಾಮಗಳ ಹಿರಿಯರು, ರೈತರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts