More

    ಕುಟುಂಬದಲ್ಲಿ ಇರಲಿ ಸಹಬಾಳ್ವೆ

    ಚಿತ್ರದುರ್ಗ: ಸಂಸಾರವೆಂಬ ತೆಪ್ಪ ಸುಗಮವಾಗಿ ಸಾಗ ಬೇಕಾದರೆ, ಏನೇ ವೈಮನಸ್ಸುಗಳಿದ್ದರೂ ಸತಿ-ಪತಿಗಳು ತೆಪ್ಪಗಿರಬೇಕು. ಇಲ್ಲವಾದಲ್ಲಿ ಸಂಸಾರದಲ್ಲಿ ಪ್ರತಿಷ್ಠೆ ಮತ್ತು ಅಹಂಕಾರಗಳು ಇಣುಕಿ ವಿರಸಕ್ಕೆ ಕಾರಣವಾಗುತ್ತದೆ ಎಂದು ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
    ನಗರದ ಬಸವಕೇಂದ್ರ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ 34ನೇ ವರ್ಷದ 1ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಇಚ್ಛೆಯನ್ನರಿವ ಸತಿ-ಪತಿ ಇದ್ದರೆ ಯಾವ ಸ್ವರ್ಗವೂ ಬೇಕಿಲ್ಲ. ಸಂಸಾರದ ಮೂಲಕವೇ ಸದ್ಗತಿ. ಕುಟುಂಬದಲ್ಲಿ ಸಾಮರಸ್ಯವಿದ್ದಾಗ ಸಹಬಾಳ್ವೆ ಸಾಧ್ಯ, ಆಗ ಸಂಸಾರ ಬಂಧನವಾಗದೆ ಸಾಧನವಾಗುತ್ತದೆ. ಇನ್ನೊಬ್ಬರಿಗೆ ಮಾರ್ಗದರ್ಶನವಾಗುತ್ತದೆ ಎಂದರು.
    ಸಾದರಹಳ್ಳಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಶರಣಪರಂಪರೆಯಲ್ಲಿ ಇಂಥ ಸರಳ ಮತ್ತು ಸಜ್ಜನಿಕೆ ಕಾರ್ಯಕ್ರಮಗಳನ್ನು ಕಾಣಲು ಸಾಧ್ಯ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ತಾವೆಲ್ಲರೂ ಶರಣರ ಮಾರ್ಗದರ್ಶನದಲ್ಲಿ ನಡೆಯಬೇಕಾಗಿದೆ. ಪಾಲಕರು ಮಕ್ಕಳ ಮದುವೆ ಮಾಡಲು ಎಷ್ಟೊಂದು ಕಷ್ಟಗಳನ್ನು ಅನುಭವಿಸುತ್ತಾರೆ. ಈ ನೆಲೆಯಲ್ಲಿ ಬಸವಾದಿ ಶರಣರ ಪ್ರೇರಣೆಯಂತೆ ಸರಳ ವಿವಾಹಗಳಿಗೆ ಶ್ರೀಮಠ ಮಹತ್ವ ನೀಡುತ್ತಿದೆ ಎಂದು ತಿಳಿಸಿದರು.
    ಶ್ರೀ ಬಸವಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಸತಿ-ಪತಿಗಳು ಜೋಡಿ ದೀಪಗಳಿದ್ದ ಹಾಗೆ. ಒಂದು ದೀಪಕ್ಕೆ ಎಣ್ಣೆ ಕಡಿಮೆಯಾದರೂ ಅದು ಸೊರಗುತ್ತದೆ. ಹಾಗಾಗಿ ಎರಡೂ ದೀಪ ಸೊರಗದಂತೆ ನೋಡಿಕೊಂಡು ನಿಮ್ಮ ಮನ-ಮನೆಯನ್ನು ಆ ದೀಪಗಳು ಬೆಳಗಲಿ ಎಂದು ಹರಸಿದರು.
    ಕಾರ‌್ಯಕ್ರಮದಲ್ಲಿ 6 ಜೋಡಿಗಳ ವಿವಾಹ ನೆರವೇರಿತು. ಡಾ.ಎನ್.ಟಿ.ಶಿವಕುಮಾರ್ ಸ್ವಾಗತಿಸಿದರು. ಟಿ.ಪಿ.ಜ್ಞಾನಮೂರ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts