More

    ಕುಂಟುತ್ತ ಸಾಗಿದೆ ಸ್ಥಳಾಂತರ ಕಾರ್ಯ

    ಮುಂಡರಗಿ: ಸಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ಹಿನ್ನೀರಿನಿಂದಾಗಿ ಮುಳುಗಡೆಯಾವ ಗ್ರಾಮಗಳ ಜನರು ಪುನರ್ವಸತಿ ಗ್ರಾಮಗಳಿಗೆ ಸ್ಥಳಾಂತರಗೊಂಡಿಲ್ಲ. ಹೀಗಾಗಿ, ಈ ಯೋಜನೆಗೆ ಹಿನ್ನಡೆ ಉಂಟಾಗುತ್ತಿದೆ. ಮುಳುಗಡೆ ಪ್ರದೇಶದ ಗ್ರಾಮಸ್ಥರೊಂದಿಗೆ ರ್ಚಚಿಸಿ, ಪುನರ್ವಸತಿ ಗ್ರಾಮಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸ್ಥಳಾಂತರ ಕಾರ್ಯಕ್ಕೆ ವೇಗ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

    ರೈತರಿಗೆ ನೀರಾವರಿ ಕಲ್ಪಿಸುವುದರ ಜತೆಗೆ ಕುಡಿಯುವ ನೀರಿಗಾಗಿ ಮುಂಡರಗಿ ತಾಲೂಕಿನ ಹಮ್ಮಿಗಿ ಹಾಗೂ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ರಾಜವಾಳ ಗ್ರಾಮಗಳ ಮಧ್ಯೆ ಹರಿಯುವ ತುಂಗಭದ್ರಾ ನದಿಗೆ ಅಡ್ಡಲಾಗಿ ಸಿಂಗಟಾಲೂರ ಏತ ನೀರಾವರಿ ಬ್ಯಾರೇಜ್ ನಿರ್ವಿುಸಲಾಗಿದೆ. 3.12 ಟಿಎಂಸಿ ನೀರು ಸಾಮರ್ಥ್ಯ ಸಂಗ್ರಹವನ್ನು ಬ್ಯಾರೇಜ್ ಹೊಂದಿದೆ. ಆದರೆ, ಹಿನ್ನೀರಿಗೆ ಮುಳುಗಡೆಯಾಗುವ 4 ಗ್ರಾಮಗಳನ್ನು ಸ್ಥಳಾಂತರಿಸದ ಕಾರಣ ಸದ್ಯ 1.98 ಟಿಎಂಸಿ ನೀರು ಸಂಗ್ರಹಿಸಲಾಗುತ್ತಿದೆ.

    2010ರ ನವೆಂಬರ್​ನಲ್ಲಿ ಸಿಂಗಟಾಲೂರ ಏತ ನೀರಾವರಿ ಬ್ಯಾರೇಜ್ ಹಿನ್ನೀರಿಗೆ ಮುಳುಗಡೆಯಾಗುವ ತಾಲೂಕಿನ ಗುಮ್ಮಗೋಳ, ಬಿದರಹಳ್ಳಿ, ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮವನ್ನು ಮುಳುಗಡೆ ಪ್ರದೇಶವೆಂದು ಘೊಷಿಸಲಾಯಿತು. 2012ರ ಡಿಸೆಂಬರ್​ನಲ್ಲಿ ಮುಳುಗಡೆ ಪ್ರದೇಶ ಕುರಿತು ಪುನಃ ಸರ್ವೆ ಮಾಡಿದಾಗ ತಾಲೂಕಿನ ವಿಠಲಾಪುರ ಗ್ರಾಮವನ್ನೂ ಮುಳುಗಡೆ ಪ್ರದೇಶವೆಂದು ಘೊಷಿಸಲಾಯಿತು.

    ಮುಳುಗಡೆಯಾದ ಪ್ರದೇಶಗಳಿಗೆ ಪುನರ್ವಸತಿ ಕಲ್ಪಿಸುವ ಕುರಿತು ಸರ್ಕಾರದಿಂದ ಭರವಸೆ ನೀಡಲಾಗಿತ್ತು. ಗುಮ್ಮಗೋಳ, ಬಿದರಹಳ್ಳಿ ಮತ್ತು ಅಲ್ಲಿಪುರ ಗ್ರಾಮಕ್ಕೆ ಬೇರೆಡೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಮೂಲಸೌಲಭ್ಯ ಕಲ್ಪಿಸಲಾಗುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ಆದರೆ, ವಿಠಲಾಪುರ ಗ್ರಾಮಕ್ಕೆ ಈವರೆಗೂ ಪುನರ್ವಸತಿ ಕಲ್ಪಿಸುವ ಕಾರ್ಯ ನಡೆದಿಲ್ಲ.

    ಹಕ್ಕುಪತ್ರ ವಿಳಂಬ: ಬಿದರಹಳ್ಳಿಯಲ್ಲಿ 825 ನಿವೇಶನ, ಗುಮ್ಮಗೋಳದಲ್ಲಿ 261, ಅಲ್ಲಿಪುರದಲ್ಲಿ 456 ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ. 2015ರಲ್ಲಿ ಬಿದರಹಳ್ಳಿ ಮತ್ತು ಅಲ್ಲಿಪುರ ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಿದರೆ, 2017ರಲ್ಲಿ ಗುಮ್ಮಗೋಳ ಗ್ರಾಮಸ್ಥರಿಗೆ ನಿವೇಶನದ ಹಕ್ಕುಪತ್ರ ವಿತರಿಸಲಾಯಿತು. ಹಕ್ಕುಪತ್ರ ವಿತರಣೆಗೂ ಐದಾರು ವರ್ಷಗಳ ಮುಂಚೆಯೆ ಗ್ರಾಮಸ್ಥರಿಗೆ ಪರಿಹಾರ ಹಣ ನೀಡಲಾಗಿತ್ತು. ಇದೇ ವೇಳೆ ಹಕ್ಕುಪತ್ರ ನೀಡಿದ್ದರೆ ಪರಿಹಾರ ಹಣದಲ್ಲಿ ಮನೆ ನಿರ್ವಿುಸಿಕೊಳ್ಳುತ್ತಿದ್ದರು. ಆದರೆ, ಹಕ್ಕುಪತ್ರ ನೀಡುವಲ್ಲಿ ವಿಳಂಬ ಮಾಡಿದ ಕಾರಣಕ್ಕೆ ಪರಿಹಾರದ ಹಣವೆಲ್ಲ ಬೇರೆ ಕಾರ್ಯಕ್ಕೆ ಬಳಸಿದರು. ಹೀಗಾಗಿ ಈವರೆಗೂ ಬಿದರಹಳ್ಳಿ, ಅಲ್ಲಿಪುರದ ಕೆಲ ಜನರು ಮನೆ ನಿರ್ವಿುಸಿಕೊಂಡಿದ್ದು ಬಿಟ್ಟರೆ ಬಹುತೇಕ ಜನರು ಮನೆ ನಿರ್ವಿುಸಿಕೊಂಡಿಲ್ಲ.

    ಪುನರ್ವಸತಿಗೆ ವೆಚ್ಚ: ಬಿದರಹಳ್ಳಿಗೆ 10 ಕೋಟಿ ರೂ. ವೆಚ್ಚದಲ್ಲಿ 85.33 ಎಕರೆ, ಗುಮ್ಮಗೋಳಕ್ಕೆ 4 ಕೋಟಿ ರೂ. ವೆಚ್ಚದಲ್ಲಿ 35.12 ಎಕರೆ, ಅಲ್ಲಿಪುರಕ್ಕೆ 6 ಕೋಟಿ ರೂ. ವೆಚ್ಚದಲ್ಲಿ 52 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪುನರ್ವಸತಿಗೆ ಒಳಪಟ್ಟ ಬಿದರಹಳ್ಳಿ ಫಲಾನುಭವಿಗಳಿಗೆ 25 ಕೋಟಿ ರೂ., ಗುಮ್ಮಗೋಳ ಫಲಾನುಭವಿಗಳಿಗೆ 7.94 ಕೋಟಿ ರೂ. ಹಾಗೂ ಅಲ್ಲಿಪುರ ಫಲಾನುಭವಿಗಳಿಗೆ 13.15 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.

    ಬಿದರಹಳ್ಳಿಗೆ 14.12 ಕೋಟಿ ರೂ., ಗುಮ್ಮಗೋಳಕ್ಕೆ 5.95 ಕೋಟಿ ರೂ., ಅಲ್ಲಿಪುರಕ್ಕೆ 10.47 ಕೋಟಿ ರೂ. ವೆಚ್ಚದಲ್ಲಿ ಪುನರ್ವಸತಿ ಸ್ಥಳಗಳಲ್ಲಿ ಮೂಲಸೌಲಭ್ಯ ಕಲ್ಪಿಸಲಾಗಿದೆ. ಮೂರೂ ಗ್ರಾಮಗಳ ಪುನರ್ವಸತಿಗಾಗಿ ಈವರೆಗೆ ಒಟ್ಟು 96.63 ಕೋಟಿ ರೂ. ವೆಚ್ಚ ಮಾಡಲಾಗಿದೆ.

    ಕಿತ್ತುಹೋದ ಕಿಟಕಿ, ಬಾಗಿಲು: ಗ್ರಾಮಸ್ಥರು ಸ್ಥಳಾಂತರಗೊಳ್ಳದ ಕಾರಣ ಪುನರ್ವಸತಿ ಗ್ರಾಮದ ಜಾಗೆಯಲ್ಲಿ ಎಲ್ಲೆಂದರಲ್ಲಿ ಜಾಲಿಕಂಟಿ ಬೆಳೆಯುತ್ತಿವೆ. ಬಹುತೇಕ ಚರಂಡಿಗಳು ಮುಚ್ಚಿ ಹೋಗುತ್ತಿವೆ. ಕೆಲ ಕಟ್ಟಡದ ಕಿಟಕಿ ಗ್ಲಾಸ್ ಒಡೆದಿದ್ದು, ಬಾಗಿಲು ಕಿತ್ತು ಹೋಗುತ್ತಿವೆ.

    ವಿಠಲಾಪುರ ನಿರ್ಲಕ್ಷ್ಯ 2012ರ ಡಿಸೆಂಬರ್​ನಲ್ಲಿ ವಿಠಲಾಪುರ ಮುಳುಗಡೆ ಪ್ರದೇಶ ಎಂದು ಘೊಷಿಸಲಾಗಿದೆ. ಆದರೆ, 7 ವರ್ಷ ಕಳೆದರೂ ಈವರೆಗೆ ವಿಠಲಾಪುರಕ್ಕೆ ಪುನರ್ವಸತಿ ಕಲ್ಪಿಸುವ ಕಾರ್ಯ ನಡೆಯುತ್ತಿಲ್ಲ. ಪುನರ್ವಸತಿಗೆ 40.04 ಎಕರೆ ಭೂಮಿ ಗುರುತಿಸಲಾಗಿದೆ. ಭೂಸ್ವಾಧೀನಕ್ಕೆ 4 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಹಲವು ವರ್ಷಗಳಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಪುನರ್ವಸತಿ ಕಲ್ಪಿಸುವ ಕೆಲಸ ನಡೆಯುತ್ತಿಲ್ಲ. ವಿಠಲಾಪುರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.

    ಮನೆ ನಿರ್ವಿುಸಿಕೊಡಿ: ಪರಿಹಾರದ ಹಣ ಖಾಲಿಯಾದ ಹಿನ್ನೆಲೆಯಲ್ಲಿ ಪುನರ್ವಸತಿ ಗ್ರಾಮದಲ್ಲಿ ವಸತಿ ಯೋಜನೆಗಳಡಿ ಮನೆ ನಿರ್ವಿುಸಿಕೊಡಬೇಕು ಎಂಬ ಕೂಗು ಮುಳುಗಡೆ ಪ್ರದೇಶದ ಗ್ರಾಮಸ್ಥರಲ್ಲಿ ಕೇಳಿಬರುತ್ತಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಗ್ರಾಮಸ್ಥರ ಸಮಸ್ಯೆ ಸರಿಪಡಿಸಲು ಮುಂದಾಗಬೇಕಿದೆ. ಹಾಗೇಯೇ ಇನ್ನು ಕೆಲವರಿಗೆ ಪರಿಹಾರ ನೀಡಿಲ್ಲ. ಅದನ್ನೂ ಸರಿಪಡಿಸಬೇಕು ಎಂಬ ಮಾತುಗಳು ಕೇಳಿಬಂದಿವೆ.

    ಪರಿಹಾರ ನೀಡಿ ಹಕ್ಕುಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಿದರು. ಜನರಲ್ಲಿ ಹಣ ಖಾಲಿಯಾಗಿದ್ದರಿಂದ ಸ್ಥಳಾಂತರಗೊಂಡಿಲ್ಲ. ಆರ್ಥಿಕ ಸಮಸ್ಯೆ ಇದ್ದವರನ್ನು ಗುರುತಿಸಿ ವಸತಿ ಯೋಜನೆಯಡಿ ಏಕಕಾಲಕ್ಕೆ 250 ರಿಂದ 300 ಮನೆ ನಿರ್ವಿುಸಿ ಕೊಟ್ಟರೆ, ಅವರೊಂದಿಗೆ ಹಣವುಳ್ಳವರು ಸಹ ಪುನರ್ವಸತಿ ಜಾಗದಲ್ಲಿ ಮನೆ ನಿರ್ವಿುಸಿಕೊಂಡು ಸ್ಥಳಾಂತರಗೊಳ್ಳುತ್ತಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು.
    | ವೀರಯ್ಯ ಹಿರೇಮಠ ಅಲ್ಲಿಪುರ ಗ್ರಾಮಸ್ಥ

    ಪರಿಹಾರ ಮತ್ತು ಹಕ್ಕುಪತ್ರ ಏಕಕಾಲಕ್ಕೆ ನೀಡಲಿಲ್ಲ. ಹೀಗಾಗಿ, ಪರಿಹಾರ ಹಣ ಬೇರೊಂದಕ್ಕೆ ಬಳಸಲಾಗಿದೆ. ಕೆಲವರಿಗೆ ಪರಿಹಾರ ನೀಡಿಲ್ಲ. ಸರ್ಕಾರವು ಪುನರ್ವಸತಿ ಗ್ರಾಮದಲ್ಲಿ ವಸತಿ ಯೋಜನೆಯಡಿ ಮನೆ ನಿರ್ವಿುಸಿಕೊಟ್ಟರೆ ಸ್ಥಳಾಂತರವಾಗಲು ಅನುಕೂಲವಾಗುತ್ತದೆ.
    | ಚಂದ್ರಶೇಖರ ಜಗ್ಗಿನ್ ಗುಮ್ಮಗೋಳ ಗ್ರಾಮಸ್ಥ

    ಮುಳುಗಡೆ ಪ್ರದೇಶದ ಗ್ರಾಮಸ್ಥರೊಂದಿಗೆ ರ್ಚಚಿಸಿ ಅವರ ಸಮಸ್ಯೆ ಮತ್ತು ಬೇಡಿಕೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಶೀಘ್ರವೇ ಸಮಸ್ಯೆ ಸರಿಪಡಿಸುವ ಮೂಲಕ ಗ್ರಾಮಗಳನ್ನು ಸ್ಥಳಾಂತರಿಸುತ್ತೇವೆ.
    | ಐ ಪ್ರಕಾಶ, ಎಇಇ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಉಪವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts