More

    ಕುಂಟುತ್ತ ಸಾಗಿದೆ ರಸ್ತೆ ಕಾಮಗಾರಿ

    ಹುಬ್ಬಳ್ಳಿ: ಕೇಂದ್ರ ರಸ್ತೆ ನಿಧಿ (ಸಿಆರ್​ಎಫ್) ಅನುದಾನದಡಿ ನಿರ್ವಿುಸಲಾಗುತ್ತಿರುವ ಇಲ್ಲಿನ ಕಮರಿಪೇಟ- ಉಣಕಲ್ ಸಿಸಿ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದ್ದು, ಇದರಿಂದ ಇಲ್ಲಿ ಸಂಚರಿಸುವ ವಾಹನ ಸವಾರರು, ವಕೀಲರು, ಕಕ್ಷಿದಾರರು ಪರದಾಡುವಂತಾಗಿದೆ. ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ.

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 4 ಕಿ.ಮೀ. ಉದ್ದದ ರಸ್ತೆ ನಿರ್ವಿುಸುತ್ತಿದ್ದು, ಕೇರಳ ಮೂಲದ ಕಾನ್​ಕರ್ಡ್ ಕಂಪನಿ 26.69 ಕೋಟಿ ರೂ.ಗೆ ಈ ರಸ್ತೆ ಕಾಮಗಾರಿಯ ಟೆಂಡರ್ ಪಡೆದುಕೊಂಡಿದೆ. 2019ರ ಸೆಪ್ಟಂಬರ್​ನಲ್ಲಿ ಕಾಮಗಾರಿ ಆರಂಭವಾಗಿದ್ದು, ಏಪ್ರಿಲ್​ನಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ, ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ.

    ಮಹಾನಗರ ಪಾಲಿಕೆ ಒತ್ತುವರಿ ತೆರವು ಸರಿಯಾಗಿ ಮಾಡದ ಕಾರಣ 10 ಮೀ. ಅಗಲ ಆಗಬೇಕಿದ್ದ ರಸ್ತೆ ಶಿರೂರ ಪಾರ್ಕ್ ಬಳಿ ಸೇರಿ ಕೆಲವೆಡೆ 7 ಮೀ.ಗೆ ಸಂಕುಚಿತಗೊಂಡಿದೆ. ಕೋರ್ಟ್ ಎದುರು 10 ಮೀ. ಇದ್ದರೆ, ಬಿಆರ್​ಟಿಎಸ್ ಟರ್ವಿುನಲ್ ಎದುರು 19 ಮೀ. ಅಗಲ ಚತುಷ್ಪಥ ರಸ್ತೆ ನಿರ್ವಿುಸಲಾಗುತ್ತಿದೆ. ಶಿರೂರು ಪಾರ್ಕ್ ಬಳಿ ಭೂಗತ ಗ್ಯಾಸ್ ಪೈಪ್​ಲೈನ್, ಕುಡಿಯುವ ನೀರಿನ ಪೈಪ್​ಲೈನ್ ಹೋಗಿರುವ ಕಾರಣ ಚರಂಡಿ ಕಾಮಗಾರಿಗೆ ಅಡೆತಡೆ ಉಂಟಾಗಿದೆ. ಹಲವೆಡೆ ಪಾದಚಾರಿ ಕಾಮಗಾರಿ ಬಾಕಿ ಇದೆ.

    ತಿಮ್ಮಸಾಗರದ ನೂತನ ನ್ಯಾಯಾಲಯಗಳ ಸಂಕೀರ್ಣದ ಎದುರು ರಸ್ತೆಯನ್ನು ಅಗೆದು ಅರ್ಧಕ್ಕೆ ಕೈಬಿಡಲಾಗಿದೆ. ಚರಂಡಿ ಕಾಮಗಾರಿ ಅಪೂರ್ಣವಾಗಿದೆ. ಬಾಲಾಜಿ ಆಸ್ಪತ್ರೆ ಎದುರು ಒಂದು ಭಾಗ ಮಾತ್ರ ರಸ್ತೆಯಾಗಿದೆ. ಇದರಿಂದಾಗಿ ಕೋರ್ಟ್​ಗೆ ಬರುವ ಸಾವಿರಾರು ವಕೀಲರು, ಕಕ್ಷಿದಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಮಳೆಗಾಲದಲ್ಲಂತೂ ಸಣ್ಣ ಮಳೆಯಾದರೂ ರಸ್ತೆ ಕೆಸರುಮಯವಾಗುತ್ತಿದೆ.

    ಹು-ಧಾ ಹಳೇ ಪಿಬಿ ರಸ್ತೆಗೆ ಪರ್ಯಾಯವಾಗಿ ಅನುಕೂಲವಾಗುವಂತೆ ಕಮರಿಪೇಟ- ಉಣಕಲ್ ರಸ್ತೆ ನಿರ್ವಿುಸಲಾಗುತ್ತಿದೆ. ಇದರಿಂದ ನಗರದ ಸಂಚಾರ ದಟ್ಟಣೆ ತಡೆಗೂ ಸಹಕಾರಿಯಾಗಲಿದೆ. ಅರ್ಧಂಬರ್ದ ಕಾಮಗಾರಿಯಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಇನ್ನಾದರೂ ತ್ವರಿತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

    800 ಮೀ. ರಸ್ತೆ ಬಾಕಿ: ಕೋರ್ಟ್​ನಿಂದ ಬಿಆರ್​ಟಿಎಸ್ ಟರ್ವಿುನಲ್, ವಿಕಾಸ ನಗರ ಹಾಗೂ ಹೊಸೂರು ಬಳಿ 400 ಮೀ. ರಸ್ತೆ, ಶಿರೂರು ಪಾರ್ಕ್​ನಿಂದ ದೇಸಾಯಿಯವರ ಮನೆವರೆಗೂ 400 ಮೀ ರಸ್ತೆ ನಿರ್ವಿುಸಬೇಕಿದೆ. ಶೀಘ್ರದಲ್ಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ರಮೇಶ ಹವೇಲಿ.

    ಎಲ್ಲಿಂದ ಎಲ್ಲಿವರೆಗೆ ?: ಕಮರಿಪೇಟ ಪೊಲೀಸ್ ಠಾಣೆಯಿಂದ ಭಾರತ್ ಮಿಲ್, ವಿಕಾಸ ನಗರ, ವಾಣಿ ವಿಲಾಸ ವೃತ್ತ, ಹೊಸೂರು ವೃತ್ತ, ಶಕುಂತಲಾ ಆಸ್ಪತ್ರೆ, ಬಿಆರ್​ಟಿಎಸ್ ಟರ್ವಿುನಲ್, ನೂತನ ನ್ಯಾಯಾಲಯ ಸಂಕೀರ್ಣ, ಶಿರೂರು ಪಾರ್ಕ್ ಮಾರ್ಗವಾಗಿ ಉಣಕಲ್​ವರೆಗೆ 4 ಕಿ.ಮೀ. ಉದ್ದ ಸಿಸಿ ರಸ್ತೆ ನಿರ್ವಿುಸಲಾಗುತ್ತಿದೆ.

    ಕೋರ್ಟ್ ಎದುರು ರಸ್ತೆ ಅಗೆದು ಬಿಟ್ಟಿರುವ ಕಾರಣ ಹತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಹಲವು ವಕೀಲರು, ಕಕ್ಷಿದಾರರು ಬೈಕ್​ನಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಸಂಬಂಧಪಟ್ಟವರು ಈ ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.
    | ಅಶೋಕ ಬಳಿಗಾರ, ಅಧ್ಯಕ್ಷ, ವಕೀಲರ ಸಂಘ, ಹುಬ್ಬಳ್ಳಿ

    ಅನಿವಾರ್ಯ ಕಾರಣಗಳಿಂದ ಕಾಮಗಾರಿ ತಡವಾಗಿತ್ತು. ಸಂಚಾರ ದಟ್ಟಣೆ ಕಾರಣ ರಾತ್ರಿ ವೇಳೆ ಕಾಂಕ್ರೀಟ್ ಕಾಮಗಾರಿ ಆರಂಭಿಸಲಾಗಿದೆ. ವಾರದಲ್ಲಿ ಕೋರ್ಟ್ ಎದುರಿನ ರಸ್ತೆ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಡಿಸೆಂಬರ್ ವೇಳೆಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಲಾಗುವುದು.
    | ಆರ್.ಕೆ. ಮಠದ, ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts