More

    ಕಿತ್ತೂರಲ್ಲೇ ಕೋಟೆ ಪ್ರತಿರೂಪ ನಿರ್ಮಾಣ

    ಚನ್ನಮ್ಮನ ಕಿತ್ತೂರು, ಬೆಳಗಾವಿ: ತೀವ್ರ ವಿರೋಧ, ಹೋರಾಟದ ಬಿಸಿ ಎದುರಿಸಿದ ಬಳಿಕ ಐತಿಹಾಸಿಕ ಚನ್ನಮ್ಮ ಕೋಟೆಯ ಪ್ರತಿರೂಪವನ್ನು ಕಿತ್ತೂರು ಪಟ್ಟಣದಲ್ಲೇ ಅದರಲ್ಲೂ ಈಗಿರುವ ಕೋಟೆಯ ಪಕ್ಕದಲ್ಲೇ ನಿರ್ಮಿಸಲು ಸರ್ಕಾರ ಮುಂದಾಗಿರುವುದು ಜನತೆಗೆ ಹರ್ಷ ತಂದಿದೆ. ಈಚೆಗೆ ಜರುಗಿದ ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿರೂಪ ಕೋಟೆಯನ್ನು ಪಟ್ಟಣದಲ್ಲೇ ನಿರ್ಮಿಸುವುದಾಗಿ ಸ್ಪಷ್ಟನೆ ನೀಡಿರುವುದರಿಂದ ಗೊಂದಲ ಬಗೆಹರಿದಂತಾಗಿದೆ.

    ಹೊರವಲಯಕ್ಕೆ ಶಿಫ್ಟ್ ಆಗಿದ್ದ ಕಾಮಗಾರಿ: ಪ್ರತಿರೂಪ ಕೋಟೆ ನಿರ್ಮಾಣಕ್ಕೆ 20 ರಿಂದ 25 ಎಕರೆ ಜಾಗ ಬೇಕಾಗುತ್ತದೆ. ಆದರೆ, ಈಗಿರುವ ಐತಿಹಾಸಿಕ ಕೋಟೆ ಸುತ್ತ ಖಾಸಗಿ ಜಾಗವಿದೆ. ಖಾಸಗಿ ಜಾಗದ ಮಾಲೀಕರೂ ಕೂಡ ಸೂಕ್ತ ಬೆಲೆ ನೀಡಿದರೆ ನಾವು ರಾಣಿ ಚನ್ನಮ್ಮಾಜಿ ಕೋಟೆ ನಿರ್ಮಿಸಲು ಜಾಗ ನೀಡುತ್ತೇವೆ ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಅವರ ಬೇಡಿಕೆಗೆ ತಕ್ಕಂತೆ ದರ ನೀಡಲು ಲಭ್ಯ ಅನುದಾನದಡಿ ಅವಕಾಶ ಇಲ್ಲದ ಕಾರಣ ಪರ್ಯಾಯವಾಗಿ ಹೊರ ವಲಯದಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು.

    ಹೋರಾಟ, ಪ್ರತಿಭಟನೆ ಬಿಸಿ: ಐತಿಹಾಸಿಕ ರಾಣಿ ಚನ್ನಮ್ಮಾಜಿಯ ಅರಮನೆಗೆ ಹೋಲುವ ಪ್ರತಿರೂಪ ಕೋಟೆಯನ್ನು ಕಿತ್ತೂರಿನ ಹೊರವಲಯದಲ್ಲಿ ನಿರ್ಮಾಣ ಮಾಡಲು ಈ ಮೊದಲು ಯೋಜನೆ ರೂಪಿಸಲಾಗಿತ್ತು. ಅದಕ್ಕೆ ಕಿತ್ತೂರು ಜನರು ಸಾಕಷ್ಟು ವಿರೋಧ, ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ 2022ರ ಜ.26ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಆ ನಂತರ ಸಾರ್ವಜನಿಕರಲ್ಲಿ ಸಾಕಷ್ಟು ಸಭೆಗಳು, ಚರ್ಚೆಗಳು ನಡೆದವು. ಸಾವಿರಾರು ಜನರು ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು. ಕಿತ್ತೂರು ಕೋಟೆಯ ಪ್ರತಿರೂಪವನ್ನು ಪಟ್ಟಣದಲ್ಲೇ ನಿರ್ಮಿಸುವಂತೆ ಹಾಗೂ ಯಾವುದೇ ಕಾರಣಕ್ಕೂ ಹೊರವಲಯದಲ್ಲಿ ಕೋಟೆ ನಿರ್ಮಿಸುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಬೆಳಗಾವಿಯ ಡಿಸಿಗೂ ಈ ಕುರಿತು ಮನವಿ ಸಲ್ಲಿಸಿದ್ದರು.

    ಆದೇಶ ಹಿಂಪಡೆದ ಡಿಸಿ: ಹೋರಾಟದ ಬಳಿಕವೂ ಕೋಟೆಯ ಪ್ರತಿರೂಪವನ್ನು ಹೊರವಲಯದಲ್ಲೇ ನಿರ್ಮಿಸುವ ಕುರಿತು ಜಿಲ್ಲಾಧಿಕಾರಿಗಳು ಹೊರವಲಯದ ಬಚ್ಚನಕೇರಿ ಬಳಿ ಇರುವ ಗೋಮಾಳದ ಜಾಗದಲ್ಲಿ ಕೋಟೆ ನಿರ್ಮಿಸುವ ಕುರಿತು ಆದೇಶ ಹೊರಡಿಸಿದ್ದರು. ಆಗಲೂ ಕೂಡ ವಿಜಯವಾಣಿ ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಅದಲ್ಲದೆ ಡಿಸಿ ಆದೇಶಕ್ಕೆ ಜನ ಮತ್ತೆ ವಿರೋಧ ವ್ಯಕ್ತಪಡಿಸಿದರು. ಆದೇಶ ಹಿಂಪಡೆದ ಡಿಸಿ, ಸಿಎಂ ಮುಂದೆ ವಿಷಯ ಚರ್ಚಿಸುವ ಕುರಿತು ಆಶ್ವಾಸನೆ ನೀಡಿದ್ದರು.
    ಊರು ದಾಟದ ಕೋಟೆ: ತಾಯಿ ಆಸೆಯಂತೆ ರಾಣಿ ಚನ್ನಮ್ಮಾಜಿ ನಾಡಿನ ಅಭಿವೃದ್ಧಿ ಮಾಡುವ ಪಣತೊಟ್ಟಿರುವ ಬೊಮ್ಮಾಯಿ ಅವರಿಗೆ ಪ್ರತಿರೂಪದ ಕೋಟೆ ಸ್ಥಳದ ಬಗ್ಗೆ ಜನರ ಅಸಮಾಧಾನದ ಕುರಿತು ಶಾಸಕ ಮಹಾಂತೇಶ ದೊಡಗೌಡರ ಅವರಿಗೆ ಮನವರಿಕೆ ಮಾಡಿದರು. ಈ ವಿಷಯ ತಿಳಿಯುತ್ತಿದ್ದಂತೆ ಬೊಮ್ಮಯ್ಯವರು ಕಿತ್ತೂರು ನಾಡ ಜನರಿಗೆ ಅತಿ ಶೀಘ್ರ ಸಿಹಿ ಸುದ್ದಿ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಎಲ್ಲರ ನಿರೀಕ್ಷೆಯಂತೆ ಕಿತ್ತೂರು ಉತ್ಸವದಲ್ಲಿ ಕಿತ್ತೂರು ಪಟ್ಟಣದಲ್ಲೇ ಅದರಲ್ಲೂ ಐತಿಹಾಸಿಕ ಕೋಟೆ ಪಕ್ಕದಲ್ಲೇ ಪ್ರತಿರೂಪ ನಿರ್ಮಿಸುವುದಾಗಿ ಸಿಎಂ ಸ್ಪಷ್ಟಪಡಿಸಿದರು. ಇದರಿಂದ ಕೋಟೆ ಪ್ರತಿರೂಪ ಊರು ದಾಟುವುದಿಲ್ಲ ಎಂಬುದನ್ನು ಮನಗಂಡ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts