More

    ಕಿಡ್ನಿ ಸಮಸ್ಯೆ ಜಾಗೃತಿ ಮೂಡಿಸಿ

    ಬಾಗಲಕೋಟೆ: ವಿವಿಧ ಕಾರಣಗಳಿಂದ ಇಂದು ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಅಮೂಲ್ಯ ಜೀವ ಉಳಿಸಲು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಬೆಂಗಳೂರಿನ ಕಾವೇರಿ ಆಸ್ಪತ್ರೆ ನೆಫ್ರಾಲಾಜಿ ಇನ್‌ಸ್ಟಿಟ್ಯೂಟ್ ನಿರ್ದೇಶಕ, ಮೂತ್ರಪಿಂಡ ತಜ್ಞ ಡಾ.ಕೃಷ್ಣಕಿಶೋರ್ ಸಿ. ಹೇಳಿದರು.

    ನಗರದ ಹರಿಪ್ರಿಯಾ ಹೋಟೆಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಬೆಂಗಳೂರಿನ ಕಾವೇರಿ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಕಿಡ್ನಿ ದಿನಾಚರಣೆ ನಿಮಿತ್ತ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮದಡಿ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕಿಡ್ನಿ ಕಾರ್ಯ ನಿರ್ವಹಣೆ ಸಂಪೂರ್ಣ ನಿಂತವರಿಗೆ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ದೀರ್ಘಕಾಲಿಕ ಕಿಡ್ನಿ ಸಮಸ್ಯೆ (ಸಿಕೆಡಿ) ಗಳಿಂದ ಬಳಲಿ ಕಸಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಜೀವನ ಸಾರ್ಥಕತೆ ಪೋರ್ಟಲ್ ಮೂಲಕ ಪ್ರತಿ ವರ್ಷ ರಾಜ್ಯದಲ್ಲಿ ಸಾವಿರಾರು ಜನ ಕಿಡ್ನಿ ಕಸಿಗೆ ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದರೆ ದಾನಿಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಕಾನೂನು ಪ್ರಕಾರ ರೋಗಿಯ ನೇರ ಸಂಬಂಽ ಹಾಗೂ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿ ಮಾತ್ರ ಕಿಡ್ನಿ ದಾನ ನೀಡಬಹುದು. ಕಿಡ್ನಿ ದಾನ ನೀಡುವುದರಿಂದ ದಾನಿಯು ಕೂಡ ಆರೋಗ್ಯಕರ ಬದುಕು ನಡೆಸಬಹುದು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಸಂಬಂಽಕರು ಮೂಢನಂಬಿಕೆಯಿಂದ ಹೊರಬಂದು ಸ್ವಯಂಪ್ರೇರಣೆಯಿಂದ ಅಂಗಾಂಗ ದಾನಕ್ಕೆ ಮುಂದಾಗಿ ಅಮೂಲ್ಯ ಜೀವ ಉಳಿಸಬೇಕು ಎಂದರು. ಕಾನೂನಾತ್ಮಕ ಮತ್ತು ವೈದ್ಯಕೀಯ ತಪಾಸಣೆಗಳ ನಂತರವೇ ಕಿಡ್ನಿ ಕಸಿ ನಡೆಸಲಾಗುತ್ತದೆ ಎಂದರು.

    ರೋಬೋಟಿಕ್ ಸರ್ಜನ್ ಡಾ.ಶ್ರೀಹರ್ಷ ಹರಿನಾಥ್ ಮಾತನಾಡಿ, ಕಿಡ್ನಿ ಕಸಿಯಲ್ಲಿ ಒಂದೇ ಸಮಯದಲ್ಲಿ ದಾನಿ ಹಾಗೂ ಕಿಡ್ನಿ ರೋಗಿ ಇಬ್ಬರ ಶಸ್ತ್ರಚಿಕಿತ್ಸೆಯೂ ನಡೆಯುತ್ತದೆ. ಸದ್ಯ ಲ್ಯಾಪ್ರೋಸ್ಕೋಪಿ ಹಾಗೂ ರೋಬೋಟಿಕ್ ಯಂತ್ರಗಳ ಮೂಲಕ ಅತ್ಯಾಧುನಿಕ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದು, ಕಡಿಮೆ ಗಾಯ ಹಾಗೂ ಹೆಚ್ಚು ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ ಎಂದರು.

    ಐಎಂಎ ಅಧ್ಯಕ್ಷ ಡಾ.ಅರುಣ್ ಮಿಸ್ಕಿನ್ ಮಾತನಾಡಿ, ಕಿಡ್ನಿ ಸಮಸ್ಯೆಗಳು ಸಾಮಾನ್ಯರಿಗೆ ತುಂಬಾ ತಡವಾಗಿ ತಿಳಿಯುತ್ತವೆ. ಕೇವಲ ೧೫೦ ರೂ.ಗಳಲ್ಲಿ ತಪಾಸಣೆ ಮಾಡಿಸಿಕೊಂಡರೆ ಕಿಡ್ನಿ ಸಮಸ್ಯೆ ಇರುವ ಬಗ್ಗೆ ತಿಳಿಯುತ್ತದೆ. ೪೦ ವರ್ಷ ದಾಟಿದ ಪ್ರತಿಯೊಬ್ಬರೂ ನಿರ್ಲಕ್ಷ್ಯ ಮಾಡದೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡರೆ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದರು.

    ಮೂತ್ರಪಿಂಡ ತಜ್ಞರಾದ ಡಾ.ಸಂದೀಪ ಹುಯಿಲಗೋಳ ಮಾತನಾಡಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಬಾಗಲಕೋಟೆ ಜಿಲ್ಲೆಯಲ್ಲಿ ಶೇ.೨೦ರಷ್ಟು ಜನ ಮಧುಮೇಹಿಗಳಿದ್ದಾರೆ. ಶೇ.೪೦ರಷ್ಟು ಜನ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಶೇ.೬೦ರಷ್ಟು ಜನರಿಗೆ ಬಿಪಿ ಹಾಗೂ ಶುಗರ್ ಇರುವ ಬಗ್ಗೆ ಗೊತ್ತೇ ಇಲ್ಲ. ಕಿಡ್ನಿ ಸಮಸ್ಯೆ ಇರುವ ಶೇ.೯೦ರಷ್ಟು ಜನರಿಗೆ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಕಿಡ್ನಿ ಸಮಸ್ಯೆಗಳ ಬಗ್ಗೆ ಜನ ಸಾಮಾನ್ಯರಲ್ಲಿ ತಪ್ಪು ಕಲ್ಪನೆಗಳಿವೆ, ಅವುಗಳಿಂದ ಹೊರ ಬಂದು ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

    ಇತ್ತೀಚೆಗೆ ನಿಧನರಾದ ಬಾಗಲಕೋಟೆ ಹಿರಿಯ ಪತ್ರಕರ್ತ ರಾಮ ಮನಗೂಳಿ ಅವರ ಆತ್ಮಕ್ಕೆ ಶಾಂತಿ ಕೋರಿ ಐಎಂಎ ವತಿಯಿಂದ ಮೌನ ಆಚರಿಸಲಾಯಿತು. ಡಾ.ಚಿರಾಗ್ ಪಾಟೀಲ, ಡಾ.ಟಿ.ಎನ್.ಪಾಟೀಲ, ಐಎಂಎ ಕಾರ್ಯದರ್ಶಿ ಡಾ.ಪ್ರಮೋದ ಮಿರ್ಜಿ, ಕಾವೇರಿ ಆಸ್ಪತ್ರೆ ಸಂಯೋಜಕ ಶಿವಪ್ರಸಾದ್, ಪ್ರಕಾಶ ಬಿರಾದಾರ ಪಾಟೀಲ, ರಾಮರಾವ್ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts