More

    ಕಾವ್ಯದಲ್ಲಿ ಲಯ ಬದ್ಧತೆಗಿರಲಿ ಆದ್ಯತೆ  -ಕವಿಗಳಿಗೆ ಸಾಹಿತಿ ಹೇಮಾ ಪಟ್ಟಣಶೆಟ್ಟಿ ಕಿವಿಮಾತು- ಕಲಾಕುಂಚ ಪುಸ್ತಕ ಬಿಡುಗಡೆ

    ದಾವಣಗೆರೆ: ಕಾವ್ಯ ರಚನೆ ಸುಲಭದ ಕೆಲಸವಲ್ಲ. ಲಯ ಬದ್ಧತೆಯತ್ತ ಕವಿಗಳು ಹೆಚ್ಚು ಗಮನ ನೀಡಬೇಕು ಎಂದು ಸಾಹಿತಿ ಹೇಮಾ ಪಟ್ಟಣಶೆಟ್ಟಿ ಕಿವಿಮಾತು ಹೇಳಿದರು.
    ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಾವ್ಯ ಕುಂಚ-3’ ಕವನ ಸಂಕಲನ ಹಾಗೂ ‘ಕುಂಚ ಕೈಪಿಡಿ’ ಕಿರು ಹೊತ್ತಗೆ ಬಿಡುಗಡೆಗೊಳಿಸಿ ಮಾತನಾಡಿದರು.
    ಕನ್ನಡದಲ್ಲಿ ಕವಿತೆ ಬರೆಯಲು ಅನೇಕ ಸವಾಲುಗಳಿವೆ, ಆದ್ದರಿಂದ ಲಯವನ್ನು ಗುರುತಿಸಿ ಬರೆಯಬೇಕು. ಬರೆದ ಕವಿತೆಯನ್ನೇ ಮತ್ತೆ ಬರೆಯಬೇಕು. ತಿದ್ದುಪಡಿ ಬಳಿಕವೇ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
    ಏಕೆೆ ಮತ್ತು ಹೇಗೆ ಬರಹ ಬರೆಯುತ್ತೇವೆ ಎಂಬುದು ಮುಖ್ಯ. ತಾಯಿ, ದೇಶ ಮತ್ತು ಪ್ರೀತಿ ವಿಷಯಗಳು ಎಲ್ಲರಿಗೂ ಪರಿಚಿತ. ಆದರೆ ವಿಶಿಷ್ಟ ರೀತಿಯ ಬರಹಗಳಿದ್ದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
    ಹದಿಹರೆಯದಲ್ಲಿ ಪ್ರೇಮ ಕವಿತೆಗಳನ್ನು ಬರೆಯುವುದು ಹೆೆಚ್ಚಿದ್ದು, ಅವು ಸುಂದರವಾಗಿ ಕಾಣಿಸುತ್ತವೆ. ಅದರ ಪುನರಾವರ್ತನೆ ಆಗಬಾರದು. ಹೊಸ ಬರವಣಿಗೆ ಮಾಡುವವರು ಪ್ರಾಸ, ಅಂತರಂಗದ ಆಶಯ, ಭಾವನೆಗಳನ್ನು ಲಯದ ಜತೆಗೆ ಕವಿತ್ವದ ಮೂಲಕ ಅಭಿವ್ಯಕ್ತಗೊಳಿಸಬೇಕು. ಬಹಿರಂಗವನ್ನು ಆಲಿಸಿ, ತಯಾರಿಸಿ, ಮನದ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದು ಹೇಳಿದರು.
    80ರ ದಶಕದಲ್ಲಿ ಮಹಿಳೆಯರು ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡರು. ಜಯದೇವತಾಯಿ ಲಿಗಾಡೆ ಮೊದಲ ಪ್ರಯತ್ನ ಮಾಡಿದರು. ಈಗ ಕನ್ನಡ ಕಾವ್ಯ ಬಹಳ ಶ್ರೇಷ್ಠತೆ ಪಡೆದಿದೆ. ಭಾಷೆಯನ್ನು ಪಳಗಿಸುವುದು ಅತಿ ಮುಖ್ಯ. ಅದನ್ನು ಕಲಿಯಲು ಕಾವ್ಯ, ಕಾದಂಬರಿ, ಓದುವ ಜತೆಗೆ ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
    ಕಲಾಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಅಧ್ಯಕ್ಷ ಕೆ.ಎಚ್.ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿ ಗಣೇಶ್ ಶೆಣೈ, ಎ.ಸಿ. ಶಶಿಕಲಾ ಶಂಕರಮೂರ್ತಿ, ಪರ್ವೀನ್ ಅಮೀರ್‌ಜಾನ್ ಇದ್ದರು. ನಂತರ ಕವಿಗೋಷ್ಠಿಯಲ್ಲಿ ಕವಿಗಳು ಕವಿತೆಗಳನ್ನು ವಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts