More

    ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ:ಎಚ್.ಡಿ.ದೇವೇಗೌಡರು

    ಹಾಸನ: ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಈ ವಿಷಯವಾಗಿ ಪ್ರಧಾನಿ ಜತೆ ಎರಡು ಬಾರಿ ಸಭೆಯಲ್ಲಿ ಭಾಗಿಯಾಗಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು.
    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರು ತಮಿಳುನಾಡಿನ ಯಾರ ಹಂಗಿನಿಂದಲೂ ದೇಶ ಆಳುವ ಪರಿಸ್ಥಿತಿ ಬರಲ್ಲ. ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಹೇಳಿದ್ದಾರೆ. ಕಾವೇರಿ ನೀರಿನ ಹಂಚಿಕೆ ಬಗ್ಗೆ ಸ್ಟಾಲಿನ್ ಉದ್ಧಟತನದ ಮಾತುಗಳನ್ನಾಡುತ್ತಿದ್ದಾರೆ. ಈ ಭಾಗದ ನೀರಿನ ಸಮಸ್ಯೆ ನನಗೆ ಅರ್ಥ ಆಗಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ಮೆಟ್ಟೂರಿನಲ್ಲಿ ಕುಡಿಯುವ ನೀರಿಗಾಗಿ ಮೇಕೆದಾಟು ಡ್ಯಾಂ ನಿರ್ಮಾಣ ಮಾಡುವ ಸಂಬಂಧ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.
    ಕೆಲವು ಕಡೆ ಬಿಜೆಪಿಯವರು ನಮಗೆ ಸಹಕಾರ ನೀಡಿಲ್ಲ. ಉದಾಹರಣೆಗೆ ಹಾಸನದಲ್ಲಿ ಕೆಲವರು ಕೆಲಸ ಮಾಡಿಲ್ಲ. ಮಂಡ್ಯದಲ್ಲಿ ಸುಮಲತಾ ಸಹಕಾರ ನೀಡಿಲ್ಲ. ಏನೇ ಇದ್ದರೂ, ಕಾವೇರಿ ಜಲಾನಯನ ಪ್ರದೇಶದ ಹಾಸನ, ಮಂಡ್ಯ ಸೇರಿದಂತೆ ಈ ಭಾಗದಲ್ಲಿ ಎಲ್ಲಾ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಮಂಡ್ಯದಲ್ಲಿ ಕುಮಾರಸ್ವಾಮಿಗೆ ಯಾವುದೇ ಅಪಾಯ ಇಲ್ಲ. ಅವರು ಗೆಲ್ಲುತ್ತಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ಆಗಲಿ ಎಂದು 125 ಕೋಟಿ ಎಲ್‌ಓಸಿ ಬಿಡುಗಡೆ ಮಾಡಿದ್ದಾರೆ ಎಂದು ಸರ್ಕಾರವನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಕಾವೇರಿ ನೀರಿನ ಸಮಸ್ಯೆ ಜೀವನ್ಮರಣದ ಪ್ರಶ್ನೆ. ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ 28 ಸ್ಥಾನಗಳನ್ನೂ ಗೆಲ್ಲಬೇಕು. ಯಾರು ಎಷ್ಟೇ ಪ್ರಚಾರ ಅಪಪ್ರಚಾರ ಮಾಡಲಿ ಜನಗಳ ಮನಸ್ಸಲ್ಲಿ ದೇವೇಗೌಡರು 91ನೇ ವಯಸ್ಸಿನಲ್ಲೂ ಹೋರಾಟ ಮಾಡುತ್ತಿದ್ದಾರೆ ಎಂಬುದು ಮನಸ್ಸಿಗೆ ನಾಟಿದೆ ಎಂದರು.
    ಬೆಂಗಳೂರು ಗ್ರಾಮಾಂತರದಲ್ಲಿ ನಿನ್ನೆ ಏಳು ನಡೆ ಸಭೆ ಮಾಡಿದೆ. ಹೋದ ಕಡೆಯೆಲ್ಲೆಲ್ಲಾ ಜನಸಾಗರವೇ ನೆರೆದಿತ್ತು. ಅವರ ಬಳಿ ಹಣದ ಹೊಳೆಯಿದೆ. ಏನು ಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ಆದರೂ ಡಾಕ್ಟರ್ ಮಂಜುನಾಥ್ ಗೆಲ್ಲಲಿದ್ದಾರೆ ಎಂದರು.

    ಕಾಂಗ್ರೆಸ್ ಪ್ರಣಾಳಿಕೆಗೆ ಟೀಕೆ:
    ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರುವ ಶಕ್ತಿ ಇಲ್ಲ, ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಣಾಳಿಕೆ ಭರವಸೆ ಹಾಗೂ ದೇಶದ ಸಂಪತ್ತನ್ನು ಹೇಗೆ ಹಂಚಿಕೆ ಮಾಡುತ್ತಾರೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
    ಬಹುಶಃ ಅವರು ದೇಶ ತಲೆಕೆಳಗಾಗಿ ಮಾಡಲು ಬಯಸುತ್ತಿದ್ದಾರೆ ಎಂದ ಗೌಡರು, ಸಂಪತ್ತಿನ ಸಮೀಕ್ಷೆ ಮಾಡಲು ಮತ್ತು ಅದನ್ನು ಮರುಹಂಚಿಕೆ ಮಾಡಲು ರಾಹುಲ್‌ಗಾಂಧಿ ಏನೋ ಮಾವೋವಾದಿ ನಾಯಕ ಎಂದು ಕೊಂಡಿದ್ದಾರೋ ಎಂದು ಕೇಳಿದರು.
    ಸಂಪತ್ತಿನ ಮರುಹಂಚಿಕೆ ಬಗ್ಗೆ ಮಾತನಾಡುವ ಮೂಲಕ ರಾಹುಲ್ ಗಾಂಧಿ ಅವರು ಮಾರುಕಟ್ಟೆ ಸುಧಾರಣೆ ತಂದು ಈ ರಾಷ್ಟ್ರದ ಸಂಪತ್ತನ್ನು ಹೆಚ್ಚಿಸಿದ ಇಬ್ಬರು ಕಾಂಗ್ರೆಸ್‌ನ ಪ್ರಧಾನಿಗಳನ್ನು ಅವಮಾನಿಸಿದ್ದಾರೆ. ಅವರದೇ ಪಕ್ಷದ ಇಬ್ಬರು ಪ್ರಧಾನಿಗಳು ಮಾಡಿದ್ದೆಲ್ಲ ತಪ್ಪು ಎಂದು ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
    ರಾಹುಲ್ ಗಾಂಧಿ 30 ಲಕ್ಷ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ. ನಾನೂ ಕೂಡ ಈ ದೇಶ ಆಳಿದ್ದೇನೆ. ಕೇವಲ 40 ಲಕ್ಷ ಉದ್ಯೋಗ ಮಂಜೂರಾಗಿವೆ. ಅವರು ರಾತ್ರೋರಾತ್ರಿ 30 ಲಕ್ಷ ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತಾರೆ. ಪ್ರಾಯೋಗಿಕ ಜ್ಞಾನವಿಲ್ಲದವರು ಮಾತ್ರ ಹೀಗೆ ಮಾತನಾಡಬಲ್ಲರು ಎಂದು ಲೇವಡಿ ಮಾಡಿದರು.
    ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್.ರಘುಗೌಡ, ಮುಖಂಡರಾದ ರಾಜೇಗೌಡ, ಕರೀಗೌಡ, ಅನಂತ್ ಕುಮಾರ್, ಪೂರ್ಣಚಂದ್ರ ತೇಜಸ್ವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts