More

    ಕಾಲ ಕಾಲಕ್ಕೆ ತೆರಿಗೆ ಪಾವತಿ ವಿಧಾನ ಸರಳೀಕರಣ

    ಚಿಕ್ಕಬಳ್ಳಾಪುರ: ಜಿಎಸ್‌ಟಿ ನಿಯಮಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಂಡಾಗ ಎಲ್ಲ ಗೊಂದಲಗಳೂ ದೂರವಾಗುತ್ತವೆ ಎಂದು ವಾಣಿಜ್ಯ ತೆರಿಗೆ ಇಲಾಖೆ (ಇ ಆಡಳಿತ) ಅಪರ ಆಯುಕ್ತ ಡಾ ಜಿ.ವಿ.ಮುರಳಿಕೃಷ್ಣ ತಿಳಿಸಿದರು.

    ನಗರದ ಅಂಬೇಡ್ಕರ್ ಭವನದಲ್ಲಿ ಅಖಿಲ ಭಾರತ ತೆರಿಗೆ ಸಲಹೆಗಾರರ ಒಕ್ಕೂಟ(ದಕ್ಷಿಣ ವಲಯ), ರಾಜ್ಯ ತೆರಿಗೆ ಸಲಹೆಗಾರರ ಸಂಘ, ಜಿಲ್ಲೆ ತೆರಿಗೆ ಸಲಹೆಗಾರರ ಸಂಘ, ಸರಕು ಮತ್ತು ಸೇವಾ ತೆರಿಗೆ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ಹೊಸ ನಮೂನೆಗಳ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದೇಶದ ಪ್ರಗತಿಗೆ ತೆರಿಗೆ ಸಂಗ್ರಹ ಪ್ರಮಾಣ ಆದಷ್ಟು ಹೆಚ್ಚಾಗಬೇಕು. ಇದರಿಂದ ಕಾಲ ಕಾಲಕ್ಕೆ ಜನಪರ ಕಾರ್ಯಕ್ರಮಗಳ ಅನುಷ್ಠಾನ, ಅಗತ್ಯ ಸವಲತ್ತುಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಜನರು ನಿಯಮಾನುಸಾರ ತೆರಿಗೆ ಪಾವತಿಸಬೇಕು ಎಂದರು.

    ತೆರಿಗೆ ಪಾವತಿಯಲ್ಲಿ ಗೊಂದಲ ಉಂಟಾದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಲ್ಲವೇ ಸಲಹೆಗಾರರ ಮಾರ್ಗದರ್ಶನ ಪಡೆಯಬೇಕು. ಇದರಿಂದ ಅನವಶ್ಯಕವಾಗಿ ನೋಟಿಸ್ ಸ್ವೀಕಾರ, ದಂಡ ಸೇರಿ ನಾನಾ ಸಮಸ್ಯೆಗಳನ್ನು ಎದುರಿಸುವುದು ತಪ್ಪುತ್ತದೆ ಎಂದರು.

    ಕಾಲ ಕಾಲಕ್ಕೆ ತೆರಿಗೆ ಪಾವತಿ ವಿಧಾನವನ್ನು ಸರಳೀಕರಣಗೊಳಿಸುತ್ತದೆ. ಈಗ ಆನ್‌ಲೈನ್ ಮೂಲಕ ಕುಳಿತಲ್ಲಿಯೇ ತೆರಿಗೆ ಪಾವತಿಸುವ ವ್ಯವಸ್ಥೆಯಿದ್ದ ಆದಾಯ ಮತ್ತು ಖರ್ಚಿಗೆ ಅನುಗುಣವಾಗಿ ಸುಲಭವಾಗಿ ತೆರಿಗೆ ಲೆಕ್ಕಾಚಾರ ಹಾಕಬಹುದು. ಪ್ರತಿಯೊಬ್ಬರು ಜಿಎಸ್‌ಟಿ ತೆರಿಗೆ ಪಾವತಿಯ ಸುಲಭ ವಿಧಾನಗಳ ಬಗ್ಗೆ ಸಮರ್ಪಕ ಮಾಹಿತಿ ಹೊಂದಿರಬೇಕು. ಆದರೆ ಇನ್ನೂ ಕೆಲವೆಡೆ ಗೊಂದಲ, ಸಮಸ್ಯೆಗಳು ಕಂಡು ಬಂದಿದ್ದು, ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ಈಗಾಗಲೇ ಬಹುತೇಕ ಸುಧಾರಣೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

    ಜಿಎಸ್‌ಟಿಯ ಬಗ್ಗೆ ಜನರಲ್ಲಿ ತಿಳಿವಳಿಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ತೆರಿಗೆ ಸಲಹೆಗಾರರ ಸಂಘವು ನುರಿತ ತಜ್ಞರು ಮತ್ತು ಹಿರಿಯ ಅಧಿಕಾರಿಗಳು, ತೆರಿಗೆ ಪಾವತಿದಾರರನ್ನೊಳಗೊಂಡಂತೆ ಕಾರ್ಯಾಗಾರ, ಸಂವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ ಎಂದು ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಸ್.ನಂಜುಂಡ ಪ್ರಸಾದ್ ವಿವರಿಸಿದರು.

    ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಎಸ್.ಮಿರ್ಜ್ಹಾ ಅಜಮತ್ ಉಲ್ಲಾ, ಸಹಾಯಕ ಆಯುಕ್ತ ಸುರೇಂದ್ರ ಕುಮಾರ್, ವಿ.ಕಷ್ಣ, ಸರಕು ಮತ್ತು ಸೇವಾ ತೆರಿಗೆ ಅಧಿಕಾರಿ ರಾಜಾರಾಂ, ಕಾರ್ಯದರ್ಶಿ ಮುನಿರಾಮು, ಖಜಾಂಚಿ ರಂಜಿತ್ ಕುಮಾರ್ ಇತರರಿದ್ದರು.

    ತೆರಿಗೆ ಪಾವತಿ ಕುರಿತ ಸಂವಾದ: ಜಿಲ್ಲೆಯ ತೆರಿಗೆ ಪಾವತಿದಾರರು ಮತ್ತು ಅಧಿಕಾರಿಗಳ ನಡುವೆ ಜಿಎಸ್‌ಟಿ, ವಿವಿಧ ನಮೂನೆಗಳ ಬಗ್ಗೆ ಸಂವಾದ ನಡೆಯಿತು. ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಸಂಬಂಧಿಸಿದ ತೆರಿಗೆ ಇಲಾಖೆಯ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಕೆ, ತೆರಿಗೆ ಹಣ ಲೆಕ್ಕಾಚಾರ ಮತ್ತು ನಮೂದಿಸುವಿಕೆ, ಅಂಗೀಕಾರ, ಮೊಬೈಲ್‌ಗೆ ಒಟಿಪಿ ಸಂಖ್ಯೆ ರವಾನೆ, ತಾಂತ್ರಿಕ ದೋಷ ಮತ್ತು ಪರಿಹಾರ, ನೂತನ ತೆರಿಗೆಯ ಕಾಯ್ದೆಯಲ್ಲಿನ ಗೊಂದಲಗಳ ನಿವಾರಣೆ, ತೆರಿಗೆ ಪಾವತಿಯ ಹೊಸ ವಿಧಾನದ ಮತ್ತಷ್ಟು ಸರಳೀಕರಣ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts