More

    ಕಾಲ್ನಡಿಗೆಯಲ್ಲಿ ಮ.ಬೆಟ್ಟಕ್ಕೆ ಎರಡು ಸಾವಿರ ಜನ

    ಹನೂರು: ಪಟ್ಟಣದ ಮಲೆಮಹದೇಶ್ವರ ಸೇವಾ ಸಮಿತಿ ವತಿಯಿಂದ ಕೈಗೊಂಡಿದ್ದ ಪಾದಯಾತ್ರೆಯಲ್ಲಿ ಪಟ್ಟಣದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಶನಿವಾರ ಮಹದೇಶ್ವರ ಬೆಟ್ಟಕ್ಕೆ ತೆರಳಿದರು.

    ಪಟ್ಟಣದ ಪೆಟ್ರೋಲ್ ಬಂಕ್ ಬಳಿ ಭಕ್ತರು ಜಮಾಯಿಸಿದ್ದ ವೇಳೆ ಸೇವಾ ಸಮಿತಿ ಮುಖ್ಯಸ್ಥ ನಾರಾಯಣ್ ಪೂಜೆ ಸಲ್ಲಿಸಿ ಮಾತನಾಡಿ, ಕಳೆದ 15 ವರ್ಷಗಳಿಂದ ಮೈಸೂರು ದಸರಾ ಮುಕ್ತಾಯದ ನಂತರ ಸೀಗೆ ಹುಣ್ಣಿಮೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಾದಪ್ಪನ ಭಕ್ತರು ಪಟ್ಟಣದಿಂದ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಾಗಮಲೆಗೂ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ. ಪ್ರಾರಂಭದಲ್ಲಿ 30 ಭಕ್ತರಿದ್ದ ಪಾದಯಾತ್ರೆಯಲ್ಲಿ ಇದೀಗ 2 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದಾರೆ ಎಂದರು.

    ಈ ಹಿಂದೆ ಪ್ರತಿಯೊಬ್ಬರಿಂದ ಸರದಿ ರೂಪದಲ್ಲಿ ಹಣ ಸಂಗ್ರಹಿಸಿ ಮಾರ್ಗಮಧ್ಯೆ ಅಲ್ಲಲ್ಲಿ ಅನ್ನಸಂತರ್ಪಣೆ ನಡೆಸಲಾಗುತ್ತಿತ್ತು. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ದಾನಿಗಳು ಆಹಾರ ಪದಾರ್ಥ ಹಾಗೂ ಭಕ್ತರಿಗೆ ಅನುಕೂಲವಾಗುವ ಇನ್ನಿತರ ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

    ವಿವಿಧ ಜಿಲ್ಲೆಗಳ ಭಕ್ತರೂ ಭಾಗಿ: ಸೀಗೆ ಹುಣ್ಣಿಮೆಯ ಹಿನ್ನ್ನೆಲೆ ಮ.ಬೆಟ್ಟದಲ್ಲಿ ನಡೆಯುವ ವಿವಿಧ ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ 3 ದಿನಗಳಿಂದ ಚಾ.ನಗರ, ಮೈಸೂರು, ಮಂಡ್ಯ, ಚನ್ನಪಟ್ಟಣ ಹಾಗೂ ಇನ್ನಿತರ ಕಡೆಗಳಿಂದ ಭಕ್ತರು ಕೊಳ್ಳೇಗಾಲ-ಹನೂರು ಮಾರ್ಗವಾಗಿ ಮಾದಪ್ಪನ ಭಕ್ತಿಯ ಹಾಡುಗಳನ್ನು ಹೇಳುತ್ತಾ, ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts