More

    ಕಾಲೇಜು ಅಧ್ಯಾಪಕರಿಂದ ಮೌಲ್ಯಮಾಪನ ಬಹಿಷ್ಕಾರ

    ಬೆಳಗಾವಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜು ಅಧ್ಯಾಪಕರು ಪದವಿ ಪರೀಕ್ಷೆಗಳ ಮೌಲ್ಯಮಾಪನ ಬಹಿಷ್ಕರಿಸಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಕ್ಲಬ್ ರಸ್ತೆಯ ಬಿ.ಕೆ. ಕಾಲೇಜು, ಮಹಾಂತೇಶ ನಗರದ ಬಿ.ಎಡ್. ಕಾಲೇಜು, ಆರ್‌ಪಿಡಿ ವೃತ್ತದ ಬಳಿಯ ಜಿಎಸ್‌ಎಸ್ ಕಾಲೇಜು ಹಾಗೂ ಸಂಗೊಳ್ಳಿ ರಾಯಣ್ಣ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ವಿವಿ ವ್ಯಾಪ್ತಿಯ ಕಾಲೇಜು ಅಧ್ಯಾಪಕರು ಪದವಿ ಪರೀಕ್ಷೆಗಳ ಮೌಲ್ಯಮಾಪಕರು, ಮೇಲ್ವಿಚಾರಕರು, ಬಾಹ್ಯ ಪರೀಕ್ಷಕರು, ಆಂತರಿಕ ಪರಿವೀಕ್ಷಕರು, ಪರೀಕ್ಷಾ ಕೊಠಡಿ ಸೂಪರ್‌ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಪ್ರತಿ 2 ವರ್ಷಕ್ಕೊಮ್ಮೆ ಎಲ್ಲ ಪರೀಕ್ಷಾ ಕರ್ತವ್ಯಗಳ ಸಂಭಾವನೆಯ ಶೇ. 10 ರೂ. ಹೆಚ್ಚಿಸಬೇಕೆಂಬ ನಿಯಮವನ್ನು ವಿಶ್ವವಿದ್ಯಾಲಯ ಪಾಲಿಸದ ಕಾರಣ ಅಧ್ಯಾಪಕರು ಮೌಲ್ಯಮಾಪನ ಬಹಿಷ್ಕರಿಸಿದ್ದಾರೆ. 2018ರಲ್ಲಿ ವಿವಿಯ ವಿಶ್ರಾಂತ ಕುಲಪತಿ ಎಸ್.ಬಿ. ಹೊಸಮನಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ಪ್ರತಿ 2 ವರ್ಷಕ್ಕೊಮ್ಮೆ ಪರೀಕ್ಷಾ ಕಾರ್ಯಗಳ ಸಂಭಾವನೆಯನ್ನು ಶೇ.10 ಹೆಚ್ಚಿಸಬೇಕು ಎಂದು ವರದಿ ನೀಡಿದೆ. ಆದರೆ, 5 ವರ್ಷಗಳು ಕಳೆದರೂ ಇದು ಸಾಕಾರಗೊಂಡಿಲ್ಲ. ಜತೆಗೆ ಮೌಲ್ಯಮಾಪನ ಕಾರ್ಯಕ್ಕೆ ಒಂದು ಪೇಪರ್‌ಗೆ 15 ರೂ.ನಿಂದ 20 ರೂ.ಗೆ ಏರಿಕೆ ಮಾಡಬೇಕು, ಪ್ರತಿದಿನಕ್ಕೆ ಭತ್ಯೆ 1,200 ರೂ.ನಿಂದ 1,500ರೂ. ಗೆ ಏರಿಸುವ ಕುರಿತಂತೆ ವಿಶ್ವವಿದ್ಯಾಲಯ ಸ್ಪಂದಿಸಿಲ್ಲ ಎಂದು ಅಧ್ಯಾಪಕರು ಆರೋಪಿಸಿದರು.

    ಬೇಡಿಕೆಗಳನ್ನು ಈಡೇರಿಸುವಂತೆ ರಾಣಿ ಚನ್ನಮ್ಮ ವಿವಿ ಮೌಲ್ಯಮಾಪನ ಕುಲಸಚಿವರ ಸಮ್ಮುಖದಲ್ಲಿ ಚರ್ಚಿಸಿ, ಒಂದು ವಾರ ಗಡುವು ನೀಡಲಾಗಿತ್ತು. ಗಡುವು ಮೀರಿದ್ದರಿಂದ ಮೌಲ್ಯಮಾಪನ ಬಹಿಷ್ಕರಿಸಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
    ಮಲ್ಲಿಕಾರ್ಜುನ ಬಿರಾದಾರ, ಸಂಗಮನಾಥ ಲೋಕಾಪುರ, ಡಾ. ಅಶೋಕ ರ‌್ಯಾಥೋಡ, ಡಾ. ಎಸ್.ಬಿ. ಬಿರಾದಾರ, ಡಾ. ಚಂದ್ರಗೌಡ ಬಿರಾದಾರ, ಪ್ರೊ. ವಿಜಯಲಕ್ಷ್ಮೀ ತಿರ್ಲಾಪುರ, ಸಂಜಯ್ ಕೋತ, ರವಿ ಹಾವನಾಳೆ, ಪ್ರೊ. ಮೋಹನ ಮಾಳಗಿ, ಪ್ರೊ. ಎಂ.ಆರ್. ಹೂಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts