More

    ಕಾರ್ವಿುಕ ಕಾರ್ಡ್​ಗಾಗಿ ಮಧ್ಯವರ್ತಿಗಳಿಂದ ಸುಲಿಗೆ

    ವೀರೇಶ ಹಾರೂಗೇರಿ ಕಲಘಟಗಿ

    ಲಾಕ್​ಡೌನ್ ಸಂಕಷ್ಟದ ಸಮಯದಲ್ಲಿ ವಿವಿಧ ಯೋಜನೆಯಡಿ ಕಾರ್ವಿುಕರಿಗೆ ಕೆಲಸ ನೀಡುವ ಮೂಲಕ ಅವರಿಗೆ ನೆರವಾಗಲು ಸರ್ಕಾರ ಮುಂದಾಗಿದೆ. ಆದರೆ, ಕಲಘಟಗಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಹೊಸದಾಗಿ ಕಾರ್ಡ್​ಗಳನ್ನು ಪಡೆದುಕೊಳ್ಳಲು ಮುಂದಾಗುವ ಬಡ ಕಾರ್ವಿುಕರಿಂದ ಮಧ್ಯವರ್ತಿಗಳು ಸುಲಿಗೆ ನಡೆಸಿದ್ದಾರೆ.

    ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್​ನಡಿ ಚಾಲ್ತಿಯಲ್ಲಿರುವ ಪ್ರತಿ ಕಾರ್ಡ್​ದಾರರಿಗೆ 3 ಸಾವಿರ ರೂ. ಮತ್ತು 2 ಸಾವಿರ ರೂ. ಗಳಂತೆ ಒಟ್ಟು 5 ಸಾವಿರ ರೂ. ಹಣ ನೀಡಲಾಗುತ್ತಿದೆ. ಹೀಗಾಗಿ, ಹೊಸದಾಗಿ ಕಾರ್ಡ್ ಮಾಡಿಸುವವರ ಮತ್ತು ಹಳೆಯ ಕಾರ್ಡ್​ಗಳನ್ನು ಮರುಚಾಲ್ತಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.

    ಪಟ್ಟಣದ ಅನೇಕ ಕಂಪ್ಯೂಟರ್ ಕೇಂದ್ರಗಳಲ್ಲಿ ಹಾಗೂ ತಾಲೂಕಿನ ಜೋಡಳ್ಳಿ, ಗಳಗಿಹುಲಕೊಪ್ಪ, ದುಮ್ಮವಾಡ, ಹಿರೇಹೊನ್ನಿಹಳ್ಳಿ, ತಬಕದ ಹೊನ್ನಿಹಳ್ಳಿ, ಮಿಶ್ರಿಕೋಟಿ, ತುಮರಿಕೊಪ್ಪ, ದೇವಿಕೊಪ್ಪ ಸೇರಿ ಹಲವು ಗ್ರಾಮಗಳಲ್ಲಿ ಕಾರ್ವಿುಕ ಕಾರ್ಡ್​ಗಳನ್ನು ಮಾಡಿಕೊಡುವ ಮಧ್ಯವರ್ತಿಗಳ ಸಂಖ್ಯೆ ಹೆಚ್ಚಿದೆ.

    ತಾಲೂಕಿನಾದ್ಯಂತ ಇದುವರೆಗೆ ಒಟ್ಟು 13,154 ಕಾರ್ಡ್​ದಾರರು ಹೆಸರು ನೋಂದಾಯಿಸಿದ್ದಾರೆ. ಪ್ರತಿ ನೂತನ ಕಾರ್ಡ್ ತಯಾರಿಸಲು ಸರ್ಕಾರವು ಆರಂಭದಲ್ಲಿ ನೋಂದಣಿ ಶುಲ್ಕ 25 ರೂ. ಹಾಗೂ ಪ್ರತಿ ವರ್ಷ 25 ರೂ. ಗಳಂತೆ 3 ವರ್ಷಗಳ ನೋಂದಣಿಗೆ 75 ರೂ. ವಾರ್ಷಿಕ ಶುಲ್ಕ ಸೇರಿ ಒಟ್ಟಾರೆ 100 ರೂ.ಗಳನ್ನು ಫಲಾನುಭವಿಗಳಿಂದ ಭರಿಸಿಕೊಳ್ಳುತ್ತದೆ. ಆದರೆ, ಇಲ್ಲಿನ ಕಾರ್ವಿುಕ ಇಲಾಖೆ ಕಚೇರಿಯಲ್ಲಿ ಪ್ರತಿ ಕಾರ್ಡ್​ನ ಮರು ನೋಂದಣಿಗೆ 600 ರೂ. ಹಾಗೂ ನೂತನ ಕಾರ್ಡ್ ನಿರ್ವಣಕ್ಕೆ 700 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಗ್ರಾಮಗಳಲ್ಲಿಯೂ 1,000 ದಿಂದ 1,500 ರೂ. ವರೆಗೂ ಹಣಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ತಾಲೂಕಿನಾದ್ಯಂತ ಬಡ ಜನರ ಸಂಖ್ಯೆ ಹೆಚ್ಚಿದ್ದು, ಸುಲಭವಾಗಿ ಮಧ್ಯವರ್ತಿಗಳ ಮೋಸಕ್ಕೆ ತುತ್ತಾಗುತ್ತಿದ್ದಾರೆ.

    ಕಾರ್ವಿುಕ ಇಲಾಖೆ ಇದ್ದೂ ಇಲ್ಲದಂತೆ: ಕಲಘಟಗಿ ತಾಲೂಕಿನಲ್ಲಿ ಕಾರ್ವಿುಕ ಇಲಾಖೆ ಇದ್ದೂ ಇಲ್ಲದಂತಾಗಿದೆ. ಈ ಕಚೇರಿಯಲ್ಲಿ ವರ್ಷಗಳಿಂದ ಕಂಪ್ಯೂಟರ್ ಆಪರೇಟರ್ ಹೊರತುಪಡಿಸಿ ಸಿಪಾಯಿಯಾಗಲಿ ಅಥವಾ ಬೇರೆ ಯಾವುದೇ ಸಿಬ್ಬಂದಿ ಇಲ್ಲ. ಪೂರ್ಣ ಪ್ರಮಾಣದ ಕಾರ್ವಿುಕ ನಿರೀಕ್ಷಕ ಅಧಿಕಾರಿ ಸಹ ಇಲ್ಲಿಲ್ಲ. ಮಧ್ಯವರ್ತಿಗಳ ಉಪಟಳಕ್ಕೆ ಕಚೇರಿಯಲ್ಲಿನ ಸಿಬ್ಬಂದಿ ಕೊರತೆ ಸಹ ಕಾರಣವಾಗಿದೆ.

    ಕಾರ್ವಿುಕ ಕಾರ್ಡ್ ಮಾಡಿಸಲು ಅಗತ್ಯ ಮಾಹಿತಿ, ಕಾಗದ ಪತ್ರ, ಉದ್ಯೋಗ ಪತ್ರ ಸೇರಿ ಎಲ್ಲ ದಾಖಲೆ ನೀಡುತ್ತಿದ್ದೇವೆ. ಆದರೂ ಹೆಚ್ಚು ಹಣ ಬೇಕೆಂದು ಮಧ್ಯವರ್ತಿಗಳು ಒತ್ತಾಯಿಸುತ್ತಿದ್ದಾರೆ.

    | ನೀಲಪ್ಪ ಮೇಲಿನಮನಿ, ಕೂಲಿ ಕಾರ್ವಿುಕ

    ಕೂಲಿ ಕಾರ್ವಿುಕರಲ್ಲದವರು ಸಹ ಹೆಸರು ನೋಂದಾಯಿಸುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ಬೇರೆಡೆ ಕೆಲಸ ಸಿಗದೆ ಬಡಜನರು ತೊಂದರೆಗೀಡಾಗಿದ್ದಾರೆ. ಇಂತಹ ಸಮಯದಲ್ಲಿ ಬಡವರಿಂದ ಹಣ ಸುಲಿಗೆ ಮಾಡುವುದನ್ನು ನಿಲ್ಲಿಸಿ, ಅವರಿಗೆ ಸಹಾಯ ಮಾಡಲು ಮುಂದಾಗಬೇಕು. ಹೆಚ್ಚು ಹಣ ವಸೂಲಿ ಮಾಡುವವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.

    | ಬಸವರಾಜ ಹೊನ್ನಿಹಳ್ಳಿ, ಸಮಾಜ ಸೇವಕ

    ಕಲಘಟಗಿ ತಾಲೂಕಿನಲ್ಲಿ ಕಾರ್ವಿುಕ ಕಾರ್ಡ್ ಮಾಡಿಕೊಡಲು ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿಲ್ಲ. ಆಧಾರ ಸಹಿತವಾಗಿ ಅಥವಾ ನೇರವಾಗಿ ಮಾಹಿತಿ ನೀಡಿದಲ್ಲಿ ಮಧ್ಯವರ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

    | ಅಶೋಕ ಒಡೆಯರ, ಹಿರಿಯ ಕಾರ್ವಿುಕ ನಿರೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts