More

    ಕಾರ್ವಿುಕರಿಗೆ ಶ್ರಮಿಕ ರೈಲು ವ್ಯವಸ್ಥೆ

    ಹಾವೇರಿ: ಉದ್ಯೋಗ ಇತರ ಕಾರಣಗಳಿಗಾಗಿ ಜಿಲ್ಲೆಯಲ್ಲಿ ಉಳಿದುಕೊಂಡಿದ್ದ ಜಾರ್ಖಂಡ್, ಬಿಹಾರ, ರಾಜಸ್ಥಾನ ಹಾಗೂ ಉತ್ತರಪ್ರದೇಶ ರಾಜ್ಯಗಳ ಕಾರ್ವಿುಕರಿಗೆ ಪ್ರಯಾಣ ವೆಚ್ಚ ಭರಿಸಿ ಸ್ವಂತ ರಾಜ್ಯಗಳಿಗೆ ತೆರಳಲು ವಿಶೇಷ ಶ್ರಮಿಕ ರೈಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಈ ನಾಲ್ಕು ರಾಜ್ಯಗಳ ಕಾರ್ವಿುಕರ ವಿವರ ಸಲ್ಲಿಸಲು ತಹಸೀಲ್ದಾರ್​ಗಳಿಗೆ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಸೂಚಿಸಿದರು.

    ಹೊರ ರಾಜ್ಯದ ಕಾರ್ವಿುಕರನ್ನು ಆಯಾ ರಾಜ್ಯಗಳಿಗೆ ಕಳುಹಿಸುವ ಕುರಿತು ತಾಲೂಕು ಆಡಳಿತದೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿದ ಅವರು, ಈ ನಾಲ್ಕು ರಾಜ್ಯಗಳ ಕಾರ್ವಿುಕರ ಮಾಹಿತಿ ಸಂಗ್ರಹ, ಸೇವಾ ಸಿಂಧು ಆಪ್​ನಲ್ಲಿ ನೋಂದಣಿ ಹಾಗೂ ಪ್ರಯಾಣ ವ್ಯವಸ್ಥೆಯ ಉಸ್ತುವಾರಿಗಾಗಿ ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ತಿಳಿಸಿದರು.

    ಆಯಾ ರಾಜ್ಯದ ಕಾರ್ವಿುಕರು ಈ ಜಿಲ್ಲೆಯೊಳಗಿದ್ದರೆ ಸ್ವಇಚ್ಛೆ ಮೇರೆಗೆ ಅವರ ರಾಜ್ಯಕ್ಕೆ ತೆರಳಬಹುದು. ಜಿಲ್ಲೆಯಿಂದ ಹುಬ್ಬಳ್ಳಿ ರೈಲು ನಿಲ್ದಾಣದವರೆಗೆ ತೆರಳುವ ಕಾರ್ವಿುಕರಿಗೆ ರಾಜ್ಯ ರಸ್ತೆ ಸಾರಿಗೆ ಬಸ್ ವ್ಯವಸ್ಥೆ ಮಾಡಬೇಕು. ಬಸ್ ಹಾಗೂ ರೈಲಿನ ವೆಚ್ಚವನ್ನು ಕಾರ್ವಿುಕರೇ ಭರಿಸಬೇಕು. ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿರಬೇಕು. ಅರ್ಜಿ ಸಲ್ಲಿಸಿ ಅನುಮೋದನೆ ಇಲ್ಲದಿದ್ದರೂ ಅವರ ಮಾಹಿತಿ ಪಡೆಯಬೇಕು. ಈವರೆಗೆ ಅರ್ಜಿ ಸಲ್ಲಿಸದೇ ಇರುವ ಕಾರ್ವಿುಕರು ತಮ್ಮ ಸ್ವಂತ ರಾಜ್ಯಕ್ಕೆ ತೆರಳಲು ಇಚ್ಛಿಸಿದಲ್ಲಿ ಅವರ ಮಾಹಿತಿಯನ್ನು ಸೇವಾ ಸಿಂಧುವಿನಲ್ಲಿ ದಾಖಲಿಸಬೇಕು. ದಾಖಲಾತಿಯ ಆರ್​ಡಿ ನಂಬರ್ ಪಡೆದು ಸಲ್ಲಿಸಿದರೆ ಸಾಕು ಎಂದರು.

    ನಾಲ್ಕು ರಾಜ್ಯಗಳ ಕಾರ್ವಿುಕರು ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಸ್ವಯಂ ಸೇವಾ ಸಂಘಟನೆಗಳು, ಕೈಗಾರಿಕಾ ಘಟಕಗಳು, ಕ್ವಾರಂಟೈನ್ ಸೆಂಟರ್ ಸೇರಿ ವಿವಿಧೆಡೆಯಿಂದ ಮಾಹಿತಿ ಸಂಗ್ರಹಿಸಬೇಕು. ಈಗಾಗಲೇ ಉತ್ತರಪ್ರದೇಶ 235, ಬಿಹಾರ 60, ರಾಜಸ್ಥಾನ 11, ಜಾರ್ಖಂಡ್​ನ 7 ಜನರು ಇರುವುದಾಗಿ ಮಾಹಿತಿಯಿದೆ. ಮತ್ತೊಮ್ಮೆ ಪರಿಶೀಲಿಸಿ. ಈ ರಾಜ್ಯಗಳಿಗೆ ಯಾವ ದಿನಾಂಕ, ಯಾವ ಸಮಯದಲ್ಲಿ ಹುಬ್ಬಳ್ಳಿಯಿಂದ ರೈಲು ಹೊರಡಲಿದೆ ಎಂಬ ಮಾಹಿತಿಯನ್ನು ಹಾಗೂ ರೈಲು ಪ್ರಯಾಣ ವೆಚ್ಚದ ದರವನ್ನು ತಾಲೂಕು ಆಡಳಿತಕ್ಕೆ ರವಾನಿಸಲಾಗುವುದು ಎಂದು ತಿಳಿಸಿದರು.

    ಹುಬ್ಬಳ್ಳಿಯಿಂದ ಆಯಾ ರಾಜ್ಯಕ್ಕೆ ತಲುಪುವ ರೈಲು ದರವನ್ನು ಕಾರ್ವಿುಕರಿಂದ ಪಡೆದು ಮುಂಗಡವಾಗಿ ನೋಡಲ್ ಅಧಿಕಾರಿಗಳು ಟಿಕೆಟ್ ಖರೀದಿಸಬೇಕು. ಜಿಲ್ಲೆಯಿಂದ ನೇಮಕವಾದ ಅಧಿಕಾರಿಗಳು ಅವರನ್ನು ನಿಗದಿತ ಸ್ಥಳದಲ್ಲಿ ಆರೋಗ್ಯ ತಪಾಸಣೆ ನಡೆಸಬೇಕು. ಈ ಕುರಿತು ವೈದ್ಯರಿಂದ ಪ್ರಮಾಣಪತ್ರ ಪಡೆದು ಆಯಾ ರಾಜ್ಯಗಳ ನೋಡಲ್ ಅಧಿಕಾರಿಗಳಿಗೆ ಕಳುಹಿಸಿಕೊಡಬೇಕು. ಈ ಕಾರ್ವಿುಕರಿಗಾಗಿಯೇ ವಿಶೇಷ ಶ್ರಮಿಕ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಕಡಿಮೆ ಖರ್ಚಿನಲ್ಲಿ ಅವರವರ ಊರಿಗೆ ಸೇರಲು ಸರ್ಕಾರ ಮಾಡಿರುವ ಈ ವಿಶೇಷ ವ್ಯವಸ್ಥೆ ಬಳಸಿಕೊಳ್ಳಬೇಕು ಎಂದರು.

    ಮೊದಲ ಹಂತದಲ್ಲಿ ಮೇ 19ರಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬಿಹಾರ ಹಾಗೂ ಜಾರ್ಖಂಡ್ ರಾಜ್ಯಕ್ಕೆ ರೈಲು ಹೊರಡಲಿದೆ. ಹುಬ್ಬಳ್ಳಿಯಿಂದ ಬಿಹಾರಕ್ಕೆ ಹೊರಟ ರೈಲು ನೇರವಾಗಿ ಬಿಹಾರ ರಾಜ್ಯದ ಕತಿಹಾರ ರೈಲು ನಿಲ್ದಾಣದಲ್ಲಿ ನಿಲ್ಲಲಿದೆ. ಜಾರ್ಖಂಡ್ ರಾಜ್ಯಕ್ಕೆ ತೆರಳುವ ರೈಲು ಹುಬ್ಬಳ್ಳಿಯಿಂದ ಹೊರಟು ಜಾರ್ಖಂಡ್ ರೈಲ್ವೆ ನಿಲ್ದಾಣದಲ್ಲಿ ನಿಲ್ಲಲಿದೆ. ಮಧ್ಯ ಎಲ್ಲಿಯೂ ನಿಲುಗಡೆ ಇರುವುದಿಲ್ಲ. ಅದೇ ರೀತಿ ಹುಬ್ಬಳ್ಳಿಯಿಂದ ಆಯಾ ರಾಜ್ಯಕ್ಕೆ ಹೊರಡುವ ರೈಲುಗಳು ನೇರವಾಗಿ ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ನಿಲ್ಲಲಿವೆ. ಆಯಾ ರಾಜ್ಯಕ್ಕೆ ರೈಲು ಹೊರಡುವ ದಿನಾಂಕದ ಮಾಹಿತಿಯನ್ನು ತಾಲೂಕು ಆಡಳಿತಕ್ಕೆ ತಿಳಿಸಲಾಗುವುದು.

    | ಎಂ. ಯೋಗೇಶ್ವರ, ಅಪರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts