More

    ಕಾರವಾರ ಮೀನು ಮಾರುಕಟ್ಟೆ ಅತಂತ್ರ

    ಸುಭಾಸ ಧೂಪದಹೊಂಡ ಕಾರವಾರ

    ಸಾಕಷ್ಟು ಚರ್ಚೆ, ಪ್ರತಿಭಟನೆಗಳ ಬಳಿಕ ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ವಣವಾದ ನಗರದ ಮೀನು ಮಾರುಕಟ್ಟೆ ಸಂಕೀರ್ಣದ ಚಾಲನೆ ಪ್ರಕ್ರಿಯೆ ಈಗ ಗೊಂದಲದ ಗೂಡಾಗಿದೆ. ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

    ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಮೀನು ಮಾರುಕಟ್ಟೆಯ ಅರ್ಧ ಭಾಗ ಕಾಮಗಾರಿ ಮುಕ್ತಾಯವಾಗಿದೆ. ಉದ್ಘಾಟನೆಗೆ ಸಿದ್ಧವಾಗಿದೆ. ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬಂದು ವೀಕ್ಷಿಸಿ ಹೋಗಿದ್ದಾರೆ. ಆದರೆ, ಹೊಸ ಮಾರುಕಟ್ಟೆಗೆ ಮಾರಾಟಗಾರರೇ ಬರಲು ಸಿದ್ಧರಿಲ್ಲ. ನಗರದಲ್ಲಿ 450ರಷ್ಟು ಮೀನು ಮಾರಾಟಗಾರರಿದ್ದು, ಎಲ್ಲರಿಗೂ ಕೂರಲು ವ್ಯವಸ್ಥೆ ಮಾಡಿಕೊಡುವವರೆಗೆ ನಾವು ಹೊಸ ಮಾರುಕಟ್ಟೆಗೆ ಕಾಲಿಡುವುದಿಲ್ಲ ಎಂದು ಮೀನು ಮಾರಾಟಗಾರ ಮಹಿಳೆಯರು ಪಟ್ಟು ಹಿಡಿದಿದ್ದಾರೆ. ಕೆಲ ಹಳೆಯ ಮಳಿಗೆಗಳ ತೆರವಿನ ವಿಚಾರ ನ್ಯಾಯಾಲಯದಲ್ಲಿರುವುದು ಇನ್ನಷ್ಟು ಜನರಿಗೆ ಆಸನದ ವ್ಯವಸ್ಥೆ ಮಾಡಲು ನಗರಸಭೆಗೆ ಸಮಸ್ಯೆಯಾಗಿದೆ. ಈ ಎಲ್ಲ ಗೊಂದಲದ ನಡುವೆ ಮೀನು ಮಾರುಕಟ್ಟೆ ನಿರ್ವಣಕ್ಕೆ ತೆಗೆದಿರಿಸುವ ನಗರೋತ್ಥಾನ ಯೋಜನೆಯ ಹಣ ಬಳಕೆಯಾಗದ ಕಾರಣ ಸರ್ಕಾರಕ್ಕೆ ವಾಪಸಾಗುವ ಆತಂಕವೂ ಎದುರಾಗಿದೆ.

    ಮಳಿಗೆ ತೆರವು ವಿಳಂಬ: ನಗರೋತ್ಥಾನ 3ನೇ ಹಂತದ ಯೋಜನೆಯಲ್ಲಿ 5 ಕೋಟಿ ರೂ., ಐಡಿಎಸ್​ಎಂಟಿ ಯಲ್ಲಿ 4.96 ಕೋಟಿ ರೂ. ನಗರಸಭೆಯ ಇತರ ಕೆಲವು ಅನುದಾನ ಹೊಂದಿಸಿ ಗಾಂಧಿ ಮಾರುಕಟ್ಟೆಯ ಒಂದು ಭಾಗ ಬಳಸಿಕೊಂಡು ಹಾಗೂ ಹಳೆಯ ಮೀನು ಮಾರುಕಟ್ಟೆಯನ್ನು ತೆರವು ಮಾಡಿ ಹೊಸ ಕಟ್ಟಡ ನಿರ್ವಣಕ್ಕೆ 2017ರಲ್ಲಿ ಯೋಜನೆ ರೂಪಿಸಲಾಯಿತು. 2018ರಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಯೋಜನೆಯಂತೆ ಕಟ್ಟಡ ನಿರ್ವಣಕ್ಕೆ ಗಾಂಧಿ ಮಾರುಕಟ್ಟೆಯ ಒಂದು ಪಾರ್ಶ್ವದಲ್ಲಿದ್ದ 9 ಮಳಿಗೆಗಳನ್ನು ತೆರವು ಮಾಡಬೇಕಿತ್ತು. ಆದರೆ, ಇದಕ್ಕೆ ಅಲ್ಲಿನ ಅಂಗಡಿಕಾರರು ವಿರೋಧ ವ್ಯಕ್ತಪಡಿಸಿ, ಹೈಕೋರ್ಟ್ ಮೆಟ್ಟಿಲೇರಿದ್ದು, ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. 2019ರಲ್ಲಿ ಮುಗಿಯಬೇಕಿದ್ದ ಕಾಮಗಾರಿ ವಿಳಂಬವಾಗಿದೆ. ಈ ಬಗ್ಗೆ ಸಾಕಷ್ಟು ಪ್ರತಿಭಟನೆ, ಸಭೆಗಳು ನಡೆದವು. ಬಳಿಕ ನಗರಸಭೆ ನಿಗದಿತ ಯೋಜನೆಯ ಬದಲು ಮೀನು ಮಾರುಕಟ್ಟೆಯ ಒಂದು ಭಾಗವನ್ನು ಮಾತ್ರ ಕಟ್ಟಿ ಮುಗಿಸಿದೆ.

    ಎರಡು ಅಂತಸ್ತುಗಳ ಈ ಕಟ್ಟಡದ ನೆಲ ಮಹಡಿಯ ಎದುರು ಸದ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳ ಹಿಂದೆ 181 ಮೀನುಗಾರ ಮಹಿಳೆಯರಿಗೆ ಕುಳಿತುಕೊಳ್ಳುವ ಮೀನು ಮಾರಾಟ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ಮಹಿಳೆಗೆ ಮೀನು ಮಾರಾಟಕ್ಕೆ ತಲಾ 13 ಸಾವಿರ ರೂ. ವೆಚ್ಚದಲ್ಲಿ ಒಂದು ಸ್ಟೀಲ್ ಟೇಬಲ್ ಒದಗಿಸಲು ನಗರಸಭೆ ಮುಂದಾಗಿದೆ. ಆದರೇನು ಫಲ ಮಾರಾಟಕ್ಕೆ ಮಹಿಳೆಯರೇ ಬರಲು ಸಿದ್ಧರಿಲ್ಲ.

    ಹೊಸ ಮಳಿಗೆ ಕೊಡಿ
    ಮೀನು ಮಾರುಕಟ್ಟೆ ಸಂಕೀರ್ಣದಲ್ಲಿ ನಿರ್ಮಾಣ ಮಾಡಿದ 9 ಹೊಸ ಮಳಿಗೆಗಳನ್ನು ನೀಡಿದಲ್ಲಿ ಹೈಕೋರ್ಟ್​ನಲ್ಲಿರುವ ದಾವೆ ಹಿಂಪಡೆದು ಸಂಧಾನಕ್ಕೆ ಸಿದ್ಧರಿರುವುದಾಗಿ ಗಾಂಧಿ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಆದರೆ, ಸಂಧಾನ ಸಭೆ ನಡೆಸಲು ನಗರಸಭೆ ಮುಂದಾಗುತ್ತಿಲ್ಲ ಎಂದು ಮಾಜಿ ಶಾಸಕ ಸತೀಶ ಸೈಲ್ ದೂರಿದ್ದಾರೆ. ನಗರಸಭೆ ಮೂಲ ಯೋಜನೆಯನ್ನು ಬಿಟ್ಟು ಕಟ್ಟಡ ನಿರ್ಮಾಣ ಮಾಡಿದೆ. ಇಲ್ಲಿ ರ್ಪಾಂಗ್ ಹಾಗೂ ಕೊಳಚೆ ನೀರು ಶುದ್ಧೀಕರಿಸುವ ಘಟಕವನ್ನು ಕೈಬಿಡಲಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗಲಿದೆ ಎಂದು ಅವರು ಆರೋಪಿಸಿದ್ದಾರೆ.

    ರಸ್ತೆಯ ಮೇಲೆಯೇ ಮಾರಾಟ
    ಟ್ಯಾಗೋರ್ ಕಡಲ ತೀರದ ಪಕ್ಕದಲ್ಲಿರುವ ತಾತ್ಕಾಲಿಕ ಮೀನು ಮಾರುಕಟ್ಟೆಯನ್ನು ನಗರಸಭೆ ತೆರೆದಿಲ್ಲ. ಇದರಿಂದಾಗಿ ಮೀನು ಮಾರಾಟ ಮಹಿಳೆಯರು ನಗರದ ವಿವಿಧೆಡೆ ರಸ್ತೆ ಪಕ್ಕದಲ್ಲಿ ಕುಳಿತು ಮೀನು ಮಾರಾಟದಲ್ಲಿ ತೊಡಗಿದ್ದಾರೆ. ಇದರಿಂದಾಗಿ, ಪರಸ್ಪರ ಅಂತರ ಸಾಧ್ಯವಾಗುತ್ತಿಲ್ಲ. ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    450 ಮೀನು ಮಾರಾಟ ಮಹಿಳೆಯರಲ್ಲಿ ಯಾರು ಹೊಸ ಮಾರುಕಟ್ಟೆಗೆ ಬಂದು ಕೂರುವುದು ಎಂಬ ಗೊಂದಲ ಉಂಟಾಗಿ ಗಲಾಟೆಗೆ ಕಾರಣವಾಗುತ್ತದೆ. ಇದರಿಂದ ಇನ್ನು 6 ತಿಂಗಳು ವಿಳಂಬವಾದರೂ ತೊಂದರೆ ಇಲ್ಲ. ಸದ್ಯ ಹಳೆಯ ತಾತ್ಕಾಲಿಕ ಮೀನು ಮಾರುಕಟ್ಟೆಯಲ್ಲೇ ಕೂರುತ್ತೇವೆ. ನ್ಯಾಯಾಲಯದಲ್ಲಿರುವ ವ್ಯಾಜ್ಯವನ್ನು ಸಂಧಾನದ ಮೂಲಕ ಬಗೆಹರಿಸಿ ಸಂಪೂರ್ಣ ಮಾರುಕಟ್ಟೆ ನಿರ್ಮಾಣ ಮಾಡಿಕೊಡಿ ಎಂಬುದು ಮೀನುಗಾರ ಮಹಿಳೆಯರ ಆಗ್ರಹವಾಗಿದೆ.
    | ಚೇತನ ಹರಿಕಂತ್ರ ಮೀನುಗಾರರ ಮುಖಂಡ

    181 ಜನರಿಗೆ ಮಾತ್ರ ಆಸನದ ವ್ಯವಸ್ಥೆ ಮಾಡಿದರೂ ಇಲ್ಲಿಯೇ ಬಂದು ಕೂರುವ ಬಗ್ಗೆ ಮೀನು ಮಾರಾಟ ಮಹಿಳೆಯರು ಹಿಂದೆ ನಗರಸಭೆಗೆ ಪತ್ರ ಬರೆದುಕೊಟ್ಟಿದ್ದಾರೆ. ಇದರಂತೆ ನಾವು ಒಂದು ಪಾರ್ಶ್ವದ ಕಟ್ಟಡ ಕಾಮಗಾರಿ ಶೀಘ್ರ ಮುಗಿಸಿದ್ದೇವೆ. ಈಗ ಹೇಳಿಕೆ ಬದಲಿಸುವುದು ಸರಿಯಲ್ಲ. ಇನ್ನು 9 ಹಳೆಯ ಮಳಿಗೆಗಳ ಮಾಲೀಕರಿಗೆ ಮಾನವೀಯತೆಯ ಆಧಾರದ ಮೇಲೆ ಹೊಸ ವಾಣಿಜ್ಯ ಸಂಕೀರ್ಣದ ಹಿಂದುಗಡೆ ಅವಕಾಶ ನೀಡುವುದಾಗಿ ನಾವು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದೇವೆ. ಎದುರಿನ ಮಳಿಗೆಗಳೇ ಬೇಕು ಎಂದು ಪಟ್ಟು ಹಿಡಿಯುವುದು ಸರಿಯಲ್ಲ.
    | ಆರ್.ಪಿ.ನಾಯ್ಕ ಕಾರವಾರ ನಗರಸಭೆ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts