More

    ಕಾರಂತರ ವ್ಯಕ್ತಿತ್ವ ಪಾದರಸದಂತಿತ್ತು

    ಧಾರವಾಡ: ಬಡ ಕುಟುಂಬದಲ್ಲಿ ಜನಿಸಿ, ರಂಗಭೂಮಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರಂತರು ಅತ್ಯಂತ ಸರಳ, ಪಾದರಸ ಸದೃಶ ವ್ಯಕ್ತಿತ್ವ ಹೊಂದಿದ್ದರು ಎಂದು ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಹೇಳಿದರು.

    ರಂಗಭೀಷ್ಮ ಬಿ.ವಿ. ಕಾರಂತರ ಜನ್ಮದಿನ ನಿಮಿತ್ತ ನಗರದ ರಂಗಾಯಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತೀಯ ರಂಗಸಂಗೀತ ದಿನ ಕಾರ್ಯಕ್ರಮದಲ್ಲಿ ಬಿ.ವಿ. ಕಾರಂತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

    ಕಾರಂತರು ಹಲವು ಪ್ರತಿಭೆಗಳನ್ನು ಗುರುತಿಸಿ, ಅವರ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕುವೆಂಪು ಸೇರಿ ಅನೇಕ ಶ್ರೇಷ್ಠ ಕೃತಿಕಾರರ ನಾಟಕಗಳನ್ನು ಪ್ರಸ್ತುತಪಡಿಸುತ್ತಿದ್ದರು. ಯಾವುದೇ ವಸ್ತುಗಳಿಂದ ಬರುತ್ತಿದ್ದ ಶಬ್ದದಿಂದ ಸಂಗೀತ ಸಂಯೋಜಿಸುವ ಮೂಲಕ ರಂಗಸಂಗೀತಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

    ಹಿರಿಯ ರಂಗ ಸಂಘಟಕ ಹರ್ಷ ಡಂಬಳ ಮಾತನಾಡಿ, ಬಿ.ವಿ. ಕಾರಂತರು ಯಾವುದೇ ಅಪೇಕ್ಷೆ ಪಡುತ್ತಿರಲಿಲ್ಲ. ಬೇರೆಯವರಿಗೆ ಕಾಯದೆ ರಂಗ ಸಜ್ಜಿಕೆಗಳನ್ನು ತಾವೇ ಮಾಡುತ್ತಿದ್ದರು. ಎಲ್ಲರೊಂದಿಗೆ ಆತ್ಮೀಯತೆ ಹಾಗೂ ಸ್ನೇಹಮಯ ಭಾವನೆ ಹೊಂದಿದ್ದರು ಎಂದರು.

    ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿ, ಕಾರಂತರು ರಂಗಭೂಮಿ ಕುರಿತು ಹಲವಾರು ಕನಸು ಕಂಡಿದ್ದರು. ಅವರ ಕನಸಿನಂತೆ ರಂಗಾಯಣ ಸ್ಥಾಪಿಸಿ, ಗ್ರಾಮೀಣ ಸೇರಿ ವಿವಿಧ ಭಾಗಗಳ ರಂಗ ಕಲಾವಿದರಿಗೆ ತಮ್ಮ ಪ್ರತಿಭೆಗಳನ್ನು ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಿದ್ದಾರೆ. ಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಂಗಭೂಮಿ ಏಳಿಗೆಗೆ ಶ್ರಮಿಸಬೇಕು ಎಂದರು.

    ರಂಗಸಮಾಜದ ಸದಸ್ಯ ಹಿಪ್ಪರಗಿ ಸಿದ್ಧರಾಮ, ಡಾ. ಹೆಲನ್, ಇತರರು ಇದ್ದರು. ರಂಗಾಯಣದ ಆಡಳಿತಾಧಿಕಾರಿ ಮಂಜುಳಾ ಯಲಿಗಾರ ಸ್ವಾಗತಿಸಿದರು. ಕೃಷ್ಣಮೂರ್ತಿ ಗಾಂವಕರ ಕಾರ್ಯಕ್ರಮ ನಿರೂಪಿಸಿದರು. ನಂತರ ಕಲಾವಿದೆ ಸುನಂದಾ ನಿಂಬನಗೌಡರ ಹಾಗೂ ತಂಡದಿಂದ ಬಿ.ವಿ. ಕಾರಂತರ ರಂಗಸಂಗೀತ ಪ್ರಸ್ತುತಪಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts