More

    ಕಾಯಂ ಸೇತುವೆ ಕಾಮಗಾರಿ ಪ್ರಾರಂಭಿಸಿ

    ಕಾರವಾರ: ಅಂಕೋಲಾ ತಾಲೂಕಿನ ರಾಮನಗಳಿ-ಕಲ್ಲೇಶ್ವರ ಕಾಯಂ ಸೇತುವೆ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

    ಆಗಸ್ಟ್​ನಲ್ಲಿ ಬಂದ ಪ್ರವಾಹಕ್ಕೆ ಇಲ್ಲಿನ ತೂಗು ಸೇತುವೆ ಕಿತ್ತು ಹೋಗಿತ್ತು. ಸದ್ಯ ಗಂಗಾವಳಿ ನದಿ ದಾಟಲು ಗ್ರಾಪಂ ವತಿಯಿಂದ ದೋಣಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ 300 ಕ್ಕೂ ಅಧಿಕ ಜನರು ಈ ದೋಣಿಯಲ್ಲಿ ಊರು ಸೇರಬೇಕಾದ ಪರಿಸ್ಥಿತಿ ಉಂಟಾಗಿದೆ.

    ಸರ್ಕಾರ ಗ್ರಾಮಕ್ಕೆ ಕಾಯಂ ಸೇತುವೆ ಮಂಜೂರು ಮಾಡಿದ್ದು, ಸಂತಸದ ವಿಷಯ. ಆದಷ್ಟು ಶೀಘ್ರ ಕಾಮಗಾರಿ ಆರಂಭಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಈ ಭಾಗಕ್ಕೆ ಗುಳ್ಳಾಪುರ ಭಾಗದಿಂದ ರಸ್ತೆ ಇದ್ದರೂ ಅದು ಸಂಪೂರ್ಣ ಹಾಳಾಗಿ ಹೋಗಿದೆ. ಕೂಗಳತೆ ದೂರಲ್ಲೇ ರಾಷ್ಟ್ರೀ ಹೆದ್ದಾರಿ 63 ಕಂಡರೂ ಅದನ್ನು ತಲುಪಲು ಸುಮಾರು 18 ಕಿಮೀ ಸುತ್ತುವರಿದು ಕಚ್ಚಾ ರಸ್ತೆಯಲ್ಲಿ ಬರಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ.

    ಹೆಗ್ಗಾರ ಹೈಸ್ಕೂಲ್​ಗೆ ರಾಮನಗುಳಿ ಕಡೆಯಿಂದ ತೆರಳುವ ವಿದ್ಯಾರ್ಥಿಗಳು, ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಹತ್ತಾರು ಹಳ್ಳಿಗಳಿಂದ ಯಲ್ಲಾಪುರ, ಅಂಕೋಲಾ ಕಾಲೇಜ್​ಗೆ ತೆರಳು ವಿದ್ಯಾರ್ಥಿಗಳು ಸೇರಿ 50 ಕ್ಕೂ ಹೆಚ್ಚು ಜನರಿದ್ದಾರೆ. ಅಲ್ಲದೆ, ಹಲವರು ದೈನಂದಿನ ವ್ಯವಹಾರಗಳಿಗೆ ಹಾಗೂ ಕಚೇರಿ ಕಾರ್ಯಗಳಿಗೆ ಜನ ತೆರಳುತ್ತಾರೆ. ದಿನಕ್ಕೆ 50 ಕ್ಕೂ ಹೆಚ್ಚು ಬಾರಿ ದೋಣಿ ಓಡಾಡಿಸಬೇಕಿದೆ.

    17 ಕೋಟಿ ಮಂಜೂರು: ರಾಮನಗುಳಿ- ಕಲ್ಲೇಶ್ವರ ಕಾಯಂ ಸೇತುವೆಗಾಗಿ 17 ಕೋಟಿ ರೂ. ಯೋಜಿಸಲಾಗಿದೆ. ಅದರಲ್ಲಿ 3 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಶಾಸಕರು ಪಿಡಬ್ಲ್ಯುಡಿಗೆ ಹಸ್ತಾಂತರಿಸಿದ್ದಾರೆ. ಇನ್ನು 14 ಕೋಟಿ ರೂ.ಗೆ ತಾತ್ವಿಕ ಅನುಮೋದನೆ ಸಿಕ್ಕಿದೆ. ಹಣ ಬಿಡುಗಡೆ ಸಂಬಂಧ ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ. ಡೋಂಗ್ರಿ-ಸುಂಕಸಾಳ ತೂಗು ಸೇತುವೆಗೆ 1 ಕೋಟಿ ರೂ.ಗಳನ್ನು ವಿಶೇ ಪರಿಹಾರ ನಿಧಿಯಿಂದ ವಿತರಿಸಲಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಅವರ ಕಚೇರಿ ಮಾಹಿತಿ ನೀಡಿದೆ.

    ಶೇಡ್​ನಲ್ಲಿ, ಪೊಲೀಸ್ ಠಾಣೆಯಲ್ಲಿ ವಾಸ: ಆಗಸ್ಟ್ ತಿಂಗಳಲ್ಲಿ ಗಂಗಾವಳಿ ನದಿಗೆ ಪ್ರವಾಹ ಬಂದಿದ್ದರಿಂದ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಹಲವು ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಅವರಲ್ಲಿ ಇನ್ನೂ ಹಲವರು ತಾತ್ಕಾಲಿಕ ಶೆಡ್​ಗಳಲ್ಲಿ ವಾಸ ಮಾಡುತ್ತಿದ್ದಾರೆ. ಚಂದ್ರಹಾಸ ನಾಗಪ್ಪ ಹರಿಕಂತ್ರ ಮನೆ ಸಂಪೂರ್ಣ ಬಿದ್ದು ಹೋಗಿದ್ದು, ಅವರ ಕುಟುಂಬ ತಾತ್ಕಾಲಿಕ ಶೆಡ್ ಕಟ್ಟಿಕೊಂಡು ಜೀವಿಸುತ್ತಿದೆ. ಸದ್ಯ ಗಂಗಾವಳಿ ನದಿಯಲ್ಲಿ ದೋಣಿ ನಡೆಸುತ್ತಿರುವ ಶಾಂತಾರಾಮ ಹರಿಕಂತ್ರ ಕುಟುಂಬ ಸಮೀಪದ ತಾತ್ಕಾಲಿಕ ಪೊಲೀಸ್ ಠಾಣೆಯಲ್ಲಿ ಜೀವನ ನಡೆಸುತ್ತಿದೆ. ಎಲ್ಲರಿಗೂ ಸರ್ಕಾರ 1 ಲಕ್ಷ ರೂ.ಗಳನ್ನು ನೀಡಿದೆ. ಸದ್ಯ ನೆಲಘಟ್ಟು ನಿರ್ಮಾಣ ಕಾರ್ಯವನ್ನೂ ಎಲ್ಲರೂ ಪ್ರಾರಂಭಿಸಿದ್ದಾರೆ. ಮಳೆಗಾಲವಾಗುವುದರೊಳಗೆ ಹೊಸ ಮನೆ ನಿರ್ವಣದ ಯೋಜನೆ ಹೊಂದಿದ್ದಾರೆ.

    ತೂಗು ಸೇತುವೆ ಇದ್ದಾಗ ಪ್ರತಿ ದಿನ ಉದ್ಯೋಗಕ್ಕೆ ತೆರಳುವುದು ಸುಲಭವಾಗಿತ್ತು. ಈಗ ದೋಣಿ ದಾಟಬೇಕಿದೆ. ಇನ್ನು ಮಳೆಗಾಲ ಬಂದಲ್ಲಿ ದೋಣಿ ಹಾಕುವುದೂ ಕಷ್ಟವಾಗಿ ನಮ್ಮ ಊರು ದ್ವೀಪವಾದೀತು ಎಂಬ ಆತಂಕವಿದೆ. ಇದರಿಂದ ಶೀಘ್ರ ಸೇತುವೆ ಕಾಮಗಾರಿ ಪ್ರಾರಂಭಿಸಬೇಕು. ಗೀತಾ ಸ್ಥಳೀಯ ಉದ್ಯೋಗಿ

    ರಾಮನಗುಳಿ ಸೇತುವೆ ನಿರ್ವಣಕ್ಕೆ ಅನುಮೋದನೆ ದೊರೆತಿದ್ದು, ಆರ್ಥಿಕ ಮಂಜೂರಾತಿ ಪಡೆದು ಟೆಂಡರ್ ಕರೆಯಬೇಕಿದೆ. ಶೀಘ್ರ ಕಾರ್ಯನಿರ್ವಹಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗುವುದು. ರೂಪಾಲಿ ನಾಯ್ಕ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts