More

    ಕಾಯಂ ಪೀಠ ಕಾರ್ಯಾರಂಭಕ್ಕಿಲ್ಲ ಯೋಗ!

    ಜಗದೀಶ ಹೊಂಬಳಿ ಬೆಳಗಾವಿ: ಜಿಲ್ಲೆಗೆ ಮಂಜೂರಾಗಿರುವ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಕಾಯಂ ಪೀಠ ಕಾರ್ಯಾರಂಭಕ್ಕೆ ಯೋಗವೇ ಕೂಡಿ ಬರುತ್ತಿಲ್ಲ.
    ಬೆಳಗಾವಿ ಜಿಲ್ಲೆಯೊಂದರಿಂದಲೇ ಸುಮಾರು 4 ಸಾವಿರ ಪ್ರಕರಣಗಳು ಬೆಂಗಳೂರಿನಲ್ಲಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯಕ್ಕೆ ಮೇಲ್ಮನವಿ ಹೋಗಿವೆ. ಉತ್ತರ ಕರ್ನಾಟಕದಿಂದ 6 ಸಾವಿರ ಪ್ರಕರಣಗಳು ಬೆಂಗಳೂರಿಗೆ ಅಫೀಲ್ ಹೋಗಿವೆ. ಬೆಳಗಾವಿಯಲ್ಲೇ ಕಾಯಂ ಪೀಠ ಸ್ಥಾಪನೆಯಾದರೆ ಈ ಗ್ರಾಹಕರು ಬೆಂಗಳೂರಿಗೆ ಅಲೆಯುವುದು ತಪ್ಪುತ್ತದೆ ಎಂಬ ಉದ್ದೇಶದಿಂದ ಜಿಲ್ಲಾ ಗ್ರಾಹಕರ ಸಂಘದಿಂದ ಸಾವಿರ ಪತ್ರ ಚಳವಳಿ ಮಾಡಿದ ಬಳಿಕ ಆಯೋಗದ ಸಂಚಾರಿ ಕಾಯಂ ಪೀಠ ಬೆಳಗಾವಿಗೆ ಮಂಜೂರಾಗಿದೆ. ಈ ಪೀಠವನ್ನು 2019ರಲ್ಲೇ ಸ್ಥಾಪಿಸುವಂತೆ ಆಯೋಗದ ಅಧ್ಯಕ್ಷ ಶಿಫಾರಸು ಮಾಡಿದರೂ ಪೀಠ ಮಂಜೂರಾಗಿರುವುದು 2022ರ ಜುಲೈ ತಿಂಗಳಲ್ಲಿ. ಆದರೆ, ಈವರೆಗೂ ಪೀಠ ಕಾರ್ಯಾರಂಭಕ್ಕೆ ಹಣ ಮಂಜೂರು ಮಾಡದ ಕಾರಣ ಪೀಠ ಕಾರ್ಯಾರಂಭ ಮಾಡಿಲ್ಲ. ಪೀಠಕ್ಕೆ ಕಟ್ಟಡ ನಿರ್ಮಾಣವಾಗಿಲ್ಲ. ನ್ಯಾಯಾಧೀಶರು, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಸ್ಟೆನೋಗ್ರಾಫರ್, ಡಿ ದರ್ಜೆ ನೌಕರರ ನೇಮಕಾತಿಯಾಗಿಲ್ಲ. ನಗರಕ್ಕೆ ಸಚಿವರು ಬರುತ್ತಾರೆಂದರೆ ರಾತ್ರೋರಾತ್ರಿ ಕೋಟ್ಯಂತರ ರೂ. ವ್ಯಯಿಸಿ ರಸ್ತೆ, ಸುಧಾರಣೆ, ವೇದಿಕೆ ಅಲಂಕಾರ ಮಾಡುವ ಜನಪ್ರತಿನಿಧಿಗಳು ಸಾವಿರಾರು ಜನರಿಗೆ ಅನುಕೂಲವಾಗುವ ಪೀಠ ಸ್ಥಾಪಿಸುವುದಕ್ಕೆ ಬೇಕಾದ ಹಣ ಬಿಡುಗಡೆ ಮಾಡಿಸುತ್ತಿಲ್ಲ ಎಂದು ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸಿದ್ದಾರೆ.

    12 ಜಿಲ್ಲೆಗಳಿಗೆ ಅನುಕೂಲ: ಉತ್ತರ ಕರ್ನಾಟಕ ಭಾಗದ ಗ್ರಾಹಕರಿಗೆ ಬೆಂಗಳೂರು ದೂರವಾಗುವುದರಿಂದ ಮೇಲ್ಮನವಿ ಸಲ್ಲಿಸುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಬಹಳಷ್ಟು ಪ್ರಕರಣಗಳಲ್ಲಿ ಗ್ರಾಹಕರು ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ಬೆಳಗಾವಿ ಕಾಯಂ ಪೀಠ ಸ್ಥಾಪನೆ ಆಗುವುದರಿಂದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಗ್ರಾಹಕರಿಗೆ ಅನುಕೂಲವಾಗಲಿದೆ.

    ಆಸಕ್ತಿ ವಹಿಸುತ್ತಿಲ್ಲ: ಜನಪ್ರತಿನಿಧಿಗಳ ನಿರ್ಲಕ್ಷೃ, ಇಚ್ಛಾಶಕ್ತಿ ಕೊರತೆಯಿಂದ ಕಾಯಂ ಪೀಠ ಕಾರ್ಯಾರಂಭಕ್ಕೆ ವಿಳಂಬವಾಗುತ್ತಿದೆ. ರಾಜ್ಯ ಗ್ರಾಹಕರ ಆಯೋಗದ ಅಧ್ಯಕ್ಷರು ಆಯೋಗದ ಕಾಯಂ ಪೀಠ ಸ್ಥಾಪನೆಗೆ ಶಿಫಾರಸು ಮಾಡಿದರೆ, ಸರ್ಕಾರವು ಪೀಠ ಸ್ಥಾಪಿಸಿ ಅದಕ್ಕೆ ಬೇಕಾದ ಬಜೆಟ್ ನೀಡಿ ಮೂಲ ಸೌಲಭ್ಯ ಕಲ್ಪಿಸಬೇಕೆಂಬ ನಿಯಮವಿದೆ. ಆದರೆ, ಬೆಳಗಾವಿಗೆ ಮಂಜೂರಾದ ಆಯೋಗದ ಕಾಯಂ ಪೀಠಕ್ಕೆ ಹಣಕಾಸಿನ ಮಂಜೂರಾತಿ ಸಿಕ್ಕಿಲ್ಲ. ಅನುದಾನ ಬಿಡುಗಡೆ ಮಾಡುವಂತೆ ಇಲ್ಲಿನ ವಕೀಲರು ಒತ್ತಾಯ ಮಾಡುತ್ತಿದ್ದಾರಾದರೂ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ.

    ಈ ಅಧಿವೇಶನದಲ್ಲಿ ನಿರೀಕ್ಷೆ: ಜೂನ್ 17ರಂದು ಕಾಯಂ ಪೀಠಕ್ಕೆ ಸಿಬ್ಬಂದಿ ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ. ಆದರೆ, ಈವರೆಗೂ ಸಿಬ್ಬಂದಿ ನೇಮಕವಾಗಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುತ್ತೇವೆ ಎಂದು ಬರೀ ಬಾಯಿ ಮಾತಿನಲ್ಲಿ ಹೇಳುವುದಾಯಿತು, ಅದು ಕಾರ್ಯರೂಪಕ್ಕೆ ಬರುವುದು ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಉತ್ತರ ಕರ್ನಾಟಕ ಸಮಸ್ಯೆಗಳನ್ನು ಚರ್ಚಿಸುವುದಾಗಿ ಸಿಎಂ ಆದಿಯಾಗಿ ಎಲ್ಲರೂ ಹೇಳುತ್ತಿದ್ದಾರೆ. ಈ ವೇಳೆಯಲ್ಲಾದರೂ ಪೀಠ ಕಾರ್ಯಾರಂಭಿಸುವುದಕ್ಕೆ ಘೋಷಣೆ ಮಾಡುತ್ತಾರೆಯೇ ಎಂದು ಜನರು ಎದುರು ನೋಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts