More

    ಕಾಮಗಾರಿ ಪರಿಶೀಲಿಸಿದ ಮೇಯರ್ ಶಿವಕುಮಾರ್

    ಮೈಸೂರು: ಮುಂಗಾರು ಆರಂಭಗೊಳ್ಳುತ್ತಿರುವುದರಿಂದ ನಗರದ ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯ ಆರಂಭಗೊಂಡಿದ್ದು, ಬಿಎಂಶ್ರೀ ನಗರ, ಮೇಟಗಳ್ಳಿ, ಏಕಲವ್ಯನಗರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಡೆಯುತ್ತಿರುವ ಚರಂಡಿ ಹೂಳು ತೆಗೆಯುವ ಕಾಮಗಾರಿಯನ್ನು ಮೇಯರ್ ಶಿವಕುಮಾರ್ ಭಾನುವಾರ ಪರಿಶೀಲಿಸಿದರು.
    ನಗರದ 65 ವಾರ್ಡ್‌ಗಳಲ್ಲಿಯೂ ತಲಾ ಒಂದು ಲಕ್ಷ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿಗಳ ದುರಸ್ತಿ, ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುವುದನ್ನು ತಡೆಯುವುದು, ಚರಂಡಿಗಳಲ್ಲಿ ತುಂಬಿರುವ ಹೂಳು, ಬಂಡ್‌ಗಳನ್ನು ತೆಗೆಯಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿದ್ದರೆ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಬಳಿಕ ಸುದ್ದಿಗಾರರಿಗೆ ತಿಳಿಸಿದರು.
    ಮುಂದಿನ ದಿನಗಳಲ್ಲಿ ಜೋರಾಗಿ ಮಳೆ ಬಂದಾಗ ಬಡಾವಣೆಗಳು ಮತ್ತು ತಗ್ಗುಪ್ರದೇಶಗಳಲ್ಲಿ ನೀರು ನಿಲ್ಲದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಮೇಟಗಳ್ಳಿ, ಏಕಲವ್ಯನಗರದಿಂದ ಹಳೇ ಕೆಸರೆಗೆ ಸೇರುವ ರಾಜ ಕಾಲುವೆಯಲ್ಲಿ ತುಂಬಿರುವ ಹೂಳು ಹೊರ ಹಾಕಿ ಸಾಗಿಸಲಾಗಿದೆ ಎಂದರು.
    ನಗರದಲ್ಲಿ ಮೂರು ಅಭಯ ತಂಡಗಳಿದ್ದು, ಖಾಸಗಿಯಾಗಿ ವಾಹನಗಳು, ಕಾರ್ಮಿಕರನ್ನು ನೇಮಿಸಿಕೊಂಡು ಅಪಾಯಕಾರಿ ಆಗುವ ರೆಂಬೆ, ಕೊಂಬೆಗಳನ್ನು ತೆರವುಗೊಳಿಸುವಂತೆ ತಿಳಿಸಲಾಗಿದೆ. ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಅರಣ್ಯ ಇಲಾಖೆ ಅನುಮತಿ ನಿರೀಕ್ಷೆ ಇಟ್ಟುಕೊಂಡು ಬುಡಸಮೇತ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
    ಮುಂದಿನ ದಿನಗಳಲ್ಲಿ ರೆಂಬೆ ಬಿದ್ದು ಅನಾಹುತವಾಗಿದೆ ಎನ್ನುವ ದೂರು ಬರದಂತೆ ಗಮನಸಬೇಕು. ಅಭಯ ತಂಡದವರು ಪ್ರತಿಯೊಂದು ಬಡಾವಣೆಗಳಲ್ಲಿರುವ ಮರಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
    ಉಪ ಮೇಯರ್ ಡಾ.ಎಂ.ರೂಪಾ, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಅಧೀಕ್ಷಕ ಇಂಜಿನಿಯರ್ ಎಸ್.ಮಹೇಶ್, ಕಾರ್ಯಪಾಲಕ ಇಂಜಿನಿಯರ್ ರಂಜಿತ್‌ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts