More

    ಕಾಮಗಾರಿಗೆ ಹಳ್ಳೂರ ಗ್ರಾಮಸ್ಥರ ವಿರೋಧ

    ರಟ್ಟಿಹಳ್ಳ: ತಾಲೂಕಿನ ಹಳ್ಳೂರ ಗ್ರಾಮ ಬಳಿಯ ತುಂಗಭದ್ರಾ ನದಿ ದಡದಲ್ಲಿ ಬೃಹತ್ ನೀರಾವರಿ ಇಲಾಖೆ ಕೈಗೊಂಡಿರುವ ಕಾಮಗಾರಿಗೆ ಹಳ್ಳೂರ ಗ್ರಾಮಸ್ಥರು ಬುಧವಾರ ವಿರೋಧ ವ್ಯಕ್ತಪಡಿಸಿದರು. ಕಾಮಗಾರಿ ಕೈಗೊಳ್ಳಲಿರುವ ಸ್ಥಳವು ಐತಿಹಾಸಿಕ ಮಹತ್ವ ಹೊಂದಿದೆ. ಹೀಗಾಗಿ ಬೇರೆಡೆ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಹಿರೇಕೆರೂರ ಮತ್ತು ಶಿಕಾರಿಪುರ ತಾಲೂಕಿನ 200 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಹಳ್ಳೂರ ಬಳಿ ವಿದ್ಯುತ್ ಘಟಕ, ಜಾಕ್​ವೆಲ್, ಸಿಬ್ಬಂದಿಯ ವಸತಿ ಗೃಹ ನಿರ್ವಿುಸಲಾಗುತ್ತಿದೆ. ಹಳ್ಳೂರ ಗ್ರಾಮದ ನದಿಯ ದಡದಲ್ಲಿರುವ ಸರ್ವೆ ನಂ.7ರ 17.12 ಎಕರೆ ಬೀಳು ಭೂಮಿಯಲ್ಲಿ ಕಳೆದ 5-6 ದಿನಗಳಿಂದ ಕಾಮಗಾರಿಯೂ ಆರಂಭಗೊಂಡಿದೆ. ಆದರೆ, ಕಾಮಗಾರಿ ಸ್ಥಳದಲ್ಲಿನ ಭದ್ರಕಾಳಿ, ಆಂಜನೇಯಸ್ವಾಮಿ, ಚೌಡೇಶ್ವರಿ ದೇವಾಲಯಗಳು ಮಣ್ಣಿನಲ್ಲಿ ಮುಚ್ಚು ಹೋಗುತ್ತಿವೆ. ಶಿಲಾಶಾಸನಗಳು, ಮಡಿಕೆ, ಕುಡಿಕೆ, ಸೈನಿಕರಿಗಾಗಿ ಇದ್ದ 7 ಹುಡೇವು, ವಿಗ್ರಹಗಳು, ನವಶಿಲಾಯುಗದ ಕುರಹುಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ನದಿಯ ದಡದಲ್ಲಿರುವ ಕೋಟೆ ಗಜನಿ ಬಾವಿಗೆ ಇರುವ 3 ರಹಸ್ಯ ಮಾರ್ಗಗಳಿಗೆ ಧಕ್ಕೆಯಾಗಿದೆ ಎಂಬುದು ಗ್ರಾಮಸ್ಥರ ಆರೋಪ.

    2019-20ನೇ ಸಾಲಿನ 6ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿ 50-51ನೇ ಪುಟದಲ್ಲಿ ಹಳ್ಳೂರಿನ ಇತಿಹಾಸ ಮತ್ತು ನವಶೀಲಾಯುಗದ ಕಾಲದಲ್ಲಿ ಹಳ್ಳೂರ ಜನವಸತಿ ಕೇಂದ್ರವಾಗಿತ್ತು ಎಂಬುದನ್ನು ಪಠ್ಯಕ್ರಮದಲ್ಲಿ ಕಾಣಬಹುದು. ಅಲ್ಲದೆ, 1971-72ರಲ್ಲಿ ಗ್ರಾಮಕ್ಕೆ ಭೂಗರ್ಭ ಶಾಸ್ತಜ್ಞ ನಾರಾಯಣಸ್ವಾಮಿ ಭೇಟಿ ನೀಡಿದ್ದು, ಇಲ್ಲಿನ ಕೋಟೆಯ ಮಣ್ಣನ್ನು ಯಾರೂ ಉಪಯೋಗಿಸಬಾರದು ಮತ್ತು ಇಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ಭಗ್ನಗೊಳಿಸಬಾರದು ಎಂದು ತಿಳಿಸಿದ್ದರು. ಪ್ರಸ್ತುತ ಮೈಸೂರಿನ ಅರಮನೆಯ ಪ್ರಾಚೀನ ವಸ್ತು ಸಂಗ್ರಹಾಲಯದಲ್ಲಿ ಈ ಸ್ಥಳದ ಕೆಲ ಕುರುಹುಗಳನ್ನು ಈಗಲೂ ಕಾಣಬಹುದು ಎಂದು ಗ್ರಾಮಸ್ಥರು ವಿವರಿಸಿದರು. ಕೂಡಲೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಪುರಾತತ್ತ್ವಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಸ್ಥಳವನ್ನು ಸಂಶೋಧನೆ ಮಾಡಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts