More

    ಕಾಡುಮೃಗಗಳ ಹೊಟ್ಟೆ ತುಂಬಿಸಲು ಹೆಣಗಾಟ!

    ಗದಗ: ಬಿಂಕದಕಟ್ಟಿ ಕಿರು ಮೃಗಾಲಯವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್​ಡೌನ್ ಘೋಷಿಸಿದ್ದರಿಂದ ಜನರ ಭೇಟಿ ಇಲ್ಲದೆ ಆದಾಯದಲ್ಲಿ ನಷ್ಟವುಂಟಾಗಿದೆ. ಹೀಗಾಗಿ, ಮೃಗಾಲಯದಲ್ಲಿರುವ ಪ್ರಾಣಿಗಳ ಹೊಟ್ಟೆ ತುಂಬಿಸಲು ಅಧಿಕಾರಿಗಳು ಹೆಣಗಾಡುವಂತಾಗಿದೆ.

    ಬಿಂಕದಕಟ್ಟಿ ಕಿರು ಪ್ರಾಣಿ ಸಂಗ್ರಹಾಲಯದಲ್ಲಿ 2 ಹುಲಿ, 6 ಚಿರತೆ, 2 ಸಿಂಹ, 7 ಏಮು, ಪುನುಗು ಬೆಕ್ಕು, ಕಾಡುಬೆಕ್ಕು, 2 ಕರಡಿ, 7 ಮೊಸಳೆ, 3 ಹೆಬ್ಬಾವು, 14 ನೀಲಗಾಯಿ, 12 ಕಡವೆ (ಸಾಂಬಾರ), 44 ಕೃಷ್ಣಮೃಗ, 33 ಜಿಂಕೆ,

    4 ನರಿ, 2 ಗೋಲ್ಡನ್ ಫಿಸೆಂಟ್ (ಬೇಟೆ ಹಕ್ಕಿ), 8 ಜಂಗಲ್ ಫೌಳ್ (ಕಾಡು ಕೋಳಿ), ರಿಂಗ್ ನೆಕ್ ಫಿಸೆಂಟ್ ಒಂದು, 7 ಸಿಲ್ವರ್ ಫಿಸೆಂಟ್, ಕತ್ತೆಕಿರುಬ, ಮೊಸಳೆ, ಆಸ್ಟ್ರಿಚ್ ಸೇರಿದಂತೆ ದೇಶ ವಿದೇಶಗಳ 35ಕ್ಕೂ ಹೆಚ್ಚು ಪ್ರಭೇದದ 350 ಕಾಡುಪ್ರಾಣಿ ಮತ್ತು ಪಕ್ಷಿಗಳಿವೆ.

    72 ಲಕ್ಷ ರೂ. ಅನುದಾನ ಅಗತ್ಯ: ಮೃಗಾಲಯದಲ್ಲಿರುವ ಪ್ರಾಣಿ, ಪಕ್ಷಿಗಳ ಆಹಾರ ಮತ್ತು ನಿರ್ವಹಣೆ ಹಾಗೂ ಅಧಿಕಾರಿ ಸಿಬ್ಬಂದಿ ಸಂಬಳ ಸೇರಿ ಒಟ್ಟು ಒಂದು ವರ್ಷಕ್ಕೆ 1.90 ಕೋಟಿ ರೂ. ಅನುದಾನ ಬೇಕಾಗುತ್ತದೆ. ಇದನ್ನು ಮೃಗಾಲಯಕ್ಕೆ ಬರುವ ಜನರು ಖರೀದಿಸುವ ಟಿಕೆಟ್​ನಿಂದ (ವಯಸ್ಕರಿಗೆ 40 ರೂ., ಚಿಕ್ಕವರಿಗೆ 20 ರೂ.) ಮತ್ತು ರಾಜ್ಯ ಸರ್ಕಾರ ಕರ್ನಾಟಕ ಮೃಗಾಲಯ ಪ್ರಾಧಿಕಾರ ನೀಡುವ ಅನುದಾನದಿಂದ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಮೇ ತಿಂಗಳು ಸಂಪೂರ್ಣ ಲಾಕ್​ಡೌನ್ ವಿಧಿಸಿದ್ದರಿಂದ ಮೃಗಾಲಯಕ್ಕೆ ಜನರ ಭೇಟಿ ನಿರ್ಬಂಧಿಸಲಾಯಿತು. ಜತೆಗೆ ಸರ್ಕಾರದ ಅನುದಾನ ಬಿಡುಗಡೆಗೂ ವಿಳಂಬವಾಗಿದೆ. ಇದರಿಂದ ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಆಹಾರ ಒದಗಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ.

    ಮೃಗಾಲಯದಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳ ಆಹಾರಕ್ಕಾಗಿ ವರ್ಷಕ್ಕೆ 72 ಲಕ್ಷ ರೂ.ಅಗತ್ಯವಿದೆ. ಹುಲಿ, ಸಿಂಹ, ಚಿರತೆ ಮತ್ತಿತರ ಮಾಂಸಾಹಾರಿ ಪ್ರಾಣಿಗಳಿಗೆ ಒಟ್ಟು ದಿನಕ್ಕೆ 84 ಕೆಜಿ ಮಾಂಸ ಬೇಕಾಗುತ್ತದೆ. ಸಿಂಹ, ಹುಲಿ, ಚಿರತೆಗಳಿಗೆ ದಿನಕ್ಕೆ 9.5 ಕೆಜಿ ಮಾಂಸ ಬೇಕು. ಮಂಗಳವಾರ ಮಾಂಸ ನೀಡುವುದಿಲ್ಲ. ಮಾಂಸ ಪೂರೈಕೆಗೆ ಪ್ರಾಧಿಕಾರದಿಂದ ಟೆಂಡರ್ ನೀಡಲಾಗಿರುತ್ತದೆ. ಟೆಂಡರ್ ಪಡೆದವರು ನಿಯಮಿತವಾಗಿ ಆಹಾರ ಪೂರೈಸುತ್ತಾರೆ. ಆದರೆ, ಅವರಿಗೆ ಹಣ ನೀಡುವುದು ಹೇಗೆ ಎಂಬ ಚಿಂತೆ ಶುರುವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

    ಬಿಂಕದಕಟ್ಟಿ ಮೃಗಾಲಯಕ್ಕೆ ಸಾರ್ವಜನಿಕರಿಂದ ಇಲ್ಲಿಯವರೆಗೆ 4 ಲಕ್ಷ ರೂ. ಹಣಕಾಸಿನ ನೆರವು ದೊರೆಯುತ್ತಿತ್ತು. ಇತ್ತೀಚೆಗೆ ಚಿತ್ರ ನಟ ದರ್ಶನ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರಿಂದ ಸ್ಥಳೀಯ ಮೃಗಾಲಯಕ್ಕೆ 4.5 ಲಕ್ಷ ರೂ. ಹೆಚ್ಚುವರಿ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ. ಕನಿಷ್ಠ 1000 ರೂ.ದಿಂದ ಗರಿಷ್ಠ 1 ಲಕ್ಷ ರೂ.ವರೆಗೆ ಜನರು ದೇಣಿಗೆ ನೀಡಿದ್ದಾರೆ. ಇದರಲ್ಲಿ ಸಾವಿರ ರೂ. ದೇಣಿಗೆ ನೀಡಿದವರೇ ಹೆಚ್ಚಿದ್ದಾರೆ.

    ಮೃಗಾಲಯದಲ್ಲಿ ಹುಲಿ, ಸಿಂಹ, ಚಿರತೆ ಮತ್ತಿತರ ಪ್ರಾಣಿಗಳು ಇರುವುದರಿಂದ ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ, ಮೃಗಾಲಯಕ್ಕೆ ಆದಾಯವೂ ವೃದ್ಧಿಸಿತ್ತು. ಪ್ರತಿನಿತ್ಯ 120 ರಿಂದ 150, ವಾರಾಂತ್ಯದ ದಿನಗಳಲ್ಲಿ 250 ರಿಂದ 400 ಜನರು ಭೇಟಿ ನೀಡುತ್ತಾರೆ.

    ಹಬ್ಬಹರಿದಿನಗಳು, ರಾಷ್ಟ್ರೀಯ ಹಬ್ಬಗಳಂದು ಪ್ರವಾಸಿಗರ ಸಂಖ್ಯೆ ಸಾವಿರ ಗಡಿ ದಾಟುತ್ತದೆ. ತಿಂಗಳಿಗೆ 2ರಿಂದ 2.5 ಲಕ್ಷ ರೂ. ಆದಾಯ ಬರುತ್ತದೆ. ಈ ಹಣದಲ್ಲಿ ಮೃಗಾಲಯ ನಿರ್ವಹಣೆ, ಪ್ರಾಣಿಗಳಿಗೆ ಆಹಾರ ಮತ್ತು ಇನ್ನಿತರ ಖರ್ಚುವೆಚ್ಚಗಳನ್ನು ನಿಭಾಯಿಸಲಾಗುತ್ತದೆ. ಇದೀಗ ಕರೊನಾ ಸೋಂಕಿನ ನಿಯಂತ್ರಣಕ್ಕಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಲಾಕ್​ಡೌನ್​ನಿಂದ ಮೃಗಾಲಯ ಬಂದ್ ಆಗಿದ್ದು, ಖರ್ಚು, ವೆಚ್ಚ, ನಿರ್ವಹಣೆ ಮಾಡಲು ಹರಸಾಹಸ ಪಡಬೇಕಾಗಿದೆ.

    ಹೆಚ್ಚಲಿ ಪ್ರಾಣಿ-ಪಕ್ಷಿ ದತ್ತು

    ಮೃಗಾಲಯದ ಪ್ರಾಣಿ-ಪಕ್ಷಿಗಳ ಆಹಾರಕ್ಕಾಗಿ ಹಣಕಾಸಿನ ನೆರವು ನೀಡಿ ಔದಾರ್ಯತೆ ಮರೆಯುವ ಕಾಲ ಎದುರಾಗಿದೆ. ಜನಪ್ರತಿನಿಧಿಗಳು ಪ್ರಾಣಿಪಕ್ಷಿಗಳ ಆಹಾರಕ್ಕಾಗಿ ಆರ್ಥಿಕ ನೆರವು ನೀಡಲು ಮುಂದಾಗಬೇಕಿದೆ. ಸಂಘ ಸಂಸ್ಥೆಗಳು, ಉದ್ಯಮಿಗಳು, ಜನಸಾಮಾನ್ಯರೂ ಪ್ರಾಣಿಗಳ ಹೊಟ್ಟೆ ತುಂಬಿಸಲು ನೆರವು ನೀಡಬಹುದು. ಹೆಚ್ಚಿನ ಮಾಹಿತಿಗೆ ಮೊ. 9481853814 ಕ್ಕೆ ಕರೆ ಮಾಡಬಹುದು.

    ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಮೃಗಾಲಯ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ. ಮೃಗಾಲಯ ನಿರ್ವಹಣೆ, ಪ್ರಾಣಿಗಳಿಗೆ ಆಹಾರ ಒದಗಿಸುವುದು ಮತ್ತಿತರ ಖರ್ಚರ್ು-ವೆಚ್ಚ ನಿಭಾಯಿಸುವುದು ಕಷ್ಟವಾಗಿದೆ. ಸಾರ್ವಜನಿಕರು ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರಬೇಕು.

    | ಚೈತ್ರಾ, ಕ್ಯೂರೇಟರ್ ಬಿಂಕದಕಟ್ಟಿ ಮೃಗಾಲಯ, ಗದಗ

    ಬ್ಯಾಂಕ್ ಅಕೌಂಟ್ ವಿವರ

    ಗದಗ ತಾಲೂಕಿನ ಬಿಂಕದಕಟ್ಟಿ ಮೃಗಾಲಯಕ್ಕೆ ಜನರು ಎನ್​ಇಎಫ್​ಟಿ, ಆರ್​ಟಿಜಿಎಸ್ ಮೂಲಕ ಹಣ ಸಂದಾಯ ಮಾಡಬಹುದಾಗಿದೆ. ಬ್ಯಾಂಕ್, ಅಕೌಂಟ್ ವಿವರ ಇಲ್ಲಿದೆ. ಅಕೌಂಟ್ ನಂಬರ್: 0511106019198

    ಐಎಫ್​ಎಸ್​ಸಿ ಕೋಡ್: ಸಿಎನ್​ಆರ್​ಬಿ 0000511

    ಖಾತೆದಾರರ ಹೆಸರು: ಮೆಂಬರ್ ಸೆಕ್ರೆಟರಿ ಜೂ

    ಅಥಾರಿಟಿ ಆಫ್ ಕರ್ನಾಟಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts