More

    ಕಾಡಂಚಿನಲ್ಲೊಂದು ಊರಿದ್ದರೂ ಹೆಸರಿಲ್ಲ

    ಬೂದಿಕೋಟೆ: ಈ ಊರಿಗೆ ಹೆಸರೇ ಇಲ್ಲ, ಕಾಡಂಚಿನಲ್ಲಿರುವ ಗ್ರಾಮದ ಜನತೆ ನಿತ್ಯವೂ ಕಾಡುಪ್ರಾಣಿಗಳ ಮಧ್ಯೆ ಬದುಕು ಸವೆಸಬೇಕಿದೆ. ಪಟ್ಟಣಕ್ಕೆ ಹೋಗಿ ಬರಬೇಕೆಂದರೆ ಕಲ್ಲು-ಮಣ್ಣಿನ ರಸ್ತೆಯಲ್ಲಿ 5 ಕಿಮೀ ನಡೆದೇ ಹೋಗಿ ಬಸ್ ಹತ್ತಬೇಕು. ಗ್ರಾಮದ ಸುತ್ತಲೂ ಹೊಳೆ ಇದ್ದು, ತುಂಬಿ ಹರಿದರೆ ಗ್ರಾಮಕ್ಕೆ ಸಂಪರ್ಕವೇ ಕಡಿತವಾಗುತ್ತದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಬದುಕುತ್ತಿದ್ದಾರೆ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಕದಿರಿನತ್ತ ಗ್ರಾಮದಿಂದ ಹೊರಹೋದ 25ಕ್ಕೂ ಹೆಚ್ಚು ಕುಟುಂಬಗಳು…

    ಹೌದು…40 ವರ್ಷಗಳ ಹಿಂದೆ ಕದಿರಿನತ್ತ ಗ್ರಾಮದಿಂದ ದೂರ ಹೋದಂತಹ ಕೆಲ ಕುಟುಂಬಗಳು 1.5 ಕಿಮೀ ದೂರದಲ್ಲಿ ತಮ್ಮ ಜಮೀನಿನ ಬಳಿ ಮನೆ ನಿರ್ಮಿಸಿಕೊಂಡು ಜೀವನ ಆರಂಭಿಸಿವೆ. ಪ್ರಸ್ತುತ ಆ ಪ್ರದೇಶ ಗ್ರಾಮವಾಗಿ ಮಾರ್ಪಟ್ಟಿದೆ. ಕಾಡಂಚಿನ ಗಡಿಭಾಗದಲ್ಲಿರುವುದರಿಂದ ಗ್ರಾಮಕ್ಕೆ ಮೂಲಸೌಕರ್ಯ ಸಿಕ್ಕಿಲ್ಲ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಪ್ರದೇಶದ ಜನರನ್ನು ಇಂದಿಗೂ ಕದಿರಿನತ್ತ ಗ್ರಾಮದ ವಾಸಿಗಳೆಂದೇ ಗುರುತಿಸಲಾಗುತ್ತಿದೆ. ಮರಾಠಿ ಹಾಗೂ ತಿಗಳ ಸಮುದಾಯಕ್ಕೆ ಸೇರಿದವರಾಗಿದ್ದು, ಮತದಾರರ ಪಟ್ಟಿ ಸಹ ಕದಿರಿನತ್ತದಲ್ಲಿಯೇ ಮುಂದುವರಿದಿದೆ.

    ಕಾಡಾನೆಗಳ ಉಪಟಳದಿಂದ ಬೆಳೆ ನಾಶ: ಗ್ರಾಮವು ಕಾಡಿಗೆ ಹೊಂದಿಕೊಂಡಿದ್ದು, ಇಲ್ಲಿನ ಜನ ನಿತ್ಯವೂ ಕಾಡು ಪ್ರಾಣಿಗಳ ಹಾಗೂ ಕಾಡಾನೆಗಳ ಮಧ್ಯೆ ಜೀವನ ಸಾಗಿಸುತ್ತಿದ್ದಾರೆ. ದಿನ ಬೆಳಗಾದರೆ ಕಾಡಾನೆಗಳು ಬೆಳೆ ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆ ಆನೆಗಳ ನಿಯಂತ್ರಣಕ್ಕೆ ಮುಂದಾಗದಿರುವುದು ಸಮಸ್ಯೆ ಹೆಚ್ಚಿಸಿದೆ. ಸರ್ಕಾರ ಕಾಡಾನೆಗಳ ನಿಯಂತ್ರಣಕ್ಕೆ ಅಳವಡಿಸಲು ಮುಂದಾಗಿರುವ ಸೋಲಾರ್ ಫೆನ್ಸಿಂಗ್ ಅರ್ಧಕ್ಕೆ ನಿಂತಿದ್ದು ಪೂರ್ಣಗೊಳಿಸಲು ಇಲಾಖೆ ಆಸಕ್ತಿ ವಹಿಸಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆರೋಪಿಸಿದ್ದಾರೆ.

    ರಸ್ತೆ ಇಲ್ಲದೆ ಪರದಾಟ: ಗ್ರಾಮದಲ್ಲಿನ ಜನರು ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆಗೆ ತೆರಳಲು ಸಮರ್ಪಕ ರಸ್ತೆ ಇಲ್ಲ. ಕಲ್ಲುಗಳಿಂದ ಕೂಡಿದ ಮಣ್ಣಿನ ರಸ್ತೆ ಮೂಲಕವೇ ಕಾಮಸಮುದ್ರ ಅಥವಾ ಬಂಗಾರಪೇಟೆಗೆ ತೆರಳಬೇಕು. ಸರಿಯಾದ ರಸ್ತೆ, ಬಸ್ ಸಂಪರ್ಕವಿಲ್ಲದೆ ಗ್ರಾಮದಿಂದ ಸುಮಾರು 5 ಕಿಮೀ ದೂರದ ಕಾಳಮ್ಮನಗುಡಿವರೆಗೂ ನಡೆದೇ ಹೋಗಿ ಬಸ್ ಹತ್ತಬೇಕು.

    ಶಾಲೆಗೆ ಹೋಗಲು ಹೊಳೆ ದಾಟಬೇಕು: ಗ್ರಾಮದ ಸುತ್ತಲೂ ಹೊಳೆ ಇದ್ದು, ಮುಸ್ಟ್ರಹಳ್ಳಿ ಹಾಗೂ ದೋಣಿಮೊಡಗು ಕೆರೆಯಿಂದ ಹೊಳೆಯಲ್ಲಿ ನೀರು ಹರಿಯುತ್ತದೆ. ಮಕ್ಕಳು ನೀರಿನಲ್ಲೇ ನಡೆದುಕೊಂಡು ಹೋಗಿ ಕದಿರಿನತ್ತದಲ್ಲಿ ಅಂಗನವಾಡಿ ಮತ್ತು ಪ್ರಾಥಮಿಕ ವಿದ್ಯಾಭ್ಯಾಸ ಪಡೆಯಬೇಕು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬಂಗಾರಪೇಟೆಗೆ ಹೋಗಬೇಕು. ಹೊಳೆಯಲ್ಲಿ ನೀರು ರಭಸವಾಗಿ ಹರಿದರೆ ಶಾಲೆಗೆ ಮಕ್ಕಳು ಹಾಜರಾಗಲು ಸಾಧ್ಯವಿಲ್ಲ. ಕದಿರಿನತ್ತ ಹಾಗೂ ಇಲ್ಲಿನ ಕುಟುಂಬಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ.

    ವಿದ್ಯುತ್ ಕಣ್ಣಾಮುಚ್ಚಾಲೆ: ಕೊಳವೆಬಾವಿಗಳಲ್ಲಿ ನೀರಿದ್ದರೂ ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್ ಇರಲ್ಲ. ಯಾವಾಗ ಬರತ್ತೋ ಯಾವಾಗ ಹೋಗುತ್ತೋ ತಿಳಿಯದ ಜನರು ಹಗಲು-ರಾತ್ರಿ ಕಾದು ಬೆಳೆಗಳಿಗೆ ನೀರು ಹರಿಸಬೇಕಿದೆ. ಮನೆಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಿನಲ್ಲಿ ಕಾಲ ಕಳೆಯುವಂತಾಗಿದೆ.

    ನರಸಿಂಹಪುರದ ಪರಿಸ್ಥಿತಿಯೂ ಇದೇ: ಪಕ್ಕದಲ್ಲಿ ನರಸಿಂಹಪುರ ಎಂಬ ಗ್ರಾಮವಿದ್ದು, ಸುಮಾರು 15 ಕುಟುಂಬಗಳು ನೆಲೆಸಿವೆ. ಇಲ್ಲಿಯೂ ಇದೇ ಪರಿಸ್ಥಿತಿ. ಈ ಗ್ರಾಮದವರೂ ಕಲ್ಲು-ಮಣ್ಣಿನಿಂದ ಕೂಡಿದ ರಸ್ತೆಯಲ್ಲೇ ಓಡಾಡಬೇಕಾದ ಸ್ಥಿತಿ ಇದೆ. ಗ್ರಾಮಸ್ಥರೂ ಕಾಳಮ್ಮನಗುಡಿವರೆಗೂ ನಡೆದು ಹೋಗಿ ಮುಂದೆ ದೂರದ ಕಾಮಸಮುದ್ರ ಅಥವಾ ಬಂಗಾರಪೇಟೆಗೆ ಹೋಗಬೇಕು. ಎರಡೂ ಗ್ರಾಮಗಳಿಗೂ ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ಆಂಬುಲೆನ್ಸ್ ಸಹ ಬರಲು ಸಾಧ್ಯವಾಗಿಲ್ಲ.

    ಒಕ್ಕೊರಲ ಒತ್ತಾಯ: ಕಾಡಾನೆಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಜತೆಗೆ ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಲಿಸಬೇಕು. ಡಾಂಬರು ರಸ್ತೆ ಹಾಕಿಸಿ ಮನೆಗಳಿಗೆ 24 ಗಂಟೆ ವಿದ್ಯುತ್ ಪೂರೈಸಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಒತ್ತಾಯವಾಗಿದೆ.

    40 ವರ್ಷಗಳಿಂದ ಇಲ್ಲಿ ನೆಲೆಸಿದ್ದು, ಕದಿರಿನತ್ತ ಗ್ರಾಮದಿಂದ ನಲ್ಲಿ ನೀರು ಪೂರೈಸಿರುವುದು ಬಿಟ್ಟರೆ ಬೇರೆ ಅಭಿವೃದ್ಧಿ ಕಾಣಲಿಲ್ಲ. ಇತ್ತೀಚೆಗೆ ಸುರಿದ ಮಳೆಗೆ ಹೊಳೆಯಲ್ಲಿ ನೀರು ಹೆಚ್ಚಾಗಿ ಹಲವು ದಿನ ಇತರ ಗ್ರಾಮಗಳಿಗೆ ತೆರಳಲು ಸಂಪರ್ಕ ಕಡಿತಗೊಂಡಿತ್ತು. ಹಾಲನ್ನು ಡೇರಿಗೆ ಹಾಕಲು ಸಾಧ್ಯವಾಗದೆ ಚೆಲ್ಲಿದೆವು. ಇಂತಹ ಪರಿಸ್ಥಿತಿ ಮುಂದೆ ಆಗದಂತೆ ಕದಿರಿನತ್ತ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಿಸಬೇಕು.
    ನಾಗೋಜಿರಾವ್, ನಿವಾಸಿ

    ಕಾಡಾನೆಗಳ ಕಾಟ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಅಳವಡಿಸಲು ಮುಂದಾಗಿರುವ ಸೋಲಾರ್ ಫೆನ್ಸಿಂಗ್ ಪೂರ್ಣಗೊಳಿಸಬೇಕು. ಕಾಳಮ್ಮನ ಗುಡಿ ಕಡೆ ಹೋಗಲು ರಸ್ತೆ ಇಲ್ಲದ ಕಾರಣ ದಿನನಿತ್ಯ ಕಲ್ಲು ರಸ್ತೆಯಲ್ಲೇ ಸಂಚರಿಸಬೇಕಾಗಿದ್ದು, ಡಾಂಬರು ರಸ್ತೆ ನಿರ್ಮಿಸಬೇಕು. ಪಂಪ್‌ಸೆಟ್‌ಗಳಿಗೆ ನಿಗದಿಯಂತೆ 7 ಗಂಟೆ ವಿದ್ಯುತ್ ಪೂರೈಸಿ ಮನೆಗಳಿಗೆ 24 ಗಂಟೆ ಕರೆಂಟ್ ನೀಡಬೇಕು.
    ಧರ್ಮೋಜಿರಾವ್, ನಿವಾಸಿ

    ಸರ್ವೇ ನಂಬರ್‌ಗಳಿದ್ದು, ಕೆಲವು ರೈತರು ರಸ್ತೆ ಮಾಡಲು ಒಪ್ಪದ ಕಾರಣ ರಸ್ತೆ ಮಾಡಿಸಲು ತಡವಾಗುತ್ತಿದೆ. ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಈಗಾಗಲೆ ಮನವಿ ಮಾಡಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ.
    ಮಂಜುಳಾ ಮಹದೇವ್, ದೋಣಿಮಡಗು ಗ್ರಾಪಂ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts