More

    ಕಾಂಗ್ರೆಸ್ ಸೇರ್ಪಡೆಗೆ ಕೆ.ಎಚ್.ಮುನಿಯಪ್ಪ ಅಡ್ಡಿ

    ಕೋಲಾರ: ಕೆ.ಎಚ್.ಮುನಿಯಪ್ಪ ಮನೆಗೆ ಹೋಗಿ ಕಾಂಗ್ರೆಸ್ ಸೇರುತ್ತೇನೆಂದು ಅರ್ಜಿ ನೀಡಿಲ್ಲ. ಕಾಂಗ್ರೆಸ್ ಸೇರುವ ಅವಶ್ಯಕತೆಯೂ ನನಗಿಲ್ಲ. ತನ್ನ ವ್ಯಾಪಾರ ನಿಂತುಹೋಗುತ್ತದೆ ಎಂಬ ಕಾರಣಕ್ಕೆ ಪಕ್ಷ ಸೇರ್ಪಡೆಗೆ ಕೆಎಚ್ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮಾಜಿ ಶಾಸಕ ವರ್ತೂರು ಆರ್. ಪ್ರಕಾಶ್ ವಾಗ್ದಾಳಿ ನಡೆಸಿದರು.

    ನಗರ ಹೊರವಲಯದ ಬೀರಪ್ಪ ಬಡಾವಣೆಯಲ್ಲಿರುವ ನಿವಾಸದ ಬಳಿ ಮಂಗಳವಾರ ಕ್ಷೇತ್ರದ 12 ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ನಮ್ಮ ಮುಖಂಡರ ಮಾತಿಗೆ ಬೆಲೆ ಕೊಟ್ಟು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡ್ತೀನಿ ಎಂದು ಹೇಳಿದ ಮರುದಿನವೇ ಕೆಎಚ್ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದರು. ಈಗಲೂ ಅವರ ಮನೆ ಬಾಗಿಲಿಗೆ ಹೋಗಿ ಸೇರಿಸಿಕೊಳ್ಳಿ ಎನ್ನಲು ನನಗೆ ಸ್ವಾಭಿಮಾನ ಇಲ್ವಾ ಎಂದು ಪ್ರಶ್ನಿಸಿದರು.

    ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಸಿದ್ದರಾಮಯ್ಯ, ಕೆ.ಆರ್.ರಮೇಶ್‌ಕುಮಾರ್ ಅಡ್ಡ ಹಾಕುತ್ತಿಲ್ಲ. ವರ್ತೂರು ಕಾಂಗ್ರೆಸ್‌ಗೆ ಎಂದು ಘೋಷಣೆಯಾದರೆ ಕ್ಷೇತ್ರಕ್ಕೆ ಹೊಸ ಗಿರಾಕಿ ಬರುವುದಿಲ್ಲ, ವ್ಯಾಪಾರ ನಿಂತು ಹೋಗುತ್ತದೆಂಬ ಕಾರಣಕ್ಕೆ ಸೇರಿಸುತ್ತಿಲ್ಲ. ಕುರಿ ಕೊಯ್ಯುವಾಗ ನೀರು ಹಾಕಿ ಕೊಯ್ಯುತ್ತಾರೆ. ಮುನಿಯಪ್ಪ ನೀರು ಹಾಕದೆಯೇ ಕೊಯ್ಯುತ್ತಾನೆಂದು ನನಗೆ ಗೊತ್ತಾಗಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

    ಕಳೆದ ಮೂರು ಚುನಾವಣೆಯಲ್ಲಿ ಮುನಿಯಪ್ಪ ಅವರನ್ನು ಬೆಂಬಲಿಸಿದ್ದೇವೆ. ಕಳೆದ ಸಲ 7 ಕ್ಷೇತ್ರದಲ್ಲಿ ಹಿನ್ನಡೆಯಾದರೂ ನಾನು ಲೀಡ್ ಕೊಟ್ಟೆ. ಆತ ತೊಂದರೆ ಕೊಟ್ಟರೂ, ವರ್ತೂರು ಪ್ರಕಾಶ್ ಬೇಡ, ಗಂಟುಮೂಟೆ ಕಟ್ಟಿಸ್ತೀನಿ ಎಂದರೂ ನಾನು ಅವರ ವಿರುದ್ಧ ಮಾತನಾಡಿಲ್ಲ. ಗ್ರಾಪಂನಲ್ಲಿ ಕೋಲಾರ, ಮುಳಬಾಗಿಲು, ಚಿಂತಾಮಣಿಯಲ್ಲಿ ಕಾಂಗ್ರೆಸ್ ಇಲ್ಲ, ಕೆಜಿಎಫ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲ. ಇನ್ನು 7 ಬಾರಿ ಸಂಸದರಾಗಿ ಕೆಎಚ್ ಕಾಂಗ್ರೆಸ್ ಕಟ್ಟಿದ್ದೇನು, ಕೋಲಾರ ಕ್ಷೇತ್ರದಲ್ಲಿ 7 ಗ್ರಾಪಂ ಗೆದ್ದಿದ್ದೇವೆಂದು ಹೇಳುತ್ತಿರುವ ಕೆಎಚ್‌ಗೆ ಏನಾಗಿದೆ ಎಂದು ಛೇಡಿಸಿದರು.

    ನಾನು ಶಾಸಕನಾಗಿಲ್ಲ ಎಂಬ ಕಾರಣಕ್ಕೆ ಕೆಎಚ್ ಆಟ ಆಡಿಸುತ್ತಿದ್ದಾರೆ. ಜಿಪಂ, ತಾಪಂ ಚುನಾವಣೆಗೆ 60 ದಿನ ಇದೆ. ಹೊಲಿಗೆಯಂತ್ರ ಚಿಹ್ನೆಯಲ್ಲೇ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸೋಣ, ಕೊತ್ತೂರು ಮಂಜುನಾಥ್ ರೀತಿಯೇ ಪಕ್ಷೇತರವಾಗಿ ನಿಲ್ಲೋಣ ಎಂದು ಕರೆ ನೀಡಿದರು.
    ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಮಾತನಾಡಿ, 4 ಕ್ಷೇತ್ರಕ್ಕೂ ಬಿ ಫಾರಂ ನಮ್ಮ ಕೈಗೆ ನೀಡಿದರೆ ಗೆಲ್ಲುತ್ತೇವೆ, ಇಲ್ಲದಿದ್ದರೆ ಹೊಲಿಗೆ ಯಂತ್ರ ಇದೆ. ಕಂಡವರ ಮಾತು ಕೇಳಿ ವರ್ತೂರು ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಲು ಹೋಗಬೇಡಿ. ನಮ್ಮ ಒಂದು ಕಣ್ಣು ಕೀಳಲು ನೋಡಿದರೆ ಕಾಂಗ್ರೆಸ್‌ನ ಎರಡೂ ಕಣ್ಣು ಹೋದೀತು ಎಂದರು.

    ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸದಸ್ಯರಾದ ರೂಪಶ್ರೀ ಮಂಜು, ಅರುಣ್ ಪ್ರಸಾದ್, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಕುರುಬರ ಸಂಘದ ಅಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೃಷ್ಣ, ಬಂಕ್‌ಮಂಜು, ಉಷಾವೆಂಕಟೇಶ್, ಕಾಶಿವಿಶ್ವನಾಥ್, ಜನಾರ್ದನ್, ಮಧುಸೂದನ್, ಸಿ.ಸೋಮಶೇಖರ್, ಮುನಿಸ್ವಾಮಿ, ಮಹೇಂದ್ರ, ಕುರುಬರ ಸಂಘದ ನಿರ್ದೇಶಕಿ ಸರಸ್ವತಿ ಇತರರಿದ್ದರು.

    ಬಾಡೂಟಕ್ಕೆ ಮುಗಿಬಿದ್ದರು: ನಾಲ್ಕೈದು ಸಾವಿರ ಕಾರ್ಯಕರ್ತರಿಗೂ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಸಮಾರಂಭ ಮುಗಿಯುತ್ತಿದ್ದಂತೆ ಕಾರ್ಯಕರ್ತರು ತಟ್ಟೆ ಹಿಡಿದು ಮುಗಿಬಿದ್ದರು. ಅನೇಕರು ಅಧಂಬರ್ಧ ತಿಂದು ಎಸೆದಿದ್ದು ಕಂಡುಬಂತು. ಸಾವಿರಾರು ಮಂದಿ ಮಾಸ್ಕ್ ಧರಿಸದೆಯೇ ಬಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts