More

    ಕಾಂಗ್ರೆಸ್ ಭದ್ರಾ ಮೇಲ್ದಂಡೆ ಪರವಾಗಿದೆ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಪರವಾಗಿ ಕಾಂಗ್ರೆಸ್ ಇದ್ದು, ಸಿಎಂ ಸಿದ್ದರಾಮಯ್ಯ ಅವರು 1,200 ಕೋಟಿ ರೂ. ಕೊಟ್ಟಿದ್ದಾರೆ. ಹಿಂದಿನ ಎಲ್ಲ ಸರ್ಕಾರಗಳು ಅನುದಾನ ನೀಡಿವೆ. ಯಾರನ್ನೂ ದೂಷಿಸುವುದಿಲ್ಲ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದರೆ, ಐದು ವರ್ಷದೊಳಗೆ ವಿವಿ ಸಾಗರಕ್ಕೆ ನೀರು ಹರಿಸುವ ಭರವಸೆ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ನೀಡಿದ್ದರು. ಈ ಹಿಂದೆ ಕ್ಷೇತ್ರದ ಸಂಸದನಾಗಿ ಜನಾಶೀರ್ವಾದ ಆದ ವೇಳೆ ಕೊಟ್ಟ ವಚನಕ್ಕೆ ಬದ್ಧರಾಗಿ ನೀರು ಹರಿಸಲಾಗಿದೆ ಎಂದರು.

    ಕನಿಷ್ಠ 30-40 ಬಾರಿ ಯೋಜನೆ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಸರ್ಕಾರದ ಗಮನ ಸೆಳೆದಿದ್ದೇವೆ. ಈಗ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಜವಾಬ್ದಾರಿ ಹೆಚ್ಚಿದೆ. ಕಾನೂನು ತೊಡಕಿರುವ ಕಾರಣ, ತರೀಕೆರೆ ಶಾಸಕರ ಜೊತೆ ಅನೇಕ ಸಭೆ ಮಾಡಿದ್ದೇನೆ ಎಂದು ತಿಳಿಸಿದರು.

    ಯೋಜನೆ ಕುರಿತು ಕಾಳಜಿ ಇದ್ದಿದ್ದರಿಂದಾಗಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ, ಸಾಕಷ್ಟು ಸಂಘಟನೆಗಳು ಕರೆ ನೀಡಿದ್ದ ಬಂದ್‌ನಲ್ಲಿ ಕಾಂಗ್ರೆಸ್ಸಿಗರು ಪಾಲ್ಗೊಂಡಿದ್ದೆವು. ಆಹ್ವಾನಿಸಿ, ಒತ್ತಾಯಿಸಿದ್ದರಿಂದ ಮಾತನಾಡಿದೆ. ಈ ವೇಳೆ ನಾಲ್ಕೈದು ರೈತರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ವಿರೋಧಿಸಲಾರೆ. ಆದರೆ, ಇದನ್ನು ತಿರುಚಿ ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ವಿರುದ್ಧ ಕೆಲವರು ಕಪ್ಪು ಚುಕ್ಕಿ ತರುವ ಪ್ರಯತ್ನ ಸರಿಯೇ ಎಂದು ಪ್ರಶ್ನಿಸಿದರು.

    ನಾವು ಇತರೆ ಪಕ್ಷದವರಂತೆ ಬೆಂಬಲ ಘೋಷಿಸಿ, ಹಿಂದೆ ಸರಿಯಲಿಲ್ಲ. ನೇರವಾಗಿ ಶಾಸಕರು, ಹಾಲಿ ಮತ್ತು ಮಾಜಿ ಸಚಿವರು, ಪಕ್ಷದ ಪದಾಧಿಕಾರಿಗಳು ಬಂದ್‌ನಲ್ಲಿ ಭಾಗವಹಿಸಿದ್ದೇವೆ. ಇದನ್ನು ಜಿಲ್ಲೆಯ ಜನತೆ ಗಮನಿಸಿದ್ದಾರೆ ಎಂದರು.

    ಅಧಿಕಾರ ಇರಲಿ, ಇಲ್ಲದಿರಲಿ ಕಾಂಗ್ರೆಸ್ ಯೋಜನೆ ಅನುಷ್ಠಾನಕ್ಕಾಗಿ ಹೋರಾಟ ಮಾಡಲಿದೆ. ಈ ವಿಚಾರದಲ್ಲಿ ಬದ್ಧತೆ ಇದೆ. ಯಾರೇ ಪ್ರಶ್ನಿಸಿದರು ಉತ್ತರ ಕೊಡುವ ನೈತಿಕ ಶಕ್ತಿ ಇದ್ದು, ಇಲ್ಲದವರು ಹೋರಾಟದಲ್ಲಿ ಭಾಗಿಯಾಗಿಲ್ಲ. ಕೇಂದ್ರ ಸರ್ಕಾರ ಯೋಜನೆಗೆ ಘೋಷಿಸಿರುವ 5,300 ಕೋಟಿ ರೂ. ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

    ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಪದಾಧಿಕಾರಿಗಳಾದ ಜಿ.ಎಸ್.ಮಲ್ಲಿಕಾರ್ಜುನ್, ಹಾಲಸ್ವಾಮಿ, ಬಿ.ಟಿ.ಜಗದೀಶ್, ಲಕ್ಷ್ಮಿಕಾಂತ್, ಕಂದಿಕೆರೆ ಜಗದೀಶ್, ಡಿ.ಎನ್.ಮೈಲಾರಪ್ಪ, ಸಂಪತ್ ಕುಮಾರ್, ಡಿ.ಟಿ.ವೆಂಕಟೇಶ್, ಎನ್.ಡಿ.ಕುಮಾರ್, ಅಂಜಿನಪ್ಪ, ನಜ್ಮಾತಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts