More

    ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಬಹಳ ಕಷ್ಟವಿತ್ತು

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೊನಾ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅದ್ಭುತವಾದುದು. ಒಂದುವೇಳೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿತ್ತು ಎಂದು ಕೈಗಾರಿಕಾ ಖಾತೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

    ಮೋದಿ ಸರ್ಕಾರ ಎರಡನೇ ಅವಧಿಯಲ್ಲಿ ವರ್ಷ ಪೂರೈಸಿದ ಪ್ರಯುಕ್ತ ಸೋಮವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂ, ದೇಶಾದ್ಯಂತ ಲಾಕ್​ಡೌನ್ ಜಾರಿ ಮಾಡಿದ್ದಲ್ಲದೇ ಪ್ರೇರಣಾದಾಯಕ ಮಾತುಗಳಿಂದ ಜನರಲ್ಲಿ ಜಾಗೃತಿ ಮೂಡಿಸಿದರು. ಕಾಲ ಕಾಲಕ್ಕೆ ರಾಜ್ಯಗಳಿಗೆ ಆರ್ಥಿಕ ನೆರವು, ಇತರ ಅಗತ್ಯ ಸಹಾಯ ನೀಡುವ ಮೂಲಕ ಕರೊನಾ ವಿರುದ್ಧದ ಹೋರಾಟವು ಹೆಚ್ಚು ಫಲಿತಾಂಶ ಕೊಡುವಂತೆ ಮಾಡಿದರು. ಅವರ ಸಮರ್ಥ ನಾಯಕತ್ವದಿಂದಾಗಿ ನಮ್ಮ ದೇಶವು ಮುಂದುವರಿದ ದೇಶಗಳಿಗಿಂತ ಕಡಿಮೆ ಹಾನಿ ಅನುಭವಿಸುವಂತಾಗಿದೆ. ಬೇರೆ ಸರ್ಕಾರ ಅಧಿಕಾರದಲ್ಲಿದ್ದರೆ ಹಾನಿಯನ್ನು ಅಂದಾಜಿಸಲು ಸಾಧ್ಯವಿರಲಿಲ್ಲ ಎಂದರು.

    ಪ್ರಸ್ತುತ ಕರೊನಾದಿಂದ ಉಂಟಾಗಿರುವ ಹಿನ್ನಡೆಯಿಂದ ದೇಶ ಚೇತರಿಸಿಕೊಳ್ಳಲು ಘೊಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್​ನಲ್ಲಿ ಎಲ್ಲ ವರ್ಗದವರಿಗೆ ನೆರವಾಗುವ ಅಂಶಗಳಿವೆ. ದೀರ್ಘಾವಧಿಯಲ್ಲಿ ದೇಶವನ್ನು ಸ್ವಾವಲಂಬಿ ಹಾಗೂ ಬಲಾಢ್ಯಗೊಳಿಸಲು ಪ್ಯಾಕೇಜ್ ಬಹಳ ಪ್ರಶಸ್ತವಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲವನ್ನೂ ಸರ್ಕಾರ ಈಡೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕೇಂದ್ರ ಪ್ರಾಯೋಜಿತ ಯೋಜನೆ, ಹಣಕಾಸು ಆಯೋಗದ ಅನುದಾನ, ಇತರೆ ಅನುದಾನ ಸೇರಿ ನಮ್ಮ ರಾಜ್ಯಕ್ಕೆ 2017-18ನೇ ಸಾಲಿನಲ್ಲಿ 21640 ಕೋಟಿ ರೂ., 2018-19ನೇ ಸಾಲಿನಲ್ಲಿ 26,882 ಕೋಟಿ ರೂ. ಬಂದಿತ್ತು. 2019-20ನೇ ಸಾಲಿನಲ್ಲಿ 32,257 ಕೋಟಿ ರೂಪಾಯಿ ಬಂದಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಅನುದಾನವನ್ನು ಮೋದಿ ಸರ್ಕಾರ ನೀಡುತ್ತಿದೆ. ಧಾರವಾಡ ಜಿಲ್ಲೆಗೆ ಮೋದಿ ಸರ್ಕಾರ 1250 ಕೋಟಿ ರೂ.ಗಳಷ್ಟು ಅನುದಾನ ನೀಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಕಾಳಜಿಯಿಂದ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ವಣಕ್ಕೂ ಅನುದಾನ ಸಿಕ್ಕಿದೆ. ಹು-ಧಾ ಪಾಲಿಕೆಗೆ ಅಮೃತ ಯೋಜನೆಯಲ್ಲಿ ಎರಡನೇ ಹಂತದ ಅನುದಾನಕ್ಕೆ ಪ್ರಯತ್ನ ನಡೆಸಿದ್ದೇವೆ ಎಂದು ಹೇಳಿದರು.

    ಹುಬ್ಬಳ್ಳಿ-ಧಾರವಾಡದ ಎಲ್ಲ ವಾರ್ಡ್​ಗಳಿಗೆ 24 ಗಂಟೆ ಕುಡಿಯುವ ನೀರೊದಗಿಸುವ ಯೋಜನೆಗೆ ರಾಜ್ಯ ಸರ್ಕಾರದಿಂದ ಮಂಜೂರಿ ಕೊಡಿಸಿದ್ದೇವೆ. ಎಲ್​ಎನ್​ಟಿ ಕಂಪನಿಗೆ ಟೆಂಡರ್ ಆಗಿದ್ದು, 6 ತಿಂಗಳಲ್ಲಿ ಕೆಲಸ ಶುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬೆಣ್ಣೆ ಹಳ್ಳ ಸದ್ಬಳಕೆ: ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ, ಡೋಣಿ ಹಳ್ಳದ ನೀರನ್ನು ಸದುಪಯೋಗ ಮಾಡಿಕೊಳ್ಳುವ ಕುರಿತು ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ ಅವರಿಂದ ಒತ್ತಡವಿತ್ತು. ಈ ಯೋಜನೆಯನ್ನು ಬೃಹತ್ ನೀರಾವರಿ ಇಲಾಖೆಯಿಂದಲೇ ಕೈಗೊಳ್ಳಲಾಗುವುದು. ಡಿಪಿಆರ್ ಸಿದ್ಧವಾಗುತ್ತಿದೆ ಎಂದು ಶೆಟ್ಟರ್ ಹೇಳಿದರು.

    ತೆರವು ಪ್ರಕ್ರಿಯೆ: ಹು-ಧಾ ಅವಳಿ ನಗರದಲ್ಲಿ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಒಂದು ಹಂತಕ್ಕೆ ಬರುವಾಗಲೇ ಕರೊನಾ ಕಾಟ ಶುರುವಾಯಿತು. ಮುಂದಿನ ದಿನಗಳಲ್ಲಿ ತೆರವು ಪ್ರಕ್ರಿಯೆ ನಡೆಸಿ, ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಪೂರ್ತಿ ಬಳಸಿಕೊಳ್ಳಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಕಳಸಾ-ಬಂಡೂರಿ ಯೋಜನೆ: ಕಳಸಾ-ಬಂಡೂರಿ ತಿರುವು ಯೋಜನೆಗೆ ರಾಜ್ಯ ಸರ್ಕಾರ 500 ಕೋಟಿ ರೂ.ಗಳನ್ನು ಮುಂಗಡಪತ್ರದಲ್ಲಿ ಕಾಯ್ದಿರಿಸಿದೆ. ರಾಜ್ಯದ ನೀರಿನ ಹಕ್ಕು ಖಚಿತವಾಗಿದೆ. ಕೇಂದ್ರದ ಅಧಿಸೂಚನೆಯನ್ನೂ ಮಾಡಿಸಲಾಗಿದೆ. ಯೋಜನೆ ಜಾರಿಯಾಗಲಿದೆ. ಈಗ ಬಿಜೆಪಿ ವಿರುದ್ಧ ಯಾರೂ ಟೀಕಿಸಲು ಅವಕಾಶವಿಲ್ಲ ಎಂದು ಜಗದೀಶ ಶೆಟ್ಟರ್ ತಿಳಿಸಿದರು.

    ತೆರಿಗೆ ಇಳಿಸಲು ಶ್ರಮಿಸಿದ್ದೇನೆ: ಕೇಂದ್ರದ ಕೆಲವು ಮಾರ್ಗಸೂಚಿಗಳ ಪ್ರಕಾರ ರಾಜ್ಯವು ಹೆಚ್ಚಿನ ಅನುದಾನ ಪಡೆಯಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಆದಾಗ್ಯೂ ಅಧಿಕಾರಿಗಳೊಂದಿಗೆ ಪುನಃ ಸಭೆ ಮಾಡಿ ರ್ಚಚಿಸಿದ್ದರಿಂದ ಶೇ. 5 ತೆರಿಗೆ ಇಳಿಕೆಯಾಗಿದೆ. ಆಸ್ತಿದಾರರು ಶೇ. 5 ರಿಯಾಯಿತಿ ಪಡೆಯುವ ಅವಧಿ ವಿಸ್ತರಣೆ ಕೂಡ ಮಾಡಿದ್ದೇವೆ. ಹೆಚ್ಚಳದಲ್ಲಿ ಕಡಿತ ಹಾಗೂ ರಿಯಾಯಿತಿ ಅವಧಿ ವಿಸ್ತರಣೆಯಿಂದ ಆಸ್ತಿದಾರರಿಗೆ ಶೇ. 10ರಷ್ಟು ಭಾರ ಕಡಿಮೆಯಾಗುತ್ತದೆ ಎಂದು ಶೆಟ್ಟರ್ ಹೇಳಿದರು.

    ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಎಸ್.ವಿ. ಸಂಕನೂರ, ಬಿಜೆಪಿ ರಾಜ್ಯ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಲಿಂಗರಾಜ ಪಾಟೀಲ, ಸಂತೋಷ ಚವ್ಹಾಣ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts