More

    ಕಾಂಗ್ರೆಸ್​ನಿಂದ ‘ಲೆಕ್ಕ ಕೊಡಿ’ ಅಭಿಯಾನ

    ಶಿವಮೊಗ್ಗ: ಜಿಲ್ಲೆಯಲ್ಲಿ ಕರೊನಾ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಇದುವರೆಗೆ ಖರ್ಚು ಮಾಡಿರುವ ಹಣದ ಮಾಹಿತಿ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್​ನಿಂದ ‘ಲೆಕ್ಕ ಕೊಡಿ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಮೊದಲ ಹಂತವಾಗಿ ಎಲ್ಲ ತಾಲೂಕು ಕೇಂದ್ರಗಳಲ್ಲೂ ಸುದ್ದಿಗೋಷ್ಠಿ ನಡೆಸಿ ಕರೊನಾ ನಿರ್ವಹಣೆಯ ವೈಫಲ್ಯಗಳನ್ನು ಪಟ್ಟಿ ಮಾಡಲು ಕಾಂಗ್ರೆಸ್ ಮುಂದಾಗಿದೆ.

    ಕರೊನಾ ಕೇರ್ ಸೆಂಟರ್​ಗಳಲ್ಲಿ ಸರಿಯಾದ ವ್ಯವಸ್ಥೆಯಿಲ್ಲ ಎಂಬ ದೂರುಗಳು ಬರುತ್ತಿವೆ. ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳಿವೆ. ಕರೊನಾ ಕಿಟ್ ಖರೀದಿಯಲ್ಲಿ ಅವ್ಯವಹಾರದ ಕುರುಹು ಕಾಣುತ್ತಿದೆ. ಹೀಗಾಗಿ ಲೆಕ್ಕ ಕೊಡಿ ಅಭಿಯಾನ ನಡೆಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಲಾಕ್​ಡೌನ್-ಸೀಲ್​ಡೌನ್ ಅಷ್ಟೇ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಲಾಕ್​ಡೌನ್-ಸೀಲ್​ಡೌನ್ ಬಿಟ್ಟು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ. ಇದುವರೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಎಷ್ಟು ಕರೊನಾ ಕೇರ್ ಸೆಂಟರ್​ಗೆ ಭೇಟಿ ನೀಡಿದ್ದಾರೆ ಎಂದು ಪ್ರಶ್ನಿಸಿದ ಸುಂದರೇಶ್, ಪಾಸಿಟಿವ್ ಬಂದವರನ್ನು ಹಾಸ್ಟೆಲ್​ಗೆ ಕರೆದೊಯ್ದು ಬಿಟ್ಟರೆ ಕೆಲಸ ಮುಗಿಯಿತು ಎಂದು ಜಿಲ್ಲಾಡಳಿತ ಭಾವಿಸದಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಮೆಗ್ಗಾನ್ ಆಸ್ಪತ್ರೆ ಬಿಟ್ಟರೆ ಬೇರೆಲ್ಲೂ ಕರೊನಾ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಂಡಿಲ್ಲ. ಗಾಜನೂರು ಮುರಾರ್ಜಿ ಶಾಲೆಯಲ್ಲಿರುವವರನ್ನು ಕೇಳುವವರಿಲ್ಲದಂತಾಗಿದೆ. ಲಾಕ್​ಡೌನ್ ಮಾಡುವಾಗ ರಸ್ತೆ ಪಕ್ಕದಲ್ಲಿರುವ ಕಸ, ಕಡ್ಡಿ, ಗಿಡಗಳನ್ನೇ ಬಳಸುತ್ತಿರುವುದು ಕರೊನಾ ನಿರ್ವಹಣೆಯಲ್ಲಿನ ತಾತ್ಸಾರಕ್ಕೆ ನಿದರ್ಶನ ಎಂದರು.

    ಇನ್ನೂ ಲೆಕ್ಕ ಕೊಟ್ಟಿಲ್ಲ: ಜಿಲ್ಲೆಗೆ ರಾಜ್ಯ ಸರ್ಕಾರದಿಂದ ಕರೊನಾ ನಿರ್ವಹಣೆಗೆ ಎಷ್ಟು ಅನುದಾನ ಬಂದಿದೆ? ಎಷ್ಟು ಹಣ ಖರ್ಚಾಗಿದೆ? ಎಷ್ಟು ಉಪಕರಣಗಳನ್ನು, ಯಾವ ಮೊತ್ತಕ್ಕೆ ಖರೀದಿಸಲಾಗಿದೆ ಎಂದು ಮಾಹಿತಿ ನೀಡುವಂತೆ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಡಿಸಿ ಕೆ.ಬಿ.ಶಿವಕುಮಾರ್, ಡಿಎಚ್​ಒ ಡಾ. ರಾಜೇಶ್ ಸುರಗೀಹಳ್ಳಿ ಅವರಿಗೆ ಪತ್ರ ಬರೆದಿದ್ದೇವೆ. ಇನ್ನೂ ಲೆಕ್ಕ ಕೊಟ್ಟಿಲ್ಲ. ಹೀಗಾಗಿ ಮುಂದಿನ ವಾರದಿಂದ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸುಂದರೇಶ್ ತಿಳಿಸಿದರು.

    ರಾಜ್ಯದಂತೆ ಜಿಲ್ಲೆಯಲ್ಲೂ ಅವ್ಯವಹಾರ: ಬೆಂಗಳೂರಿನಲ್ಲಿ ಪದ್ಮಾಂಬಾ ಡಯಾಗ್ನಸ್ಟಿಕ್ ಸೆಂಟರ್ ಮೂಲಕ ಪ್ರತಿ ಪರೀಕ್ಷೆಗೆ 4,500 ರೂ.ನಂತೆ 10 ಲಕ್ಷ ಮಂದಿಗೆ ಕರೊನಾ ಟೆಸ್ಟ್ ಮಾಡಲಾಗಿದೆ. 2,600 ರೂ. ಹಾಸಿಗೆ-ದಿಂಬನ್ನು ಶಾಶ್ವತವಾಗಿ ಖರೀದಿಸುವ ಬದಲು ದಿನಕ್ಕೆ 800 ರೂ.ನಂತೆ 100 ದಿನಕ್ಕೆ ಬಾಡಿಗೆ ಪಡೆಯಲಾಗಿದೆ. ಮಂಜುನಾಥ ಎಂಟರ್​ಪ್ರೖೆಸಸ್ ಮೂಲಕ ಕರೊನಾ ಉಪಕರಣ ಖರೀದಿಸಲಾಗಿದೆ. ಈ ಸಂಸ್ಥೆಗಳೆಲ್ಲವೂ ಪ್ರಭಾವಿ ಸಚಿವರ ಆಪ್ತರದ್ದಾಗಿದೆ. ಇದೇ ಸಂಸ್ಥೆಗಳು ಜಿಲ್ಲೆಗೂ ಪೂರೈಸಿರುವುದರಿಂದ ಇಲ್ಲೂ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ ಎಂದು ಸುಂದರೇಶ್ ಅನುಮಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts