More

    ಕಾಂಗ್ರೆಸ್‌ನಿಂದ ನರೇಂದ್ರ ನಾಮಪತ್ರ ಸಲ್ಲಿಕೆ

    ಹನೂರು: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಆರ್. ನರೇಂದ್ರ ಅವರು ಮಂಗಳವಾರ ಸಾವಿರಾರು ಬೆಂಬಲಿಗರ ಜತೆಗೂಡಿ ನಾಮಪತ್ರ ಸಲ್ಲಿಸಿದರು.


    ಬೆಳಗ್ಗೆ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಪತ್ನಿ ಆಶಾ, ಪುತ್ರ ನವನೀತ್‌ಗೌಡ, ಪುತ್ರಿಯರಾದ ನಿಖಿತಾ, ನಿಶ್ಚಿತಾ ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಬಳಿಕ ವಾದ್ಯಮೇಳದೊಂದಿಗೆ ಮೆರವಣಿಗೆಯ ಮೂಲಕ ಬಂಡಳ್ಳಿ ರಸ್ತೆ, ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಚುನಾವಣಾ ಕಚೇರಿಗೆ ಆಗಮಿಸಿದರು. ಚುನಾವಣಾಧಿಕಾರಿ ಮಧುಸೂದನ್ ಅವರಿಗೆ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಕಾರ್ಯಕರ್ತರು ನರೇಂದ್ರ ಅವರಿಗೆ ಜೈಕಾರ ಹಾಕುತ್ತ ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರು.


    ಆರ್.ನರೇಂದ್ರ ಮಾತನಾಡಿ, ಕಳೆದ 15 ವರ್ಷದ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆ-ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅನುಷ್ಠಾನ, ಬಸ್ ನಿಲ್ದಾಣ ಸ್ಥಾಪನೆ, ಏಕಲವ್ಯ, ಮುರಾರ್ಜಿ, ಇಂದಿರಾಗಾಂಧಿ ವಸತಿ ಶಾಲೆ ಸೇರಿದಂತೆ ಇನ್ನು ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈ ದಿಸೆಯಲ್ಲಿ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಜನರಲ್ಲಿ ಮತಯಾಚಿಸುತ್ತೇನೆ ಎಂದರು.


    ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್ ನಂಜುಂಡಸ್ವಾಮಿ ಮಾತನಾಡಿ, ಜಗದೀಶ ಶೆಟ್ಟರ್ ಸಜ್ಜನ ರಾಜಕಾರಣಿ. ಆದರೆ ಬಿಜೆಪಿ ಇವರನ್ನು ನಡೆಸಿಕೊಂಡ ರೀತಿ ಸರಿಯಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಹಾಗಾಗಿ ಬಿಜೆಪಿ ದುಡ್ಡು, ದರ್ಪ ಹಾಗೂ ಸರ್ವಾಧಿಕಾರದಿಂದ ನಡೆದುಕೊಳ್ಳುತ್ತಿದೆ. ಆದ್ದರಿಂದ ಪ್ರಜಾಪ್ರಭುತ್ವ ಉಳಿಯಬೇಕಾದರೆ ಹಾಗೂ ದೀನ ದಲಿತರು ಹಾಗೂ ಹಿಂದುಳಿದ ವರ್ಗಕ್ಕೆ ಅನುಕೂಲವಾಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಈ ಬಾರಿ 140 ಸ್ಥಾನಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


    ಬಳಿಕ ತಮ್ಮ ಬೆಂಬಲಿಗರೊಂದಿಗೆ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ತೆರಳಿ ಮತಯಾಚಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದವರ್ಮ, ಜಿಪಂ ಉಪಾಧ್ಯಕ್ಷ ಬಸವರಾಜು, ಪಪಂ ಉಪಾಧ್ಯಕ್ಷ ಗಿರೀಶ್, ಮಾಜಿ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಸುದೇಶ್, ಸಂಪತ್‌ಕುಮಾರ್, ಸೋಮಶೇಖರ್, ತಾಪಂ ಮಾಜಿ ಸದಸ್ಯ ಜವಾದ್ ಅಹಮದ್, ಮುಖಂಡರಾದ ವೆಂಕಟರಮಣನಾಯ್ಡು, ಮಹೇಶ್, ಚೆಲುವರಾಜು, ಚೇತನ್ ದೊರೆರಾಜು, ಮಾದೇಶ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts