More

    ಕಸ ಮುಟ್ಟದೇ ವೈಜ್ಞಾನಿಕ ವಿಲೇವಾರಿ

    ಹುಬ್ಬಳ್ಳಿ: ಮನೆ, ಅಂಗಡಿ ಅಥವಾ ಮಳಿಗೆಗಳಲ್ಲಿನ ಕಸವನ್ನು ಸಮೀಪದ ಕಸದ ಡಬ್ಬಿಗೆ ಹಾಕುವಂತಾಗಬೇಕು, ಅಲ್ಲಿಂದ ಯಾವುದೇ ಮಾನವ ಸ್ಪರ್ಶ ಇಲ್ಲದಂತೆ ವೈಜ್ಞಾನಿಕ ವಿಧಾನದ ಮೂಲಕ ವಾಹನಕ್ಕೆ ಸುರಿದು ನೇರವಾಗಿ ಡಂಪಿಂಗ್ ಯಾರ್ಡ್​ಗೆ ಕಳುಹಿಸಬೇಕು…

    ಇಂತಹ ಪರಿಕಲ್ಪನೆಯೊಂದಿಗೆ ಕಾರ್ಯಕ್ಷೇತ್ರಕ್ಕಿಳಿದ ಹುಬ್ಬಳ್ಳಿಯ ಸ್ವಚ್ಛ ಸ್ವಸ್ಥ ಟ್ರಸ್ಟ್ ಪದಾಧಿಕಾರಿಗಳು ಮಾದರಿಯೊಂದನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಇವರು ವಿದೇಶಿ ಮಾದರಿಯ ತಂತ್ರಜ್ಞಾನ, ಸ್ವದೇಶಿ ವಸ್ತುಗಳನ್ನು ಬಳಕೆ ಮಾಡಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಕಸ ವಿಲೇವಾರಿ ಮಾಡುವ ವಿಧಾನವನ್ನು ಪರಿಚಯಿಸಿದ್ದಾರೆ. ಅದುವೇ ಸ್ವಚ್ಛ ಸ್ವಸ್ಥ ವೇಸ್ಟ್ ಬಿನ್ ಯೋಜನೆ. ಈ ನೂತನ ಯೋಜನೆಯ ಪ್ರಾಯೋಗಿಕ ಪರೀಕ್ಷೆಯನ್ನು ಶುಕ್ರವಾರ ಇಲ್ಲಿಯ ಅಧ್ಯಾಪಕ ನಗರದ ವಿಶ್ವನಾಥ ಕಲ್ಯಾಣ ಮಂಟಪ ಆವರಣದಲ್ಲಿ ನಡೆಸಲಾಯಿತು. ಸ್ವಚ್ಛ ಸ್ವಸ್ಥ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಪಾಟೀಲ, ಯೋಜನೆ ಕುರಿತು ಸುದ್ದಿಗೋಷ್ಠಿಯಲ್ಲಿ ಸಮಗ್ರ ಮಾಹಿತಿ ನೀಡಿದರು.

    ಏನಿದು ಪ್ರೊಜೆಕ್ಟ್?:
    ಭೂಮಿಗೆ ಸಮತಟ್ಟಾಗಿ 3 ಅಡಿ ಉದ್ದ- ಅಗಲ ಹಾಗೂ ಆಳದ ಗುಂಡಿ ತೋಡಿ ಅದನ್ನು ಸರಿಯಾಗಿ ಮುಚ್ಚುವ ವ್ಯವಸ್ಥೆ ಮಾಡಿ ಅದರಲ್ಲಿ ಕಂಟೇನರ್ ಇಡಲಾಗುತ್ತದೆ. ಅದರಲ್ಲಿ ಅಕ್ಕಪಕ್ಕದ ಮನೆಯವರು ಕಸ ಹಾಕಬಹುದು. ಒಬ್ಬ ಚಾಲಕ, ಸಹಾಯಕ ಇರುವ ಸುಸಜ್ಜಿತ ಕಸ ಸಂಗ್ರಹಣಾ ವಾಹನ ನಿತ್ಯ ವೈಜ್ಞಾನಿಕ ರೀತಿಯಲ್ಲಿ ಅದನ್ನು ಕೊಂಡೊಯ್ಯುವ ವ್ಯವಸ್ಥೆ ಇದಾಗಿದೆ.

    ಇದು ಕಾಯಂ ಪರಿಹಾರ
    ಪ್ರಸ್ತುತ ಜಾರಿಯಲ್ಲಿರುವ ಮನೆ ಮನೆಯಿಂದ ಕಸ ಸಂಗ್ರಹ ವ್ಯವಸ್ಥೆಯಿಂದ ಬಹಳಷ್ಟು ಕಿರಿಕಿರಿಗಳನ್ನು ಜನರು ಅನುಭವಿಸುತ್ತಾರೆ. ಸಂಗ್ರಹಣೆ ವಾಹನ ಬಂದಾಗಲೇ ಕಸ ಕೊಡಬೇಕು. ಒಂದೊಮ್ಮೆ ಮನೆಯಲ್ಲಿ ಜನ ಇಲ್ಲದಿದ್ದರೆ ಇಡೀ ದಿನ ಕಸ ಮನೆಯಲ್ಲೇ ಇರುತ್ತದೆ. ಅಲ್ಲದೇ, ವಾಹನ ಮುಕ್ತವಾಗಿ ಎಲ್ಲೆಂದರಲ್ಲಿ ಸಂಚರಿಸುವುದರಿಂದ ಕಸ ಹಾರುವುದು, ವಾಸನೆ ಬರುವುದು ಇತ್ಯಾದಿ ಸಮಸ್ಯೆಗಳು ಕಾಡುತ್ತವೆ. ಆದರೆ, ಟ್ರಸ್ಟ್​ನವರು ನಿರ್ವಿುಸಿದ ವಾಹನ ಸಂಪೂರ್ಣ ವೈಜ್ಞಾನಿಕ. ವಾಹನದಲ್ಲಿ ಅಳವಡಿಸಿದ ಸ್ವಯಂ ಚಾಲಿತ ವ್ಯವಸ್ಥೆಯು, ಭೂಮಿಯಲ್ಲಿ ಹೂತಿಟ್ಟ ಡಸ್ಟ್ ಬಿನ್ ಕಂಟೇನರ್​ಅನ್ನು ತಾನೇ ವಾಹನಕ್ಕೆ ಸುರಿದುಕೊಳ್ಳುತ್ತದೆ. ಹೀಗೆ ಸುರಿದ ಕಸ ಕೂಡ ಯಾರಿಗೂ ಕಾಣದಂತೆ ಡಂಪಿಂಗ್ ಯಾರ್ಡ್ ತಲುಪುತ್ತದೆ. ಹಸಿ ಕಸದ ಕೊಳೆತ ನೀರು ರಸ್ತೆ ಮೇಲೆ ಚೆಲ್ಲದಂತೆಯೂ ತಾಂತ್ರಿಕತೆ ಅಳವಡಿಸಿ ವಾಹನ ಸಿದ್ಧಪಡಿಸಲಾಗಿದೆ.

    ಪರಿಸರ ಸ್ನೇಹಿ ವ್ಯವಸ್ಥೆ
    ಒಂದು ವೇಸ್ಟ್ ಬಿನ್ ಸ್ಥಾಪನೆಗೆ ಕನಿಷ್ಠ 32 ಸಾವಿರ ರೂ. ಖರ್ಚು ಬರುತ್ತದೆ. ಸ್ವಯಂ ಚಾಲಿತ ಯಂತ್ರ ಅಳವಡಿಕೆ ಸೇರಿ ವಾಹನಕ್ಕೆ 12 ಲಕ್ಷ ರೂ. ಖರ್ಚಾಗಿದೆ. ಇದು ಅತ್ಯಂತ ಪರಿಸರ ಸ್ನೇಹಿ ವ್ಯವಸ್ಥೆಯಾಗಿದ್ದು, ಜಾನುವಾರು, ನಾಯಿ, ಹಂದಿಗಳು ವೇಸ್ಟ್ ಬಿನ್ ಕೆದರುವುದಿಲ್ಲ. ಸೊಳ್ಳೆ, ನೊಣದ ಕಾಟ ಇರುವುದಿಲ್ಲ. ಮಹಾನಗರ ಪಾಲಿಕೆ, ನಗರಸಭೆ, ಗ್ರಾಮ ಪಂಚಾಯಿತಿವರು ಇಂತಹ ವ್ಯವಸ್ಥೆ ಅಳವಡಿಸಿಕೊಳ್ಳಬಹುದು. ಸದ್ಯ ಹುಬ್ಬಳ್ಳಿ ವಿಶ್ವನಾಥ ಕಲ್ಯಾಣ ಮಂಟಪ, ಸಿದ್ಧಾರೂಢ ಮಠ, ಹೆಬಸೂರ ಭವನ ಬಳಿ ವೇಸ್ಟ್ ಬಿನ್ ಅಳವಡಿಸಿ ಅಲ್ಲಿಂದ ಕಸ ಸಂಗ್ರಹಿಸಲಾಗುತ್ತಿದೆ. ಇದರ ಬಗ್ಗೆ ಯಾರಿಗಾದರೂ ಮುಕ್ತವಾಗಿ ಮಾಹಿತಿ ತಿಳಿಸಿಕೊಡಲು ಟ್ರಸ್ಟ್ ನಿರ್ದೇಶಕರಾದ ಮೋಹನ ಬಡಿಗೇರ, ಭೀಮನಗೌಡ ಪಾಟೀಲ, ಮಂಜುನಾಥ ಪಾಟೀಲ, ನೇತ್ರಾ ಪಾಟೀಲ ಎಲ್ಲರೂ ಸಿದ್ಧರಿದ್ದೇವೆ ಎಂದು ಪಾಟೀಲ ತಿಳಿಸಿದರು.

    ಪ್ರಧಾನಿಯವರ ಸ್ವಚ್ಛ ಭಾರತ ಪರಿಕಲ್ಪನೆಯಿಂದ ಪ್ರೇರಿತನಾಗಿ ವೈಜ್ಞಾನಿಕ ಕಸ ಸಂಗ್ರಹಣೆ ವ್ಯವಸ್ಥೆ ಕಂಡುಕೊಳ್ಳಲು ಮುಂದಾದೆ. ಅದಕ್ಕಾಗಿ ಕಳೆದ ನಾಲ್ಕು ವರ್ಷದಿಂದ ಪ್ರಯತ್ನ ನಡೆದಿತ್ತು. ಇದೀಗ ಯಶಸ್ವಿಯಾಗಿದ್ದೇವೆ. ಇದಕ್ಕೆ ರಮಣಮೂರ್ತಿ ಕೆ., ಡಾ. ನೀಲಾ ವಸಂತ ಬಿರಾದಾರ, ಮೋಹನ ಕೋಡಕೆ, ಮಹಾಂತೇಶ ದೊಡ್ಡಮನಿ, ಟ್ರಸ್ಟ್ ಸದಸ್ಯರು, ಗೆಳೆಯರ ಬಳಗದವರು ಸಹಕಾರ ನೀಡಿದ್ದಾರೆ.
    ವಿಶ್ವನಾಥ ಎಸ್. ಪಾಟೀಲ್, ಸ್ವಚ್ಛ ಸ್ವಸ್ಥ ಟ್ರಸ್ಟ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts