More

    ಕಳ್ಳನ ಹಿಡಿದ ಮನೆ ಮಾಲೀಕ, ಪ್ರಕೃತಿ ಪಾರ್ಕ್ ವಿಲ್ಲಾದಲ್ಲಿ ಕಳವಿಗೆ ಯತ್ನ ಹಣದಾಸೆಗೆ ದರೋಡೆ

    ಸರ್ಜಾಪುರ: ಮಾರಕಾಸಗಳೊಂದಿಗೆ ಮನೆಗೆ ನುಗ್ಗಿದ ಕಳ್ಳನನ್ನು ಮನೆ ಮಾಲೀಕನೇ ಹಿಡಿದು ಪೊಲೀಸರಿಗೊಪ್ಪಿಸಿದ ಪ್ರಕರಣ ಇಟ್ಟಂಗೂರು ಸಮೀಪದ ಪ್ರಕೃತಿ ಪಾರ್ಕ್ ವಿಲ್ಲಾ ಬಡಾವಣೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ.

    ಸುನೀಲ (28) ಬಂಧಿತ ಆರೋಪಿ, ಕಳ್ಳನೊಂದಿಗೆ ಹೋರಾಡಿದ ಮನೆ ಮಾಲೀಕ ವಾಸುದೇವಶರ್ಮ ಅವರ ಕೈಬೆರಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.

    ಶನಿವಾರ ಮುಂಜಾನೆ 3.45ರ ಸಮಯದಲ್ಲಿ ಕಾಂಪೌಂಡ್ ಹಾರಿ ಬಂದ ಕಳ್ಳ ಕಬ್ಬಿಣದ ಸರಳಿನಿಂದ ಬಾಲ್ಕನಿಯ ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ್ದಾನೆ, ಶಬ್ದ ಕೇಳುತ್ತಿದ್ದಂತೆ ಮನೆಯಲ್ಲಿದ್ದ ಮಹಿಳೆ ಕಳ್ಳನನ್ನು ಕಂಡು ಕಿರುಚಿಕೊಂಡಿದ್ದಾರೆ, ಕೆಳಮಹಡಿಯಲ್ಲಿ ಮಲಗಿದ್ದ ವಾಸುದೇವಶರ್ಮ, ಓಡಿ ಬಂದು ಕಳ್ಳನ ಕೈಯಲ್ಲಿದ್ದ ಮಚ್ಚು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಳ್ಳ ಹಲ್ಲೆ ನಡೆಸಿದ್ದಾನೆ. ವಾಸುದೇವಶರ್ಮಾ ಅವರ ಕೈಬೆರಳಿಗೆ ಗಾಯಗಳಾಗಿದೆ, ಆದರೂ ವಾಸುದೇವ ಸೆಣಸಾಟ ನಡೆಸಿದ್ದಾರೆ, ಗಲಾಟೆ ಶಬ್ದ ಕೇಳಿದ ನೆರೆ-ಹೊರೆಯವರು ಧಾವಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಖಾಕಿಯಿಂದ ತಪ್ಪಿಸಿಕೊಳ್ಳಲು ಯತ್ನ: ಸ್ಥಳಕ್ಕೆ ಬಂದ ಸರ್ಜಾಪುರ ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ, ಸಬ್ ಇನ್‌ಸ್ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿ ಕಳ್ಳನನ್ನು ವಶಕ್ಕೆ ಪಡೆಯಲು ಮುಂದಾಗುತ್ತಿದ್ದಂತೆ ಸುಸ್ತಾದವನಂತೆ ನಟಿಸಿದ್ದ ಕಳ್ಳ ಏಕಾಏಕಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ, ಬೆನ್ನುಬಿದ್ದ ಪೊಲೀಸರು ಹಿಡಿದು ಠಾಣೆಗೆ ಕರೆದೊಯ್ದರು.

    ಮತ್ತಿನಲ್ಲಿದ್ದ ಖದೀಮ: ಮಾದಕವಸ್ತುವಿನ ಅಮಲಿನಲ್ಲಿದ್ದ ಖದೀಮ, ಹಿಡಿಯಲು ಬಂದವರ ಮೇಲೆ ಹಲ್ಲೆಗೆ ಮುಂದಾಗಿದ್ದ, ಹಗ್ಗದಿಂದ ಕಟ್ಟಿಹಾಕಿದ್ದರೂ ಬಿಡಿಸಿಕೊಳ್ಳುವ ಸತತ ಪ್ರಯತ್ನ ಮಾಡಿದ್ದ, ಈ ವೇಳೆ ಕಳ್ಳನ ದಾಳಿಯಿಂದ ಕೈಬೆರಳಿಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಹಿಂಜರಿಯದೆ ವಾಸುದೇವ ಅವರು ಒಂಟಿಯಾಗಿ ಸೆಣಸಾಟ ನಡೆಸಿದ್ದರು.

    ಪ್ರಕರಣ ಬಿಚ್ಚಿಟ್ಟ ವಾಸುದೇವಶರ್ಮ: ನಾನು ಹಾಗೂ ಪತ್ನಿ ಮನೆಯ ಕೆಳಗಿನ ಮಹಡಿಯಲ್ಲಿ ಮಲಗಿದ್ದೆವು. ಮನೆಯ ಮೇಲಿನ ಮಹಡಿಯಲ್ಲಿ ಸೊಸೆ ಹಾಗೂ ಮಗ ಮಲಗಿದ್ದರು. ಬೆಳಗಿನ ಜಾವ ಮನೆಯ ಕಾಂಪೌಂಡ್ ಹತ್ತಿ ಒಳಗೆ ನುಗ್ಗಿದ ಕಳ್ಳ ದರೋಡೆಗೆ ಯತ್ನಿಸಿದ್ದ. ಮೊದಲು ಸೊಸೆ ಹಾಗೂ ಮಗ ಪ್ರತಿರೋಧ ವ್ಯಕ್ತಪಡಿಸಿದ್ದರು. ಆದರೆ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ ಶಬ್ದ ಕೇಳಿ ಮೇಲೆ ಬಂದಾಗ ಆ ದೃಶ್ಯ ಕಂಡು ನನಗೂ ಆತಂಕವಾಯಿತು. ಆದರೂ ಆತನಿಂದ ಮಚ್ಚು ಕಸಿದು, ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಲಾಯಿತು. ಇದಕ್ಕೆ ನೆರೆ-ಹೊರೆಯವರು ಸಹಾಯ ಮಾಡಿದರು ಎಂದು ವಾಸುದೇವ ಮೂರ್ತಿ ಪ್ರಕರಣದ ಚಿತ್ರಣ ಬಿಚ್ಚಿಟ್ಟರು.

    ಕೂಲಿಕಾರ್ಮಿಕ ಕಳ್ಳ: ಸಿಕ್ಕಿಬಿದ್ದ ಕಳ್ಳ ಮೂಲತಃ ತಮಿಳುನಾಡಿನ ಥಳಿ ಸಮೀಪದ ಕೊತ್ತನೂರು ನಿವಾಸಿ ಎಂದು ತಿಳಿದುಬಂದಿದೆ.
    ಈ ಹಿಂದೆ 2019ರಲ್ಲಿ ದರೋಡೆ ಪ್ರಕರಣದಲ್ಲಿ ಸರ್ಜಾಪುರ ಠಾಣೆ ಪೊಲೀಸರು ಬಂಧಿಸಿದ್ದರು. ತಮಿಳುನಾಡು ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts