More

    ಕಳಸಾ-ಬಂಡೂರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ

    ಗದಗ: ಅಖಂಡ ಧಾರವಾಡ ಜಿಲ್ಲೆ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕಳಸಾ- ಬಂಡೂರಿ ನೀರಿನ ಯೋಜನೆಯ ವಿಸõತ ಯೋಜನಾ ವರದಿಗೆ ಸರ್ಕಾರ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದನ್ನು ಸ್ವಾಗತಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಬುಧವಾರ ನಗರದ ಹುಯಿಲಗೋಳ ನಾರಾಯಣರಾವ ವರ್ತಳದಲ್ಲಿ ವಿಜಯೋತ್ಸವ ಆಚರಿಸಿದರು.

    ಶ್ರೀರಾಮಸೇನೆಯ ಧಾರವಾಡ ವಿಭಾಗೀಯ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಈ ಯೋಜನೆಗೆ ಕಳೆದ ಹತ್ತಾರು ವರ್ಷಗಳಿಂದ ಒಂದಿಲ್ಲೊಂದು ವಿಘ್ನಗಳು ಬಂದಿದ್ದು, ಮಹದಾಯಿ ನ್ಯಾಯಾಧಿಕರಣದಲ್ಲಿ ರಾಜ್ಯದ ಪರವಾಗಿ ಆದೇಶ ಬಂದ ನಂತರವೂ ಕಾಮಗಾರಿ ಪ್ರಾರಂಭಿಸುವಲ್ಲಿ

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಳಂಬ ಮಾಡಿದ್ದವು. ಇದೀಗ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದ ಬಳಿ ಮಹದಾಯಿ ನದಿಗೆ ಅಣೆಕಟ್ಟು ನಿರ್ವಿುಸಿ ಕೂಡು ಕಾಲುವೆ ಮುಖಾಂತರ 1.72 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಲಪ್ರಭಾ ನದಿಗೆ ತಿರುಗಿಸುವ ಕಳಸಾ ನಾಲಾ ತಿರುವು ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕೂಡಲೆ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನೆರಸೆ ಗ್ರಾಮದ ಬಳಿ ಬಂಡೂರ ಹಳ್ಳಕ್ಕೆ ಅಣೆಕಟ್ಟು ನಿರ್ವಿುಸಿ ಕೂಡು ಕಾಲುವೆ ಮುಖಾಂತರ 2.18 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಮಲಪ್ರಭಾ ನದಿಗೆ ತಿರುಗಿಸುವ ಬಂಡೂರಿ ನಾಲಾ ತಿರುವು ಯೋಜನೆಗೂ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಸ್ವಾಗತಾರ್ಹವಾಗಿದೆ. ಇನ್ನಾದರೂ ರಾಜಕೀಯ ವ್ಯಕ್ತಿಗಳು ಈ ವಿಷಯವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳಬಾರದು ಎಂದು ಹೇಳಿದರು.

    ರಾಜ್ಯ ಸರ್ಕಾರವು ಒಂದು ವರ್ಷದ ಅವಧಿಯನ್ನು ಪೂರ್ಣಗೊಳಿಸುತ್ತಿರುವ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಬಹು ದಿನಗಳ ಬೇಡಿಕೆಯಾಗಿದ್ದ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಕಟಿಬದ್ಧವಾಗಬೇಕು. ಮುಖ್ಯಮಂತ್ರಿ ಅವರು ಈ ಯೋಜನೆಯ ಕಾಮಗಾರಿಯನ್ನು ಆರಂಭಿಸಬೇಕೆಂದು ಒತ್ತಾಯಿಸಿದರು.

    ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಹೇಶ ರೋಖಡೆ, ಮಹಾಂತೇಶ ಪಾಟೀಲ, ಶಿವಯೋಗಿ ಹಿರೇಮಠ, ರವಿ ಕರಬಸಣ್ಣವರ, ಸುನೀಲ ಮುಳ್ಳಾಳ, ಪ್ರತೀಕ ಭೋಸಲೆ, ಪ್ರಕಾಶ ವಾಲ್ಮೀಕಿ, ರಾಜು ಗಾಣಿಗೇರ, ಅನಿಲ ಮುಳ್ಳಾಳ, ಕಿರಣ ಹಿರೇಮಠ, ಈರಣ್ಣ ಗಾಣಿಗೇರ, ಅಕ್ಷಯ ಬಳ್ಳೊಳ್ಳಿ, ಇತರರು ಇದ್ದರು.

    ಸರ್ಕಾರದ ನಿರ್ಣಯಕ್ಕೆ ಶ್ಲಾಘನೆ: ಕಳಸಾ ನಾಲಾ ತಿರುವು ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಸ್ವಾಗತಾರ್ಹ. ಸರ್ಕಾರವು ಒಳ್ಳೆಯ ನಿರ್ಣಯವನ್ನು ತೆಗೆದುಕೊಂಡಿದ್ದು, ಇದರಿಂದ ಉತ್ತರ ಕರ್ನಾಟಕ ಜನರಿಗೆ ಅನುಕೂಲವಾಗಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಸೈಯದ್ ಖಾಲಿದ್ ಕೊಪ್ಪಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts