More

    ಕಳಸದಲ್ಲಿ ಗಿರಿಜಾ ಕಲ್ಯಾಣೋತ್ಸವ ಸಂಭ್ರಮ

    ಕಳಸ: ದಕ್ಷಿಣ ಕಾಶಿ, ಅಗಸ್ಱ ಕ್ಷೇತ್ರ ಕಳಸದ ಕಲಶೇಶ್ವರ ಸ್ವಾಮಿಗೆ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ಗಿರಿಜಾ ಕಲ್ಯಾಣೋತ್ಸವ ನಡೆಸಲಾಯಿತು. ಕಲಶೇಶ್ವರನ ಕಲ್ಯಾಣೋತ್ಸವ ಹಿನ್ನೆಲೆಯಲ್ಲಿ ಪಟ್ಟಣವನ್ನು ಸಂಪೂರ್ಣ ಶೃಂಗರಿಸಲಾಗಿತ್ತು. ದೇವಸ್ಥಾನಕ್ಕೆ ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಧಾರ್ವಿುಕ ವಿಧಿ ವಿಧಾನಗಳನ್ನು ಮುಗಿಸಿ ಶುಕ್ರವಾರ ರಾತ್ರಿ ಮೂರು ಗಂಟೆಗೆ ಗಿರಿಜೆಯೊಂದಿಗೆ ಕಲ್ಯಾಣ ಮಾಡಲಾಯಿತು.

    ಸಂಜೆ ಉಪಾಧಿವಂತರು ವಾದ್ಯ, ಘೊಷಗಳೊಂದಿಗೆ ಅಕ್ಷತೆ ಕೊಟ್ಟು ಕಲ್ಯಾಣಕ್ಕೆ ಊರ ಜನರಿಗೆ ಆಹ್ವಾನ ನೀಡಿದರು. ರಾತ್ರಿ ಈಶ್ವರನ ಎದುರು ಉಂಗುರ, ಉಡುಗೆಗಳನ್ನು ಇಟ್ಟು ಪೂಜಿಸಿ ಪಲ್ಲಕ್ಕಿಯಲ್ಲಿಟ್ಟು ಗಿರಿಜಾಂಬೆ ಬಳಿ ತರಲಾಯಿತು. ನಂತರ ಕಲಶೇಶ್ವರ ದೇವಸ್ಥಾನದಿಂದ ಗಿರಿಜಾಂಬಾ ದೇವಸ್ಥಾನಕ್ಕೆ ತೆರಳಿ ಗಿರಿಜಾಂಬೆ ವಿಗ್ರಹವನ್ನು ಹಿಡಿದುಕೊಂಡು ಹೂ-ಹಿಂಗಾರದೊಂದಿಗೆ ದೀವಟಿಕೆ, ಪಂಚಪತಾಕಿ, ಕಟ್ಟಿಗೆ, ಚೌರಿ, ಮಂಗಳವಾದ್ಯಗಳೊಂದಿಗೆ ವಿಜೃಂಭಣೆಯಿಂದ ಗಿರಿಜಾಂಬೆಯ ದಿಬ್ಬಣವನ್ನು ಕಲಶೇಶ್ವರ ದೇವಸ್ಥಾನಕ್ಕೆ ಕರೆತರಲಾಯಿತು.

    ಸರ್ವಾಂಗ ಸುಂದರಿ ಅಮ್ಮನವರ ಬಳಿ ಬಂದಾಗ ಶಿವನ ಕಡೆಯವರು ದಿಬ್ಬಣವನ್ನು ಎದುರುಗೊಂಡರು. ಗಿರಿಜಾಂಬೆ ವಿವಾಹ ಮಂಟಪಕ್ಕೆ ಬಂದ ಕೂಡಲೇ ತಂತ್ರಿಗಳಿಂದ ನಾಂದಿ, ಪುಣ್ಯಾಹಗಳು ನಡೆದವು. ಮಧುಪರ್ಕ ಪೂಜೆ, ದ್ಯಾನವಾಹನ ಪೂಜೆ ನಡೆದು ಕನ್ಯಾವರಣ ಮಾಡಿ ಮಂಗಳಾಷ್ಟಕವಾಯಿತು. ಈ ಸಮಯದಲ್ಲಿ ಎಡನಾಡಿಯ ಬಾಗಿಲಿಗೆ ತೆರೆ ಹಿಡಿಯಲಾಯಿತು. ಆಗ ಗಿರಿಜಾಂಬೆಯ ಅಡಿಗಳು ಗಿರಿಜಾಂಬ ದೇವಿಯ ವಿಗ್ರಹವನ್ನು ತೆಗೆದುಕೊಂಡು ಕಲಶೇಶ್ವರನ ಬಲಭಾಗದಲ್ಲಿ ಇಟ್ಟು ಧಾರೆ ಎರೆಯುವ ಕಾರ್ಯಕ್ರಮ ನಡೆಸಲಾಯಿತು.

    ಕಂಕಣ ಸಮರ್ಪಣೆಯಾಗಿ ಮಂಗಲ ನೀರಾಜನ, ಸಭಾಪೂಜೆ, ತಾಂಬೂಲ ಪ್ರದಾನ ಬಳಿಕ ಭೂತ ಬಲಿ ಮಹೋತ್ಸವ ನಡೆಯಿತು. ನಂತರ ವಧೂವರ ದಂಪತಿ ದರ್ಶನ ನಡೆದು ಶನಿವಾರ ಮಧ್ಯಾಹ್ನ ಮದುವೆ ಊಟ ಹಾಕಲಾಯಿತು. ತಾಲೂಕು ಖಜಾನೆಯಲ್ಲಿರುವ ದೇವರ ಆಭರಣಗಳನ್ನು ತರಿಸಿ ದೇವರಿಗೆ ತೊಡಿಸಿ ಶಾಸ್ತ್ರಬದ್ಧವಾಗಿ ಕಲಶೇಶ್ವರನಿಗೆ ಕಲ್ಯಾಣವಾಯಿತು. ಕಾರ್ಯಕ್ರಮದಲ್ಲಿ ಕಳಸ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts