More

    ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಿ

    ಶಿರಹಟ್ಟಿ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಚಿಕ್ಕಸವಣೂರ ಗ್ರಾಮಕ್ಕೆ ಶನಿವಾರ ಆಗಮಿಸಿದ್ದ ತಹಸೀಲ್ದಾರ್ ಕೆ.ಆರ್. ಪಾಟೀಲ ಅವರು ಸ್ಥಳೀಯರ ಸಮಸ್ಯೆ ಆಲಿಸಿದರು.

    ಹೊಲಗಳಿಗೆ ಸಂಚರಿಸಲು ಸಮರ್ಪಕ ರಸ್ತೆ ನಿರ್ವಿುಸಬೇಕು. ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ಗ್ರಾಮದ ಸುತ್ತಲಿನ ಕೆಲವೆಡೆ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು ಬಂಡೆಗಳ ಸ್ಪೋಟದ ಶಬ್ಧದಿಂದ ಮನೆಗಳ ಗೋಡೆ ಬಿರುಕು ಬಿಡುತ್ತಿವೆ. ನರಸಿಂಹೇಶ್ವರ ದೇವಸ್ಥಾನಕೆ ಧಕ್ಕೆ ಉಂಟಾಗಿದೆ ಈ ಬ ಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸದೆ ಸಂತ್ರಸ್ತರಿಗೆ ಶೀಘ್ರವೇ ಬೆಳೆಹಾನಿ ಪರಿಹಾರ ವಿತರಿಸಬೇಕು ಎಂದು ಗ್ರಾಮದ ರಾಕೇಶ ಪಾಟೀಲ, ಕಿರಣ ಅಂಗಡಿ, ಫಕೀರೇಶ ಸನದಿ, ರಮೇಶ ಶ್ಯಾಗೋಟಿ ಇತರರು ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು.

    ಗಣಿಗಾರಿಕೆ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುತ್ತದೆ ತಹಸೀಲ್ದಾರ್ ಭರವಸೆ ನೀಡಿದರು. ಬೆಳೆಹಾನಿ ಪ್ರಮಾಣಕ್ಕನುಗುಣವಾಗಿ ಪರಿಹಾರ ಹಣ ಜಮೆ ಮಾಡಲಾಗಿದೆ. ಅನ್ಯಾಯವಾಗಿರುವ ಬಗ್ಗೆ ಕೆಲವರು ದೂರು ಸಲ್ಲಿಸಿದ್ದು, ಸದರಿ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದರು.

    ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ 70, ಕಂದಾಯ 21, ಕೃಷಿ 7 ಸೇರಿದಂತೆ ವಿವಿಧ ಸಮಸ್ಯೆ ಪರಿಹಾರಕ್ಕಾಗಿ ಒಟ್ಟು 120 ಅರ್ಜಿಗಳು ಸ್ವೀಕೃತವಾದವು. ಗ್ರಾಪಂ ಅಧ್ಯಕ್ಷೆ ನಿಂಬವ್ವ ಚಳಕೇರಿ, ತಾಪಂ ಇಒ ಎಸ್.ನಾರಾಯಣ, ಗ್ರಾಪಂ ಉಪಾಧ್ಯಕ್ಷ ಕಾವ್ಯಾ ಅಂಗಡಿ, ಸದಸ್ಯ ಫಕೀರೇಶ ಸನದಿ, ನಾಗರಡ್ಡಿ ಕನಕರಡ್ಡಿ, ಸೋಮರಡ್ಡಿ ಗೊಡಚಳ್ಳಿ, ಕೊಟ್ರಗೌಡ ಪಾಟೀಲ, ಮಲ್ಲಪ್ಪ ಗೋಕಾವಿ, ಗೋವಿಂದಪ್ಪ ಶ್ಯಾಗೋಟಿ, ರಾಕೇಶ ಪಾಟೀಲ, ಗಿರೀಶ ಕೋಡಬಾಳ, ಎಸ್.ಎಫ್. ಮಠದ, ಪಿಡಿಒ ಬಸವರಾಜ ಸಂಶಿಮ, ಕಂದಾಯ ನಿರೀಕ್ಷಕ ಮಹಾತೇಶ ಮುಗದುಮ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts