More

    ಕಲಾವಿದರಿಗೆ ಮುಪ್ಪು ಕಲೆಗಲ್ಲ

    ಕಲಬುರಗಿ: ಕಲಾವಿದರಿಗೆ ಮುಪ್ಪಾಗಬಹುದು. ಆದರೆ ಕಲೆಗೆ ಮುಪ್ಪಿಲ್ಲ ಎಂದು ಹಿರಿಯ ರಂಗಕರ್ಮಿ, ಕನ್ನಡ ಚಿತ್ರರಂಗದ ಕಲಾವಿದೆ ಮಾಲತಿಶ್ರೀ ಮೈಸೂರು ಅಭಿಪ್ರಾಯಪಟ್ಟರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಂಗಾಂತರಂಗ (ಸಂಸ್ಕೃತಿ ಸಂಭ್ರಮದಲ್ಲಿ ರಂಗಕಲಾವಿದರು) ವಿಶೇಷ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಾಹಿತ್ಯ, ರಂಗಭೂಮಿ ಕ್ಷೇತ್ರ ಸಮಾಜ ಸುಧಾರಣೆ ಕೆಲಸ ಮಾಡಬೇಕು. ಸಿನಿಮಾ ರೀಲು, ರಂಗಭೂಮಿ ರೀಯಲ್ಲು ಎಂಬುದು ಎಲ್ಲರಿಗೂ ಗೊತ್ತಿದೆ. ಸಿನಿಮಾ ಕ್ಷೇತ್ರದ ಬಹುತೇಕ ಕಲಾವಿದರು ರಂಗಭೂಮಿ ಮೂಲಕ ಬಂದವರೇ ಎಂದರು.

    1980ರಲ್ಲಿ ಕಲಬುರಗಿ ನಾಟಕ ಕಂಪನಿಯಲ್ಲಿ ಪಾತ್ರ ನಿರ್ವಹಿಸಿದ್ದನ್ನು ನೆನಪಿಸಿಕೊಂಡ ಅವರು, ಆ ದಿನದಿಂದ ಈ ನೆಲದ ಸಂಬಂಧ ಗಟ್ಟಿಯಾಗಿದೆ. ನನಗೀಗ 68 ವರ್ಷ. ಆದರೆ 16 ವರ್ಷ ಬಾಲಕಿ ಪಾತ್ರ ನೀಡಿದರೂ ಯಶಸ್ವಿಯಾಗಿ ನಿರ್ವಹಿಸಬಲ್ಲೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

    ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿ, ಕಲಬುರಗಿಗೆ ಆಗಮಿಸುವ ಶ್ರೇಷ್ಠ ವ್ಯಕ್ತಿಗಳನ್ನು ಕನ್ನಡದ ಅಂಗಳಕ್ಕೆ ಆಹ್ವಾನಿಸಿ ಉತ್ತಮ ಕಾರ್ಯಕ್ರಮ ಮಾಡಲಾಗುತ್ತಿದೆ. ನಾಟಕ ಕಲಾವಿದರಿಗೆ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸುವ ಯೋಜನೆ ಇದೆ ಎಂದರು.

    ಗುಲ್ಬರ್ಗ ವಿಶ್ವವಿದ್ಯಾಲಯ ಕುಲಸಚಿವ ಡಾ.ವಿ.ಟಿ. ಕಾಂಬಳೆ ಮಾತನಾಡಿ, ಸಾಹಿತ್ಯ, ಕಲೆ, ಸಂಸ್ಕೃತಿ ಬೆಳೆದು ಬರಬೇಕು. ಸಮಾಜದ ಪರಿವರ್ತನೆಯಲ್ಲಿ ಈ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದು ಹೇಳಿದರು.

    ಹಿರಿಯ ಕಥೆಗಾರ ಮಹಾಂತೇಶ ನವಲಕಲ್, ದಿಶಾ ಪದವಿಪೂರ್ವ ಕಾಲೇಜಿನ ಮುಖ್ಯಸ್ಥ ಶಿವಾನಂದ ಖಜೂರ್ಗಿ ಭಾಗವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ನಿರೂಪಣೆ ಮಾಡಿದರು. ಸಿ.ಎಸ್. ಆನಂದ ಸ್ವಾಗತಿಸಿದರು. ರವೀಂದ್ರಕುಮಾರ ಬಂಟ್ನಳ್ಳಿ ವಂದಿಸಿದರು. ಕಲಾವಿದೆ ಮಾಲತಿಶ್ರೀಯವರನ್ನು ಕಸಾಪದಿಂದ ಗೌರವಿಸಲಾಯಿತು. ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯ ಕಲಾವಿದರನ್ನೂ ಸತ್ಕರಿಸಲಾಯಿತು.

    ರಂಗಭೂಮಿ ಒಂದು ದೇವಸ್ಥಾನವಿದ್ದಂತೆ. ಇದು ಮೊದಲ ಪಾಠಶಾಲೆಯೂ ಹೌದು. ಕಲೆ, ಸಾಹಿತ್ಯ, ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿ ಕೆಲಸ ನಿರ್ವಹಿಸುವ ಮೂಲಕ ಸಮಾಜದಲ್ಲಿ ಸುಧಾರಣೆ ತರುವ ಪ್ರಾಮಾಣಿಕ ಪ್ರಯತ್ನ ನಿರಂತರ ನಡೆಯಬೇಕು.
    | ಮಾಲತಿಶ್ರೀ ಮೈಸೂರು
    ಹಿರಿಯ ರಂಗಕರ್ಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts