More

    ಕಲಬುರಗಿಯಿಂದಲೇ ಹಾಸನ ರೈಲು ಓಡಾಟ

    ಕಲಬುರಗಿ: ಬೋರುಟಿ-ದುಧನಿ-ಕುಲಾಲಿ ಮಧ್ಯೆ ರೈಲು ಮಾರ್ಗ ಡಬ್ಲಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ 17ರಿಂದ 26ರವರೆಗೆ ಸೊಲ್ಲಾಪುರದಿಂದ ಹಾಸನ ರೈಲು ಸಂಚಾರ ರದ್ದುಗೊಳಿಸಿದ್ದನ್ನು ರೈಲ್ವೆ ಇಲಾಖೆ ಕೈಬಿಟ್ಟಿದೆ. ಬದಲಿಗೆ ಜನರ ಬೇಡಿಕೆಯಂತೆ ಕಲಬುರಗಿಯಿಂದಲೇ ಓಡಿಸಲು ನಿರ್ಧರಿಸಿ ಆದೇಶ ಹೊರಡಿಸಿದೆ.
    18ರಿಂದ 27ರವರೆಗೆ ಸೊಲ್ಲಾಪುರ-ಹಾಸನ ಎಕ್ಸ್ಪ್ರೆಸ್ ರೈಲು ಕಲಬುರಗಿಯಿಂದಲೇ ಸಂಚರಿಸಲಿದೆ. 11312 ಸಂಖ್ಯೆಯ ಹಾಸನ-ಸೊಲ್ಲಾಪುರ ಎಕ್ಸ್ಪ್ರೆಸ್ 18ರಿಂದ 27ರವರೆಗೆ ಕಲಬುರಗಿವರೆಗೆ ಹಾಗೂ ಸೊಲ್ಲಾಪುರ ಹಾಸನ ಎಕ್ಸ್ಪ್ರೆಸ್ (11311) ರೈಲು 17 ರಿಂದ 26ರವರೆಗೆ ಕಲಬುರಗಿಯಿಂದಲೇ ಹಾಸನವರೆಗೆ ಸಂಚರಿಸಲಿದೆ ಎಂದು ಮಧ್ಯ ರೈಲ್ವೆ ಉನ್ನತಾಧಿಕಾರಿ ಸಂಜಯಕುಮಾರ್ ಆದೇಶ ಹೊರಡಿಸಿದ್ದಾರೆ ಎಂದು ಎಚ್ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ ತಿಳಿಸಿದ್ದಾರೆ.
    ಸೊಲ್ಲಾಪುರ-ಹಾಸನ ರೈಲು ರದ್ದು ಬದಲಿಗೆ ಕಲಬುರಗಿಯಿಂದಲೇ ಓಡಿಸಬೇಕು ಎಂದು ರೈಲ್ವೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದು ಫಲ ನೀಡಿದೆ. ಇದರಿಂದಾಗಿ ಹತ್ತು ದಿನ ಪ್ರಯಾಣಿಕರ ಪರದಾಟ ತಪ್ಪಿದಂತಾಗಿದೆ. ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟಿರುವುದಕ್ಕೆ ರೈಲ್ವೆ ಅಧಿಕಾರಿಗಳಿಗೆ ಕಲಬುರಗಿ ಜನತೆ ಪರವಾಗಿ ಪಪ್ಪಾ ಕೃತಜ್ಞತೆ ಸಲ್ಲಿಸಿದ್ದಾರೆ.
    ಡಬ್ಲಿಂಗ್ ನೆಪದಲ್ಲಿ ರೈಲು ಸಂಚಾರವನ್ನು ಮಧ್ಯ ರೈಲ್ವೆ ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರದ್ದು ಬದಲಿಗೆ ಕಲಬುರಗಿಯಿಂದ ಓಡಿಸಬೇಕು ಎಂಬ ಒತ್ತಡ ಹೆಚ್ಚಿತ್ತು. ಹಲವು ಸಂಘಟನೆಯವರು ಸೊಲ್ಲಾಪುರ ರೈಲ್ವೆ ಡಿಆರ್ಎಂಗೆ ಪತ್ರ ಸಲ್ಲಿಸುವುದರ ಜತೆಗೆ ಹೈದರಾಬಾದ್ ಕರ್ನಾಟಕ ರೈಲ್ವೆ ಅಭಿವೃದ್ಧಿ ಸಮಿತಿಯವರು ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ ಅಭಿಯಾನ ಶುರು ಮಾಡಿದ್ದರು.

    ಡಿಆರ್ಎಂಗೆ ಸಮಿತಿ ಮನವಿ
    ಹೈಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ಪ್ರಧಾನ ಕಾರ್ಯದರ್ಶಿ ಮನೀಷ್ ಜಾಜೂ ಸೊಲ್ಲಾಪುರಕ್ಕೆ ತೆರಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿಪತ್ರ ಸಲ್ಲಿಸಿ, ಸೊಲ್ಲಾಪುರ-ಕಲಬುರಗಿ-ಹಾಸನ ರೈಲು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಾರದು. ಕಲಬುರಗಿಯಿಂದಲೇ ಓಡಿಸಬೇಕು ಎಂದು ಆಗ್ರಹಿಸಿದ್ದರು. ಹಿಂದೆ ಹಲವು ಸಲ ಈ ರೈಲು ಕಲಬುರಗಿಯಿಂದ ಓಡಿದೆ. ಕೋಚ್ಗಳ ನಿರ್ವಹಣೆ ಸೇರಿ ಎಲ್ಲ ಸೌಕರ್ಯ ಕಲಬುರಗಿಯಲ್ಲಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಸ ರೈಲುಗಳನ್ನು ಸಹ ಕಲಬುರಗಿಯಿಂದ ಓಡಿಸಬೇಕು. ಕೆಲ ರೈಲುಗಳಿಗೆ ನಿಲುಗಡೆ ನೀಡಬೇಕು. ಕೆಲವನ್ನು ಸೊಲ್ಲಾಪುರದಿಂದ ಕಲಬುರಗಿವರೆಗೆ ವಿಸ್ತರಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿರುವುದನ್ನು ದಸ್ತಿ ಸ್ವಾಗತಿಸಿದ್ದಾರೆ.

    ರೈಲು ರದ್ದು ಕೈಬಿಟ್ಟಿದ್ದು ಸ್ವಾಗತ
    ಕಲಬುರಗಿ-ಸೊಲ್ಲಾಪುರ ನಡುವೆ ಡಬ್ಲಿಂಗ್ ಕಾಮಗಾರಿ ನಡೆದಿದ್ದರಿಂದ ಅಡಚಣೆ ಉಂಟಾಗುವುದು ಸಹಜ. ಆದರೆ ಇದೇ ನೆಪವೊಡ್ಡಿ ರೈಲು ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದು ಸರಿಯಲ್ಲ ಎಂದು ಎಸ್ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಆಕ್ಷೇಪಿಸಿದ್ದರು. ಇದೀಗ ಹತ್ತು ದಿನ ಕಲಬುರಗಿಯಿಂದಲೇ ಓಡಿಸಲು ಆದೇಶ ಹೊರಡಿಸುವ ಮೂಲಕ ಜನಸಾಮಾನ್ಯರಿಗೆ ತೊಂದರೆ ತಪ್ಪಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ್, ಉಪಾಧ್ಯಕ್ಷ ಶರಣು ಪಪ್ಪಾ, ಕಾರ್ಯದರ್ಶಿ ಶಶಿಕಾಂತ ಪಾಟೀಲ್ ಮತ್ತು ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ರವಿಕುಮಾರ ಸರಸಂಬಿ, ಸುನೀಲ್ ಕುಲಕರ್ಣಿ ಮೊದಲಾದವರು ಇಲಾಖೆ ಕ್ರಮವನ್ನು ಸ್ವಾಗತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts