More

    ಕರ್ಪೂರಿ ಠಾಕೂರ್‌ಗೆ ಭಾರತರತ್ನ ಸ್ವಾಗತಾರ್ಹ

    ಚಿತ್ರದುರ್ಗ: ಅತ್ಯಂತ ಹಿಂದುಳಿದ ಸವಿತಾ ಸಮಾಜ, ಬಡ ಕುಟುಂಬದಲ್ಲಿ ಜನಿಸಿ ಬಿಹಾರ ಮುಖ್ಯಮಂತ್ರಿಯಾಗಿ ಜನಪರ ಕಾರ್ಯಕ್ರಮ ರೂಪಿಸಿದ ಜನನಾಯಕ ದಿ.ಕರ್ಪೂರಿ ಠಾಕೂರ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಭಾರತರತ್ನ ನೀಡಿರುವುದು ಅತ್ಯಂತ ಸ್ವಾಗತಾರ್ಹ ಎಂದು ಸವಿತಾ ಸಮಾಜದ ಮುಖಂಡ ಎನ್.ಡಿ.ಕುಮಾರ್ ತಿಳಿಸಿದರು.

    ಪತ್ರಿಕಾ ಭವನದಲ್ಲಿ ಬುಧವಾರ ಸವಿತಾ ಸಮಾಜದಿಂದ ನಡೆದ ಕರ್ಪೂರಿ ಠಾಕೂರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

    ಕರ್ಪೂರಿ ಠಾಕೂರ್ ಅವರು ರಾಮ ಮನೋಹರ ಲೋಹಿಯಾ ಅವರ ಅನುಯಾಯಿ ಆಗಿದ್ದರು. ಉಳುವವನೇ ಭೂಮಿಯ ಒಡೆಯ ಪದ್ಧತಿಯನ್ನು ತುರ್ತು ಸಂದರ್ಭದ ವೇಳೆ ಸಮನಾಗಿ ಹಂಚಿಕೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸರ್ಕಾರಿ ಉದ್ಯೋಗದಲ್ಲಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಪ್ರಯತ್ನ ಮಾಡಿದ್ದರು. ಸಮುದಾಯ ಅತ್ಯಂತ ಹಿಂದುಳಿದಿದ್ದು, ಎಸ್ಸಿ ಮೀಸಲು ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

    ಚಿತ್ರದುರ್ಗದಲ್ಲಿ ನಡೆಯಲಿರುವ ಅಹಿಂದ ಸಮಾವೇಶದಲ್ಲೂ ಸಾಮಾಜಿಕ ನ್ಯಾಯದ ಹರಿಕಾರರಾದ ಠಾಕೂರ್ ಅವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದರು.

    ಕಾರ್ಯದರ್ಶಿ ಜಿ.ಎ.ಲಿಂಗರಾಜು ಮಾತನಾಡಿ, ನಮ್ಮ ಸಮಾಜ ಸುವರ್ಣ ಅಕ್ಷರದಲ್ಲಿ ಬರೆದಿಡುವ ಸುದಿನ ಇದಾಗಿದ್ದು, ಭಾರತರತ್ನ ನೀಡಿರುವ ಕೇಂದ್ರ ಸರ್ಕಾರಕ್ಕೆ ಸವಿತಾ ಸಮಾಜ ಸದಾ ಚಿರಋಣಿ ಎಂದರು.

    1970ರಲ್ಲಿ ಅಧಿಕಾರಕ್ಕೆ ಬಂದು 8ನೇ ತರಗತಿಯವರೆಗೂ ಉಚಿತ ಶಿಕ್ಷಣ ಜಾರಿಗೊಳಿಸಿದರು. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದರು. ಶೇ 26ಕ್ಕೆ ಮೀಸಲಾತಿ ಹೆಚ್ಚಿಸಿದರು. ಮುಂದಿನ ದಿನಗಳಲ್ಲಿ ಠಾಕೂರ್ ಜಯಂತಿ ದೇಶ ಮತ್ತು ರಾಜ್ಯದಲ್ಲಿ ಆಚರಿಸಲು ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

    ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಎಲ್ಲಾ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಧೀಮಂತ ನಾಯಕ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ಗೌರವ ಸಂದಿದೆ. ಕೇಂದ್ರದ ಈ ತೀರ್ಮಾನಕ್ಕೆ ಇಡೀ ಸಮಾಜ ಆಭಾರಿಯಾಗಿದ್ದೇವೆ ಎಂದು ತಿಳಿಸಿದರು.

    ಉಪಾಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಪ್ರಸನ್ನ, ರಂಜಿತ್, ಘನಶ್ಯಾಮ್, ಸಂತೋಷ್, ಅನಿಲ್, ಜಿ.ಜಿ.ಸಾಯಿನಾಥ್, ಮಾರಣ್ಣ, ವೇಣುಗೋಪಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts