More

    ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ-ಅಮಿತ್ ಷಾ

    ಚಿಕ್ಕೋಡಿ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಗೃಹ ಸಚಿವ ಅಮಿತ್ ಷಾ ಮನವಿ ಮಾಡಿದರು.
    ಶನಿವಾರ ಆರ್‌ಡಿ ಹೈಸ್ಕೂಲ್ ಮೈದಾನದಲ್ಲಿ ಹಾಕಲಾಗಿದ್ದ ಭವ್ಯ ಶಾಮಿಯಾನದಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
    ಸರ್ಜಿಕಲ್ ದಾಳಿಯ ಮೂಲಕ ಪಾಕ್ ದೇಶದಲ್ಲಿ ನುಗ್ಗಿ ಭಯೋತ್ಪಾದಕರನ್ನು ಹೊಡೆದುರಳಿಸಿ, ದೇಶದಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದನೆಯನ್ನು ನಿಯಂತ್ರಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಈಗ ಮರಕಳಿಸುತ್ತಿದೆ. ಕಾಂಗ್ರೆಸ್‌ನ ರಾಹುಲ್ ಬಾಬಾ ಅವರು ನೀಡುವ ಸುಳ್ಳು ಆಶ್ವಾಸನೆಗಳಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದರು. ಮಣಿಪುರ, ನಾಗಲ್ಯಾಂಡ್, ಗುಜರಾತ, ಉತ್ತರ ಪ್ರದೇಶ ಸೇರಿದಂತೆ ಯಾವ,ಯಾವ ರಾಜ್ಯದಲ್ಲಿ ಹೋಗಿ ಕಾಂಗ್ರೆಸ್‌ನವರು ಸುಳ್ಳು ಆಶ್ವಾಸನೆ ನೀಡಿದ್ದಾರೆಯೋ? ಅಲ್ಲೆಲ್ಲ ಕಾಂಗ್ರೆಸ್ ಸೋತಿದೆ. ಇಲ್ಲಿಯೂ ಭರವಸೆ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಈಗ ಸುಳ್ಳು ಗ್ಯಾರೆಂಟಿ ಕಾರ್ಡ್ ಹಂಚುತ್ತಿದ್ದಾರೆ. ಅವರು ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರೆಂಟಿ ಯೋಜನೆಗಳನ್ನು ಲೆಕ್ಕ ಹಾಕಿದರೇ ಅದು ಕರ್ನಾಟಕದ ಬಜೆಟ್‌ಕ್ಕಿಂತ ಹೆಚ್ಚಾಗಲಿದೆ. ಹಾಗಾದರೇ, ಶಾಲಾ ಶಿಕ್ಷಕರಿಗೆ, ಪೊಲೀಸರಿಗೆ ವೇತನ ಎಲ್ಲಿಂದ ಕೊಡ್ತಾರೆ?, ಸರ್ಕಾರ ಹೇಗೆ ನಡೆಸುತ್ತಾರೆ ಎಂದು ಅಮಿತ್ ಷಾ ಪ್ರಶ್ನಿಸಿದರು. ಮುಂಬರುವ ಮೇ. 10ರಂದು ಕಿತ್ತೂರ ಕರ್ನಾಟಕದ ಕಲ್ಯಾಣಕ್ಕಾಗಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಿಸುವುದರ ಮೂಲಕ ಬಿಜೆಪಿಗೆ ಬಲ ನೀಡಬೇಕು ಎಂದರು.
    ಹಿಂದುತ್ವ ಪ್ರಥಮ ಆದ್ಯತೆ:
    ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಮಾತನಾಡಿ, ಕಾಂಗ್ರೆಸ್‌ನವರು ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳುತ್ತಿದ್ದಾರೆ. ಅವರು ತಾಕತ್ತಿದ್ದರೇ, ಬ್ಯಾನ್ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.ತಾವು ಈ ಚುನಾವಣೆಯಲ್ಲಿ ಗೆದ್ದು ಬಂದರೇ ಚಿಕ್ಕೋಡಿ ತಾಲೂಕಿನಾದ್ಯಂತವಿರುವ ಎಲ್ಲ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವುದು ಮತ್ತು ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವುದೇ ನನ್ನ ಧ್ಯೇಯವಾಗಿದೆ ಎಂದರು.
    ಜೋಡೆತ್ತಿನ ಬಲ:
    ನಮಗೀಗ ಜೋಡೆತ್ತಿನ ಬಲ ಬಂದಿದೆ. ಕಳೆದ 25 ವರ್ಷಗಳಿಂದ ಭಾರತೀಯ ಜನತಾ ಪಕ್ಷ ಚಿಕ್ಕೋಡಿಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ನಮಗೀಗ ಜೋಡೆತ್ತಿನ ಬಲ ಬಂದಿದೆ ಎಂದು ಮಹಾಂತೇಶ ಕವಟಗಿಮಠ ಹೇಳಿದರು. ಸಂಸದರಾಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ರಮೇಶ ಕತ್ತಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಮಹಾಲಕ್ಷ್ಮೀ ಏತ ನೀರಾವರಿ ಸೇರಿದಂತೆ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿದ್ದೇವೆ ಎಂದು ಸುಳ್ಳು ಹೇಳುವ ನಾಯಕರನ್ನು ಈ ಬಾರಿ ಸೋಲಿಸಬೇಕು ಎಂದು ಕವಟಗಿಮಠ ಮನವಿ ಮಾಡಿದರು.
    ಬಿಜೆಪಿ ಗೆಲ್ಲಿಸಲು ಜೊಲ್ಲೆ ಮನವಿ:

    ಈ ಬಾರಿ ಚಿಕ್ಕೋಡಿ-ಸದಲಗಾ ಅಭ್ಯರ್ಥಿಯಾಗಿ ಕಣಕ್ಕೀಳಿದಿರುವ ರಮೇಶ ಕತ್ತಿ ಅವರನ್ನು ಗೆಲ್ಲಿಸಬೇಕು ಎಂದು ಅಣ್ಣಾಸಾಹೇಬ ಜೊಲ್ಲೆ ಅವರು ಮನವಿ ಮಾಡಿದರು.ವೇದಿಕೆ ಮೇಲೆ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಬಿಜೆಪಿ ಮುಖಂಡ ಎಂ.ಬಿ.ಝಿರಲಿ, ಹಾಲಸಿದ್ಧನಾಥ ಕಾರ್ಖಾಣೆ ಅಧ್ಯಕ್ಷ ಚಂದ್ರಕಾಂತ ಕೊಠಿವಾಲೆ, ಸತೀಶ ಅಪ್ಪಾಜಿಗೋಳ, ಪ್ರಕಾಶ ಪಾಟೀಲ, ಶಾಂಭವಿ ಅಶ್ವತ್ಥಪುರ, ಸಂಜಯ ಪಾಟೀಲ, ಮಾಜಿ ಶಾಸಕ ಬಾಳಸಾಹೇಬ ವಡ್ಡರ್ ಜಗದೀಶ ಕವಟಗಿಠ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts