More

    ಕರೊನಾ ಹೆಮ್ಮಾರಿ ಆತಂಕದ ನಡುವೆಯೇ ಡೆಂಘೆ ಉಲ್ಬಣ

    ಕಾರವಾರ: ಕರೊನಾ ಭಯದ ನಡುವೆಯೇ ಜಿಲ್ಲೆಯಲ್ಲಿ ಈಗ ಡೆಂಘ ಉಲ್ಬಣಿಸಿದೆ.

    ಜಿಲ್ಲೆಯಲ್ಲಿ ಈ ವರ್ಷ ಜನವರಿಯಿಂದ 122 ಶಂಕಿತರ ಮಾದರಿ ಪರಿಶೀಲಿಸಲಾಗಿದ್ದು, ಇದುವರೆಗೆ 21 ಜನರಲ್ಲಿ ರೋಗ ಇರುವುದು ಖಚಿತವಾಗಿದೆ. ಮಳೆ ಬೀಳುತ್ತಿರುವುದರಿಂದ ನೀರು ನಿಂತು ಲಾರ್ವಾ ಉತ್ಪತ್ತಿ ಹೆಚ್ಚಾಗಿ ರೋಗ ಉಲ್ಬಣಿಸುವ ಆತಂಕ ಹೆಚ್ಚಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.

    ಜಿಲ್ಲೆಯ ಕಾರವಾರ, ಹೊನ್ನಾವರ ಹಾಗೂ ಮುಂಡಗೋಡಿನಲ್ಲಿ ಡೆಂಘೆ ಪ್ರಕರಣಗಳು ಕಂಡುಬಂದಿವೆ.

    ಕಾರವಾರ ತಾಲೂಕಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೈತಖೋಲ್​ನಲ್ಲಿ ಹೊರರಾಜ್ಯದ ಮೀನುಗಾರರಲ್ಲಿ ಡೆಂಘೆ ರೋಗ ಕಂಡುಬಂದಿತ್ತು. ಇವರು ಲಾಕ್​ಡೌನ್​ನಿಂದ ಕೆಲ ದಿನ ಸುಮಾರು 120 ಬೋಟ್​ಗಳಲ್ಲೇ ವಾಸವಾಗಿದ್ದರು. ಬೋಟ್​ಗಳಲ್ಲಿನ ಟ್ಯಾಂಕ್​ಗಳಲ್ಲಿ ನೀರು ಶೇಖರಣೆಗೊಂಡಿತ್ತು, ಇದರಲ್ಲಿ ಲಾರ್ವಾ ಉತ್ಪತ್ತಿಯಾಗಿರುವುದರಿಂದ ರೋಗ ಹರಡಿದೆ ಎಂದು ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಕ್ಯಾ. ರಮೇಶರಾವ್ ತಿಳಿಸಿದ್ದಾರೆ.

    ಹೊನ್ನಾವರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲ್ಕೋಡಿನ ಕಾನಕ್ಕಿ ಹಾಗೂ ಕೆಳಗಿನಕೇರಿ ಗ್ರಾಮಗಳಲ್ಲಿ ಡೆಂಘೆ ಪ್ರಕರಣಗಳು ವರದಿಯಾಗಿವೆ. ಈ ಪ್ರದೇಶದಲ್ಲಿ ಅಡಕೆ ತೋಟಗಳಲ್ಲಿ ಬಿದ್ದಿರುವ ಹಾಳೆಗಳಲ್ಲಿ ನೀರು ಸಂಗ್ರಹವಾಗಿ ಡೆಂಘ ಹರಡುವ ಈಡೀಸ್ ಸೊಳ್ಳೆಗಳು ಉತ್ಪತ್ತಿಯಾಗಿದ್ದವು.

    ಇನ್ನು ಮುಂಡಗೋಡಿನ ಅರಿಶೀನಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚೌಡಳ್ಳಿ ಗ್ರಾಮದಲ್ಲಿ ಜನ ಅಸಮರ್ಪಕವಾಗಿ ನೀರು ಸಂಗ್ರಹ ಮಾಡಿದ್ದರಿಂದ ಡೆಂಘೆ ಪ್ರಕರಣಗಳು ವರದಿಯಾಗಿವೆ.

    ಇಂದು ರಾಷ್ಟ್ರೀಯ ಡೆಂಘೆ ದಿನ: ಮೇ 16ರಂದು ರಾಷ್ಟ್ರೀಯ ಡೆಂಘ ದಿನ ಎಂದು ಆಚರಿಸಲಾಗುತ್ತದೆ. ಈ ಬಾರಿ ಲಾಕ್​ಡೌನ್ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳಿಲ್ಲ. ‘ಡೆಂಘ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಪ್ರಮುಖ’ ಎಂಬ ಘೊಷ ವಾಕ್ಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.

    ಡೆಂಘ ವರದಿಯಾದ ಪ್ರದೇಶಗಳಲ್ಲಿ ಇಲಾಖೆಯು ಈ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಿದೆ. ನಿರಂತರವಾಗಿ ಈ ಪ್ರದೇಶಗಳಲ್ಲಿ ಜ್ವರ ಸಮೀಕ್ಷೆ , ಲಾರ್ವಾ ಸಮೀಕ್ಷೆ ಹಾಗೂ ಆರೋಗ್ಯ ಶಿಕ್ಷಣವನ್ನು ನಡೆಸಲಾಗಿದೆ. ಸ್ಥಳೀಯ ಪಂಚಾಯತಿ ಹಾಗೂ ನಗರಸಭೆಯ ಸಹಕಾರದಿಂದ , ಫಾಗಿಂಗ್ ಅನ್ನು ನಡೆಸಲಾಗಿದೆ. ಎಲ್ಲಾ ನಿಯಂತ್ರಣ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಕೈಗೊಳ್ಳಲಾಗಿದೆ. ಡಾ. ರಮೇಶ ರಾವ್ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts