More

    ಕರೊನಾ ಸೋಂಕಿತರ ವರದಿ ಫಟಾಫಟ್

    ಹುಬ್ಬಳ್ಳಿ: ಕರೊನಾ ಸೋಂಕಿತ ವ್ಯಕ್ತಿಯ ಗಂಟಲ ದ್ರವ ಮಾದರಿ ಹೊರ ತೆಗೆಯುವುದು, ಪರೀಕ್ಷಿಸುವುದು, ಪರೀಕ್ಷಾ ವರದಿ ಶೀಘ್ರ ಪಡೆಯುವುದು…

    ಹೀಗೆ ಫಟಾಫಟ್ ಕೆಲಸ ಇಲ್ಲಿನ ಕಿಮ್್ಸ ಮೈಕ್ರೋಬಯಾಲಜಿ ವಿಭಾಗದಲ್ಲಿ ಶುರುವಾಗಿದೆ. ಏ. 7ರಂದು ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ಕೌನ್ಸಿಲ್) ಒಪ್ಪಿಗೆ ನೀಡುತ್ತಿದ್ದಂತೆ ಕರೊನಾ ಸೋಂಕಿತರ ಪರೀಕ್ಷೆಗೆ ಬಹಳಷ್ಟು ಅನುಕೂಲವಾಗಿದೆ.

    ಈ ಮೊದಲು ಶಿವಮೊಗ್ಗದ ಲ್ಯಾಬ್​ಗೆ ಸೋಂಕಿತರ ಗಂಟಲು ದ್ರವ ಮಾದರಿಯನ್ನು ಕಳುಹಿಸಿಕೊಡಬೇಕಿತ್ತು. ವರದಿಗಾಗಿ ಒಂದು ದಿನ ಕಾಯಬೇಕಿತ್ತು. ಈಗ ಇಲ್ಲಿಯೇ ಕೋವಿಡ್ 19 ಲ್ಯಾಬ್ ಬಂದಿರುವುದರಿಂದ ಸೋಂಕಿತರ ವರದಿ 6 ಗಂಟೆಯಲ್ಲಿಯೇ ತಜ್ಞರ ಕೈ ಸೇರಲಿದೆ. ಅಲ್ಲದೆ, ನಿತ್ಯ 40ಕ್ಕೂ ಹೆಚ್ಚು ಜನರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬಹುದು.

    ಮಲ್ಟಿಡಿಸ್ಸಿಪ್ಲೇನರಿ ರಿಸರ್ಚ್ ಯುನಿಟ್​ನಲ್ಲಿಯೇ ಈಗ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಯುತ್ತಿದೆ. ಧಾರವಾಡ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿಯಿಂದ ಇನ್ನಷ್ಟು ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗುತ್ತಿದೆ. ಇದರಿಂದ ಸಿಬ್ಬಂದಿ ಕೊರತೆಯೂ ನೀಗಲಿದೆ. ಸದ್ಯ ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವಿಭಾಗದ ಸಿಬ್ಬಂದಿ ತಯಾರಾಗಿದ್ದಾರೆ.

    ಹೇಗೆಲ್ಲ ನಡೆಯುತ್ತದೆ ಪರೀಕ್ಷೆ?

    ವ್ಯಕ್ತಿಯಲ್ಲಿನ ಪಿಸಿಆರ್ (ಪಾಲಿಮರೇಸ್ ಚನ್ ರಿಯಾಕ್ಷನ್) ಪರೀಕ್ಷೆ ಪಡೆಯಬೇಕು. ನಂತರ ಮೂಗು ಮತ್ತು ಗಂಟಲು ಮಧ್ಯದ ದ್ರವವನ್ನು ಪಡೆಯಬೇಕು. ಪಡೆದ ದ್ರವವನ್ನು ಸುರಕ್ಷಿತವಾಗಿ ವೈರಲ್ ಟ್ರಾನ್ಸ್​ಪೋರ್ಟ್ ಮೀಡಿಯಾ ಮೂಲಕ ಕೊಂಡೊಯ್ಯಬೇಕು. ತಣ್ಣಗಿನ ವಾತಾವರಣದಲ್ಲಿ ಅದರ ಆಯುಷ್ಯ ಜಾಸ್ತಿ. ನಂತರ ಪರೀಕ್ಷೆ ಶುರುವಾಗುತ್ತದೆ.

    ಪಾಸಿಟಿವ್ ಘೊಷಿಸುವಂತಿಲ್ಲ

    ವರದಿ ಫಟಾಫಟ್ ಕೈ ಸೇರುತ್ತದೆ. ಆದರೆ, ನೆಗೆಟಿವ್ ವರದಿಯನ್ನು ಮಾತ್ರ ಪ್ರಕಟಿಸಬಹುದು. ಪಾಸಿಟಿವ್ ವರದಿಯನ್ನು ಪ್ರಕಟಿಸುವಂತಿಲ್ಲ. ಪುಣೆ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಲ್ಯಾಬ್ ಪಾಸಿಟಿವ್ ಎಂದು ದೃಢೀಕರಿಸುತ್ತದೆ. ಅದಾದ ಬಳಿಕ ಜಿಲ್ಲಾಧಿಕಾರಿ ಇದನ್ನು ಘೊಷಿಸುತ್ತಾರೆ.

    ಬರಲಿ ಎಕ್ಸ್​ಟ್ರಾಕ್ಟ್ ಯಂತ್ರ

    ಸ್ವಯಂ ಚಾಲಿತ ಆರ್​ಎನ್​ಎ ಎಕ್ಸ್​ಟ್ರಾಕ್ಟ್ ಯಂತ್ರ ಮಂಜೂರಿಗೆ ಕಿಮ್್ಸ ಆಡಳಿತ ಮಂಡಳಿ ರಾಜ್ಯ ಸರ್ಕಾರಕ್ಕೆ ಕೋರಿದೆ. ಒಂದು ವೇಳೆ ಈ ಯಂತ್ರ ಬಂದರೆ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಬಹುದು. ರಾಜ್ಯ ಸರ್ಕಾರದ ಮಂಜೂರಾತಿಗಾಗಿ ಕಾಯಲಾಗುತ್ತಿದೆ.

    ಕೋವಿಡ್ 19 ಪರೀಕ್ಷಾ ಕೇಂದ್ರ ನಮ್ಮ ಕಿಮ್ಸ್​ಗೆ ಸಿಕ್ಕಿರುವುದು ಸಂತಸ. ಸ್ವಯಂ ಚಾಲಿತ ಆರ್​ಎನ್​ಎ ಎಕ್ಸ್​ಟ್ರಾಕ್ಟ್ ಯಂತ್ರ ಮಂಜೂರಾದರೆ ಇನ್ನಷ್ಟು ಒಳ್ಳೆಯದು. ಸಚಿವ ಜಗದೀಶ ಶೆಟ್ಟರ್ ಅವರಿಗೆ ಕೋರಿದ್ದೇವೆ. ಲಭಿಸುವ ವಿಶ್ವಾಸವಿದೆ. ತಾತ್ಕಾಲಿಕವಾಗಿ ಮ್ಯಾನುವಲ್ ಕೆಲಸ ನಡೆದಿದೆ.

    -ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ನಿರ್ದೇಶಕ

    ಆಟೋ ಚಾಲಕರಿಗೆ ನೆರವು ನೀಡಿ

    ಹುಬ್ಬಳ್ಳಿ: ಲಾಕ್​ಡೌನ್​ನಿಂದಾಗಿ ಆಟೋ ಚಾಲಕರ ಬದುಕು ದುಸ್ತರವಾಗಿದ್ದು, ರಾಜ್ಯ ಸರ್ಕಾರ ಕೂಡಲೆ ಅವರ ನೆರವಿಗೆ ಧಾವಿಸಬೇಕೆಂದು ಧಾರವಾಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘ ಮನವಿ ಮಾಡಿದೆ. ಈ ಕುರಿತು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಕಳೆದ ಎರಡು ವಾರದಿಂದ ದುಡಿಮೆ ಇಲ್ಲ. ಮನೆಯಲ್ಲಿ ಕುಳಿತಿದ್ದಾರೆ. ಪ್ರಧಾನ ಮಂತ್ರಿಯವರ ಸೂಚನೆಯಂತೆ ಲಾಕ್​ಡೌನ್ ಬೆಂಬಲಿಸಿದ್ದಾರೆ. ಆದರೆ, ಅವರ ಬದುಕು ಕಷ್ಟಕರವಾಗಿದೆ. ನಿತ್ಯ ಆಟೋ ಓಡಿಸಿಯೇ ತಮ್ಮ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ ಸಾವಿರಾರು ಚಾಲಕರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಹಲವು ಕಾರ್ವಿುಕರಿಗೆ ಆರ್ಥಿಕ ನೆರವು ನೀಡಿದೆ. ಅದೇ ರೀತಿ ಆಟೋ ಚಾಲಕರಿಗೂ ಆರ್ಥಿಕ ಸಹಾಯ ಮಾಡಬೇಕು. ದಿನ ಬಳಕೆ ವಸ್ತುಗಳನ್ನು ನೀಡಬೇಕು. ಅವಳಿ ನಗರದಲ್ಲಿ ಸುಮಾರು 25 ಸಾವಿರ ಆಟೋ ಚಾಲಕರಿದ್ದು, ಅವರೆಲ್ಲರಿಗೆ ನೆರವಾಗಬೇಕೆಂದು ಸಂಘದ ಬಾಬಾಜಾನ ಮುಧೋಳ, ಬಶೀರಅಹ್ಮದ ಮುಧೋಳ, ದೇವಾನಂದ ಜಗಾಪುರ, ರಮೇಶ ಭೋಸ್ಲೆ, ಫೈರೋಜಖಾನ ಪಠಾಣ, ಮುಕ್ತಾರಹ್ಮದ ಬೆಂಗೇರಿ, ಇತರರು ಒತ್ತಾಯಿಸಿದ್ದಾರೆ.

    ಕದ್ದುಮುಚ್ಚಿ ಮದ್ಯ ಮಾರಿದರೆ ಲೈಸೆನ್ಸ್ ರದ್ದು

    ಧಾರವಾಡ: ಕೋವಿಡ್ 19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ವಿಧದ 276 ಮದ್ಯದ ಅಂಗಡಿಗಳನ್ನು ಹಾಗೂ 2 ಕೆಎಸ್​ಬಿಸಿಎಲ್ ಡಿಪೋಗಳನ್ನು ಬಂದ್ ಮಾಡಲಾಗಿದೆ. ಅಕ್ರಮವಾಗಿ ಮದ್ಯ ಸಂಗ್ರಹ, ಮಾರಾಟ ಹಾಗೂ ಕಳ್ಳಭಟ್ಟಿ ಸಾರಾಯಿ ತಯಾರಿಸುವುದು ಕಂಡುಬಂದರೆ ನವನಗರದ ಅಬಕಾರಿ ಉಪ ಆಯುಕ್ತರ ಕಚೇರಿಯ ಉಚಿತ ಸಹಾಯವಾಣಿ ಸಂಖ್ಯೆ 18004250742ಗೆ ಕರೆ ಮಾಡಲು ಇಲಾಖೆ ಕೋರಿದೆ.

    ಕೆಲ ಸನ್ನದುದಾರರು ಕದ್ದುಮುಚ್ಚಿ ಮದ್ಯ ಮಾರಾಟ, ಕಳ್ಳತನವಾಗಿದೆ ಎಂದು ಪ್ರತಿಬಿಂಬಿಸುವ ದೂರುಗಳಿವೆ. ಮಾ. 21ರಂದು ಅಂತಿಮ ದಾಸ್ತಾನಿಗೆ ಮತ್ತು ಹಾಲಿ ಸನ್ನದಿನಲ್ಲಿರುವ ದಾಸ್ತಾನಿಗೆ ತಾಳೆಯಾಗದಿದ್ದರೆ ಅಂತಹ ಸನ್ನದನ್ನು ರದ್ದುಪಡಿಸಲಾಗುವುದು. ಜಿಲ್ಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಸ್ಟಾರ್ ವೈನ್ಸ್ ಹಾಗೂ ಹುಬ್ಬಳ್ಳಿ ನಗರದ ಮೆ. ಓರಿಜನಲ್ ಬಾರ್ ರೆಸ್ಟೋರೆಂಟ್​ನ ಸನ್ನದುಗಳನ್ನು ರದ್ದುಪಡಿಸಲು ಕ್ರಮ ಜರುಗಿಸಲಾಗಿದೆ.

    ಮಾ. 21ರಿಂದ ಏ. 8ರವರೆಗೆ 142 ದಾಳಿ ನಡೆಸಿ 7 ಮೊಕದ್ದಮೆ ದಾಖಲಿಸಲಾಗಿದೆ. 5 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಇದವರೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 598.895 ಲೀ. ಮದ್ಯ, 293.570 ಲೀ. ಬಿಯರ್, 2.5 ಲೀ ನೀರು ಮಿಶ್ರಿತ ಮದ್ಯಸಾರ ಹಾಗೂ 400 ಲೀ. ಬೆಲ್ಲದ ರಸಾಯನ ಜಪ್ತಿ ಮಾಡಲಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

    ನೈಋತ್ಯ ರೈಲ್ವೆಯಲ್ಲಿ 270 ಬೋಗಿ ಐಸೋಲೇಷನ್

    ಹುಬ್ಬಳ್ಳಿ: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ನೈಋತ್ಯ ರೈಲ್ವೆ ವಲಯ ಇದುವರೆಗೆ 270 ಬೋಗಿಗಳನ್ನು ಐಸೋಲೇಷನ್ ವಾರ್ಡ್​ಗಳನ್ನಾಗಿ ಪರಿವರ್ತಿಸಿದೆ. ನೈಋತ್ಯ ರೈಲ್ವೆ ವಲಯ ಏ. 14ರವರೆಗೆ ಒಟ್ಟು 312 ಬೋಗಿಗಳನ್ನು ಐಸೋಲೇಷನ್ ವಾರ್ಡ್​ಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ. ಹುಬ್ಬಳ್ಳಿ ವರ್ಕ್​ಶಾಪ್​ನಲ್ಲಿ 76 ಬೋಗಿ, ಮೈಸೂರು ವರ್ಕ್​ಶಾಪ್​ನಲ್ಲಿ 71 ಬೋಗಿ, ಬೆಂಗಳೂರು ವಿಭಾಗದಲ್ಲಿ 61 ಬೋಗಿ, ಮೈಸೂರು ವಿಭಾಗದಲ್ಲಿ 29 ಬೋಗಿ, ಹುಬ್ಬಳ್ಳಿ ವಿಭಾಗದಲ್ಲಿ 33 ಬೋಗಿಗಳನ್ನು ಐಸೋಲೇಷನ್ ವಾರ್ಡ್​ಗಳನ್ನಾಗಿ ಪರಿವರ್ತಿಸಲಾಗಿದೆ. ಏ. 10ರಂದು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹುಬ್ಬಳ್ಳಿ ರೈಲ್ವೆ ವರ್ಕ್​ಶಾಪ್​ನಲ್ಲಿ ಐಸೋಲೇಷನ್ ಬೋಗಿಗಳನ್ನು ಪರಿಶೀಲಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts